ಮಂಡ್ಯ: ಬಿಜೆಪಿಯು ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಹಾಕದೇ ಸುಮಲತಾ ಅವರಿಗೆ ಬೆಂಬಲ ಘೋಷಿಸಿದೆ. ಆದರೆ ಈಗ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಬಿ.ಮಂಜುನಾಥ್ ಮುಂದಾಗಿದ್ದಾರೆ.
ಭಜರಂಗಸೇನೆ ರಾಜ್ಯಾಧ್ಯಕ್ಷ ಬಿ.ಮಂಜುನಾಥ್ ಅವರು ಮಂಡ್ಯ ಲೋಕಸಭಾ ಚುನಾವಣೆಗೆ ಮಂಗಳವಾರ ನಾಮಪತ್ರ ಸಲ್ಲಿಸಲಿದ್ದಾರೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವಿರುವ ಕರಪತ್ರಗಳನ್ನು ಮುದ್ರಿಸಿದ್ದು, ನಾಮಪತ್ರ ಸಲ್ಲಿಸುವ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
Advertisement
Advertisement
ಬಿ.ಮಂಜುನಾಥ್ ಅವರ ಸ್ಪರ್ಧೆಯಿಂದಾಗಿ ಬಿಜೆಪಿ ಮತಗಳು ವಿಂಗಡನೆ ಆಗುವುದರಿಂದ ಸುಮಲತಾ ಅವರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂಬ ಮಾತುಗಳು ಕೇಳ ಬರತೊಡಗಿವೆ. ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿ ಬೃಹತ್ ಸಮಾವೇಶದಲ್ಲಿ ಮಾತನಾಡಿದ್ದ ಸುಮಲತಾ ಅವರು, ಬಿಜೆಪಿಯ ಬೆಂಬಲ ಕೇಳುತ್ತೇನೆ ಹಾಗೂ ರಾಜ್ಯ ನಾಯಕರನ್ನು ಭೇಟಿ ಮಾಡುತ್ತೇನೆ ಎಂದು ತಿಳಿಸಿದ್ದರು. ಶನಿವಾರ ಸಂಜೆ ಅಭ್ಯರ್ಥಿಗಳ 5ನೇ ಪಟ್ಟಿ ಬಿಡುಗಡೆ ಮಾಡಿದ್ದ ಬಿಜೆಪಿ ನಾಯಕ ಜೆ.ಪಿ.ನಡ್ಡಾ, ಮಂಡ್ಯದಲ್ಲಿ ನಮ್ಮ ಪಕ್ಷದಿಂದ ಯಾವುದೇ ಅಭ್ಯರ್ಥಿ ಕಣಕ್ಕೆ ಇಳಿಯುತ್ತಿಲ್ಲ. ಪಕ್ಷೇತರ ಅಭ್ಯರ್ಥಿ ಸುಮಲತಾರಿಗೆ ನಾವು ಬೆಂಬಲ ನೀಡುತ್ತೇವೆ ಎಂದು ತಿಳಿಸಿದ್ದರು.