– ಭಾಷಣದ ವೇಳೆ ಸಿದ್ದರಾಮಯ್ಯ ಮತ್ತೆ ಎಡವಟ್ಟು
– ಡಿವಿಎಸ್ ನಿಷ್ಕ್ರಿಯ ಮಂತ್ರಿ, ಕೃಷ್ಣಭೈರೇಗೌಡ ಕೆಲಸ ಮಾಡುವ ಮಂತ್ರಿ
ಬೆಂಗಳೂರು: ಚುನಾವಣಾ ಪ್ರಚಾರ ಭಾಷಣದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮತ್ತೆ ಎಡವಟ್ಟು ಮಾಡಿಕೊಂಡಿದ್ದಾರೆ. ಬೀದರ್ ನಲ್ಲಿ ಕಳೆದ ವಾರ ನಡೆದಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎಂದು ಹೇಳಿದ್ದರು. ಆದರೆ ಇಂದು ಹಾಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಮಾಜಿ ಸಿಎಂ ಎಂದು ಕರೆಯುವ ಮೂಲಕ ಎಡವಟ್ಟು ಮಾಡಿಕೊಂಡಿದ್ದಾರೆ.
ನಗರದ ಹೇರೋಹಳ್ಳಿಯಲ್ಲಿ ಮೈತ್ರಿ ಅಭ್ಯರ್ಥಿ ಕೃಷ್ಣಭೈರೇಗೌಡ ಪರ ಚುನಾವಣೆ ಪ್ರಚಾರದಲ್ಲಿ ಮಾತನಾಡಿದ ಮಾಜಿ ಸಿಎಂ, ಭಾಷಣ ಪ್ರಾರಂಭ ಮಾಡುವಾಗ ಎಲ್ಲರ ಹೆಸರನ್ನು ಹೇಳಿದರು. ಇವತ್ತು ತುಂಬ ಕಡೆ ಪ್ರಚಾರವಿದೆ. ಹೀಗಾಗಿ ನಾನು ಕಡಿಮೆ ಮಾತನಾಡುತ್ತೇನೆ. ನನ್ನ ನಂತರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬರುತ್ತಾರೆ ಎಂದು ಬಾಯಿ ತಪ್ಪಿ ಹೇಳಿದರು. ಬಳಿಕ ಕೆಲವರು “ಮಾಜಿ ಅಲ್ಲ, ಮಾಜಿ ಅಲ್ಲ” ಎಂದು ಕೂಗಿದರು. ತಕ್ಷಣವೇ ತಪ್ಪನ್ನು ಸರಿ ಮಾಡಿಕೊಂಡ ಸಿದ್ದರಾಮಯ್ಯ ಅವರು, ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಬರುತ್ತಾರೆ ಎಂದು ತಿಳಿಸಿದರು.
Advertisement
Advertisement
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕು ಅಂತ ಒತ್ತಡವಿತ್ತು. ಆದರೆ ತುಮಕೂರು ಜನರ ಒತ್ತಾಯಕ್ಕೆ ಮಣಿದು ಅಲ್ಲಿಂದ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಹೀಗಾಗಿ ಈ ಭಾಗಕ್ಕೆ ಸೂಕ್ತ ಅಭ್ಯರ್ಥಿ ಯಾರು ಅಂತ ಹುಡುಕಾಟ ನಡೆದಿತ್ತು. ಆಗ ನಾವೆಲ್ಲರೂ ಒಮ್ಮತದಿಂದ ಕೃಷ್ಣಭೈರೇಗೌಡ ಅವರನ್ನ ಆಯ್ಕೆ ಮಾಡಿದ್ವಿ. ಕೃಷ್ಣಭೈರೇಗೌಡ ಅವರು ಉತ್ತಮ ವ್ಯಕ್ತಿ. ಅವರನ್ನು ಗೆಲ್ಲಿಸಿ ಎಂದರು.
Advertisement
ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ನಿಷ್ಕ್ರಿಯ ಮಂತ್ರಿ. ಕೃಷ್ಣಭೈರೇಗೌಡ ಕೆಲಸ ಮಾಡುವ ಮಂತ್ರಿ. ಸದಾನಂದಗೌಡ ನಿಮಗೆ ಮುಖ ತೋರಿಸಿದ್ದಾರಾ? ಅವರಿಗೆ ಮುಖ ತೋರಿಸುವ ಶಕ್ತಿ ಇಲ್ಲ. ಹೀಗಾಗಿ ಮೋದಿ ಮುಖ ನೋಡಿ, ಮತ ಹಾಕಿ ಅಂತ ಹೇಳುತ್ತಿದ್ದಾರೆ ಎಂದು ಹೇಳಿದರು.
Advertisement
ಈ ವೇಳೆ ಕಾರ್ಯಕ್ರಮಕ್ಕೆ ಸಿಎಂ ಕುಮಾರಸ್ವಾಮಿ ಆಗಮಿಸಿದರು. ತಕ್ಷಣವೇ ಸಿದ್ದರಾಮಯ್ಯ ಅವರು, ಸಮ್ಮಿಶ್ರ ಸರ್ಕಾರದ ಸಿಎಂ ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಬಂದರು ಎಂದು ಸ್ವಾಗತ ಕೋರಿದರು. ಬಳಿಕ ಭಾಷಣ ಮುಂದುವರಿಸಿ, ನಾವು ನುಡಿದಂತೆ ನಡೆದಿದ್ದೇವೆ. ಸಿಎಂ ಕುಮಾರಸ್ವಾಮಿ ಅವರು ಕೂಡ ನುಡಿದಂತೆ ನಡೆಯುತ್ತಿದ್ದಾರೆ. ನಾವು ಕೊಟ್ಟ ಎಲ್ಲಾ ಕೆಲಸ ಇಂದು ಮುಂದುವರಿಸಿದ್ದಾರೆ ಎಂದರು.