– ದುರಾತ್ಮ ನರೇಂದ್ರ ಮೋದಿ ರೈತರ ಸಾಲಮನ್ನಾ ಮಾಡ್ಲಿಲ್ಲ
– ಕಾಂಗ್ರೆಸ್ 12 ಸರ್ಜಿಕಲ್ ಸ್ಟ್ರೈಕ್ ಮಾಡಿತ್ತು
ತುಮಕೂರು: ನರೇಂದ್ರ ಮೋದಿ ನನಗಿಂತ ಚಿಕ್ಕವರು. ನಮಗೆ ದೇಶಭಕ್ತಿ ಬಗ್ಗೆ ಹೇಳುತ್ತಾರೆ. ದೇಶಭಕ್ತಿಗಾಗಿ ಬಿಜೆಪಿಯವರು ಯಾರಾದರೂ ಪ್ರಾಣ ಬಿಟ್ಟಿದ್ದಾರಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ನಗರದಲ್ಲಿ ಜೆಡಿಎಸ್ ವರಿಷ್ಠ, ತುಮಕೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಎಚ್.ಡಿ.ದೇವೇಗೌಡರ ಪರ ಪ್ರಚಾರದಲ್ಲಿ ಮಾತನಾಡಿದ ಮಾಜಿ ಸಿಎಂ, ಪ್ರಧಾನಿ ಮೋದಿ ಅವರು ಮಾತು ಎತ್ತಿದ್ರೆ ಪುಲ್ವಾಮಾ, ಬಾಲಕೋಟ್ ಎನ್ನುತ್ತಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 12 ಸರ್ಜಿಕಲ್ ಸ್ಟ್ರೈಕ್ ಮಾಡಿತ್ತು. ಈಗ ದೇಶಭಕ್ತಿ ಬಗ್ಗೆ ಮಾತನಾಡುತ್ತಾರೆ. ಸ್ವಾತಂತ್ರ್ಯಕ್ಕಾಗಿ ಸಾವಿರಾರು ಕಾಂಗ್ರೆಸ್ಸಿಗರು ಪ್ರಾಣ ತ್ಯಾಗ ಮಾಡಿದ್ದಾರೆ. ಸ್ವಾತಂತ್ರ್ಯ ತಂದು ಕೊಟ್ಟವರು ಯಾರು ಎಂದು ಪ್ರಶ್ನಿಸಿದ ಮಾಜಿ ಸಿಎಂ, ಈ ಕ್ರೆಡಿಟ್ ಕಾಂಗ್ರೆಸ್‍ಗೆ ಸಲ್ಲಬೇಕು ಎಂದರು.
Advertisement
Advertisement
ಈಗ ರಾಮ ಮಂದಿರ ನಿರ್ಮಾಣ ಮಾಡುತ್ತೇವೆ ಅಂತ ವೋಟ್ ಕೇಳುತ್ತಿದ್ದಾರೆ. ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ದಯಮಾಡಿ ನರೇಂದ್ರ ಮೋದಿ ಅವರನ್ನು ನಂಬಬೇಡಿ. ಅವರು ಮತ್ತೆ ಅಧಿಕಾರಕ್ಕೆ ಬಂದರೆ ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲು ಆಗುತ್ತದೆ ಎಂದು ಮತದಾರರಲ್ಲಿ ಮನವಿ ಮಾಡಿದರು.
Advertisement
ದುರಾತ್ಮ, ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಸಾಲಮನ್ನಾ ಮಾಡಲಿಲ್ಲ. ಮಾತು ಆರಂಭಿಸಿದರೆ 56 ಇಂಚು ಎದೆಯ ನಾಯಕ ಎನ್ನುತ್ತಾರೆ. ಕೆಲ ಪೈಲ್ವಾನರಿಗೆ 86 ಇಂಚಿನ ಇದೆ ಇರುತ್ತೆ. ಆದರೆ ಆ ಎದೆಯಲ್ಲಿ ಬಡವರ ಬಗ್ಗೆ ಕಾಳಜಿ ಇರಬೇಕು ಎಂದು ಸಿದ್ದರಾಮಯ್ಯ ಹೇಳಿದರು.
Advertisement
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಒತ್ತಾಯ ಮೇರೆಗೆ ಎಚ್.ಡಿ.ದೇವೇಗೌಡರು ಚುನಾವಣೆಗೆ ನಿಂತಿದ್ದಾರೆ. ಅವರು ರಾಜಕಾರಣದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಪ್ರಧಾನಿಯಾಗಿದ್ದಾಗ ಹಲವಾರು ಯೋಜನೆಗಳಿಗೆ ಅನುದಾನ ಕೊಟ್ಟಿದ್ದಾರೆ. ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆ ಏನು? ಮೋದಿ ಅವರು ಪ್ರಧಾನಿ ಸ್ಥಾನಕ್ಕೆ ಅಗೌರವ ತಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪ ಅವರ ಮೆದುಳು ಹಾಗೂ ನಾಲಿಗೆಗೆ ಲಿಂಕ್ ತಪ್ಪಿದೆ. ಸ್ವಾಭಿಮಾನ ಇದ್ದರೆ ರಾಜಕೀಯ ಸನ್ಯಾಸತ್ವ ತೊಗೊಳ್ಳಬೇಕು. ಕೆ.ಎಸ್.ಈಶ್ವರಪ್ಪ ಅವರು ಕುರುಬ ಸಮುದಾಯದ ಓರ್ವ ನಾಯಕನಿಗೆ ಬಿಜೆಪಿ ಟಿಕೆಟ್ ಕೊಡಿಸಲಿಲ್ಲ ಎಂದು ದೂರಿದರು.
ದೇಶದ ಹಿತದೃಷ್ಠಿಯಿಂದ, ಸಂವಿಧಾನ ರಕ್ಷಣೆಗೋಸ್ಕರ ಕೋಮುವಾದಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬಾರದು ಅಂತ ಮೈತ್ರಿ ಮಾಡಿಕೊಂಡಿದ್ದೇವೆ. ಇದರಿಂದಾಗಿ ಹಾಲಿ ಸಂಸದ ಮುದ್ದಹನುಮೇಗೌಡ ಅವರಿಗೆ ಟಿಕೆಟ್ ನೀಡಲು ಸಾಧ್ಯವಾಗಲಿಲ್ಲ. ಎರಡೂ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಎಚ್.ಡಿ.ದೇವೇಗೌಡರು ಇಲ್ಲಿ ಸ್ಪರ್ಧೆ ಮಾಡಿದರು ಎಂದು ತಿಳಿಸಿದರು.
ಕರ್ನಾಟಕದ ಏಕೈಕ ಪ್ರಧಾನಮಂತ್ರಿ ಅಂದ್ರೆ ಎಚ್.ಡಿ.ದೇವೇಗೌಡರು. ಅವರು 60 ವರ್ಷಗಳ ಕಾಲ ಸುದೀರ್ಘ ರಾಜಕಾರಣವನ್ನು ಮಾಡಿದ್ದಾರೆ. ರಾಷ್ಟ್ರದ ಸೇವೆಯನ್ನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ರೈತರ ಬದುಕು ಹಸನಾಗಬೇಕು ಅಂತ ಹೋರಾಟ ಮಾಡಿದರು. ಆದರೂ ಅವರ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಗುಡುಗಿದರು.