ಜಾತಿ ವಿಚಾರಕ್ಕೆ ಕೈಹಾಕಿದ್ದಕ್ಕೆ ಜನ್ರು ನಮ್ಮ ಕಪಾಳಕ್ಕೆ ಬಾರಿಸಿದ್ರು: ಡಿಕೆಶಿ

Public TV
3 Min Read
BLY DKShi

– ಬಹಿರಂಗವಾಗಿ ಕ್ಷಮೆಯಾಚಿಸಿದ ಸಚಿವರು
– ಇನ್ನು ಯಾವುದೇ ಕಾರಣಕ್ಕೆ ಜಾತಿ ವಿಚಾರದಲ್ಲಿ ಕೈ ಹಾಕಲ್ಲ

ಬಳ್ಳಾರಿ: ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರಕ್ಕೆ ಕೈಹಾಕಿದ್ವಿ. ಆದರೆ ಜನರು ನಮ್ಮ ಕಪಾಳಕ್ಕೆ ಬಾರಿಸಿದರು ಎಂದು ಬೃಹತ್ ನೀರಾವರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಹೂವಿನಹಡಗಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಸಚಿವರು, ಬಿಜೆಪಿಯವರು ಒಂದು ಧರ್ಮದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಯಾರೋ ಏನೋ ಹೇಳಿದರೂ ಅಂತ ನನ್ನ ಸೇರಿದಂತೆ ನಮ್ಮ ಪಕ್ಷದ ಕೆಲವರು ವೀರಶೈವರ ವಿಚಾರಕ್ಕೆ ಕೈ ಹಾಕಿದ್ವಿ. ಈ ಮೂಲಕ ಪ್ರತ್ಯೇಕ ಧರ್ಮ ಮಾಡಲು ತೀರ್ಮಾನ ಮಾಡಿದ್ವಿ. ಅದಕ್ಕೆ ಜನ ನಮ್ಮ ಕಪಾಳಕ್ಕೆ ಹೊಡೆದರು. ಹೀಗಾಗಿ ನಿಮಗೂ ಹಾಗೂ ರಾಜ್ಯದ ಜನರಲ್ಲಿ ಕ್ಷಮೆ ಕೇಳುತ್ತೇನೆ ಎಂದು ಹೇಳುವ ಮೂಲಕ ಮತ್ತೊಮ್ಮೆ ಕ್ಷಮೆಯಾಚಿಸಿದರು.

BLY DKShi A

ಇನ್ನೆಂದೂ ಕಾಂಗ್ರೆಸ್ ಜಾತಿ, ಧರ್ಮದ ವಿಚಾರದಲ್ಲಿ ಕೈಹಾಕುವುದಿಲ್ಲ. ನಿಮ್ಮ ಕ್ಷಮೆ ಇರಲಿ. ರಾಜಕೀಯದಲ್ಲಿ ಧರ್ಮ ಇರಬೇಕು. ಧರ್ಮದಲ್ಲಿ ರಾಜಕಾರಣ ಇರಬಾರದು ಎಂಬ ನಿರ್ಧಾರವನ್ನು ಕೈಗೊಂಡಿದ್ದೇನೆ. ಹೀಗಾಗಿ ಈ ಹಿಂದೆ ಆಗಿರುವುದನ್ನು ಮರೆತು ಎಲ್ಲರೂ ಒಟ್ಟಾಗಿ ಹೋಗಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು.

ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿಯಾಗಿದೆ. ದೇಶದಲ್ಲಿ ಜಾತ್ಯಾತೀತತೆ ತತ್ವ ಉಳಿಸಲು ರಾಜ್ಯದಲ್ಲಿ ಜೆಡಿಎಸ್ ಜೊತೆಗೆ ಸೇರಿ ಮೈತ್ರಿ ಸರ್ಕಾರ ರಚನೆ ಮಾಡಿದ್ದೇವೆ. ನಾನು ಹೋಗಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಜೊತೆಗೆ ಮಾತನಾಡಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಟ್ಟೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 22ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ. ಈ ಮೂಲಕ ಬಿಜೆಪಿ ಒಂದು ಅಂಕಿ ದಾಟದಂತೆ ಕಟ್ಟಿ ಹಾಕುತ್ತೇವೆ ಎಂದು ಹೇಳಿದರು.

hdk dkshi

ಈಶ್ವರಪ್ಪ ಅಂತ ಒಬ್ಬರಿದ್ದಾರೆ. ಅವರು ವಿರೋಧ ಪಕ್ಷ ನಾಯಕರಾಗಿದ್ದು, ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚುನಾವಣೆಯ ನಂತರ ನೆಗೆದು ಬೀಳುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ. ಅವರಿಗೆ ಸಂಸ್ಕಾರ, ಸಂಸ್ಕೃತಿ ಇದೆಯಾ ಎಂದು ಪ್ರಶ್ನಿಸಿ ಕೆ.ಎಸ್.ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

ಬಳ್ಳಾರಿ ಜನರು ಬಿಜೆಪಿ ಶಾಸಕರಾದ ಶ್ರೀರಾಮುಲು, ಕರುಣಾಕರ ರೆಡ್ಡಿ, ಜೆ.ಶಾಂತಾ ಅವರನ್ನು ಮೂರು ಬಾರಿ ಗೆಲ್ಲಿಸಿ ಕಳಿಸಿದಿರಿ. ಅವರು ಜಿಲ್ಲೆಗೆ ಯಾವ ಕೊಡುಗೆ ನೀಡಿದ್ದಾರೆ? ಈಗ ಶ್ರೀರಾಮುಲು ಅವರು ಕುಸ್ತಿ ಆಡುವುದನ್ನು ಬಿಟ್ಟು ದೇವೇಂದ್ರಪ್ಪ ಅವರನ್ನು ಕಣಕ್ಕೆ ಇಳಿಸಿದ್ದಾರೆ ಎಂದು ವ್ಯಂಗ್ಯವಾಡಿದರು.

dvg bsy

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಹೊರಾಟ ಮಾಡಿದ ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ, ಮುರುಳಿ ಮನೋಹರ್ ಜೋಷಿ ಅವರಿಗೆ ರೆಸ್ಟ್ ನೀಡಿದ್ದಾರೆ. ಅವರಂತೆ ಈಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೂ ರೆಸ್ಟ್ ನೀಡಿದ್ದಾರೆ. ಅವರು ಮುಖ್ಯಮಂತ್ರಿಯಾಗುತ್ತೇನೆ ಅಂತ ಕನಸು ಕಾಣುತ್ತಿದ್ದಾರೆ. ನಾವೇನು ಕಡ್ಲೆಕಾಯಿ ತಿನ್ನುತ್ತೇವಾ? ಈ ರಾಜ್ಯದಲ್ಲಿ ಇನ್ನೂ ಐದು ವರ್ಷ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಹೇಳಿದರು.

BJP 1

ಡಿಕೆ ಶಿವಕುಮಾರ್ ಹೇಳಿದ್ದು ಏನು?
2018ರ ಬಳ್ಳಾರಿ ಲೋಕಸಭಾ ಉಪಚುನಾವಣೆಯ ಸಮಯದಲ್ಲಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಶರನ್ನವರಾತ್ರಿ ಅಂಗವಾಗಿ ರಂಭಾಪುರಿ ಶ್ರೀಗಳ ನೇತೃತ್ವದಲ್ಲಿ ನಡೆದ ಧರ್ಮಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಿಕೆ ಶಿವಕುಮಾರ್ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದರು. ನಮ್ಮ ಸರ್ಕಾರದಲ್ಲಿ ನಾವು ದೊಡ್ಡ ತಪ್ಪನ್ನು ಮಾಡಿದ್ದೇವೆ. ಸರ್ಕಾರದವರು, ರಾಜಕೀಯದವರು ಧರ್ಮದ ವಿಚಾರದಲ್ಲಿ ಜಾತಿಯ ವಿಚಾರದಲ್ಲಿ ಕೈ ಹಾಕಬಾರದು. ನಮ್ಮ ಸರ್ಕಾರದಿಂದ ದೊಡ್ಡ ಅಪರಾಧವಾಗಿದೆ. ನಾನೂ ಸಹ ಆ ಸರ್ಕಾರದಲ್ಲಿ ಮಂತ್ರಿಯಾಗಿದ್ದೆ. ನಮ್ಮ ಬೇರೆ ಸಚಿವರು ವಿಭಿನ್ನವಾಗಿ ಮಾತನಾಡಿದರು. ಆದ್ರೆ ಸರ್ಕಾರದ ತೀರ್ಮಾನ ಆ ಸಂದರ್ಭದಲ್ಲಿ ಬೇಕಾದಷ್ಟು ಅಲ್ಲೋಲ ಕಲ್ಲೋಲ ಸೃಷ್ಟಿಯಾಯ್ತು. ರಾಜಕೀಯದಲ್ಲಿ ಅನೇಕ ವಿಭಿನ್ನವಾದ ಹೇಳಿಕೆಗಳನ್ನು ನಾವು ನೋಡಿದ್ದೇವೆ. ಯಾವುದೇ ಸರ್ಕಾರ ಧರ್ಮದಲ್ಲಿ ಕೈ ಹಾಕಬಾರದು ಎನ್ನೋದಕ್ಕೆ ವಿಧಾನಸಭಾ ಚುನಾವಣೆಯಲ್ಲಿ ನಡೆದ ಜನಾಭಿಪ್ರಾಯವೇ ಸಾಕ್ಷಿ ಎಂದಿದ್ದರು.

Share This Article
Leave a Comment

Leave a Reply

Your email address will not be published. Required fields are marked *