– ವಿ.ಮುನಿಯಪ್ಪ ಬೆಂಬಲಿಗರ ಮನವೊಲಿಸಿದ ಸಚಿವರು
– ರಾಹುಲ್ ಗಾಂಧಿ ಹೇಳಿದ್ದಕ್ಕೆ ವಿಧಿಯಿಲ್ಲದೆ ಒಂದಾಗಿದ್ದೇವೆ
– ಆಗಿದ್ದನ್ನು ಮರೆತು ಕೆ.ಎಚ್.ಮುನಿಯಪ್ಪನವರನ್ನು ಗೆಲ್ಲಿಸೋಣ
ಚಿಕ್ಕಬಳ್ಳಾಪುರ: ನಾನು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಅವರು ಜೊತೆಗೆ ಬಡಿದಾಡಿದಷ್ಟು ನೀವು ಜಗಳ ಮಾಡಿಲ್ಲ. ಈ ಹಿಂದೆ ಆಗಿದ್ದನ್ನು ಮರೆತು ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರನ್ನು ಗೆಲ್ಲಿಸೋಣ ಎಂದು ಬೃಹತ್ ನೀರಾವರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಶಾಸಕ ವಿ.ಮುನಿಯಪ್ಪ ಅವರ ಬೆಂಬಲಿಗರ ಮನವೊಲಿಸಿದ್ದಾರೆ.
ಶಿಡ್ಲಘಟ್ಟ ಕಾಂಗ್ರೆಸ್ ಭವನದಲ್ಲಿ ಮಾತನಾಡಿದ ಸಚಿವರು, ಪಕ್ಷದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇರುವುದು ಸಹಜ. ನೀವು ಇಲ್ಲ ಅಂದ್ರೆ ವಿ.ಮುನಿಯಪ್ಪ, ನಾನು, ಕೆ.ಎಚ್.ಮುನಿಯಪ್ಪ ಯಾರು ಇಲ್ಲವಾಗುತ್ತೇವೆ. ನಾವೆಲ್ಲರೂ ಒಂದಾಗಿ ಹೋಗಬೇಕು. ಈ ಹಿಂದೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ ಏನೆಲ್ಲ ನಡೆಯಿತು ಅಂತ ನಿಮಗೆ ಗೊತ್ತಿದೆ. ಅವರು ನಾವು ಬಡೆದಾಡಿಕೊಂಡು 35ರಿಂದ 40 ವರ್ಷ ದೂರ ಉಳಿದ್ವಿ. ಆದರೆ ಈಗ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಹೇಳಿದ್ದಕ್ಕೆ ಕಾಂಗ್ರೆಸ್ ಮತ್ತು ದೇಶ ಉಳಿಸಲು ಜೆಡಿಎಸ್ ಜೊತೆಗೆ ಒಂದಾಗಿದ್ದೇವೆ ಎಂದು ಹೇಳಿದರು. ಇದನ್ನು ಓದಿ : ಕಾರ್ಯಕರ್ತರ ಕಿತ್ತಾಟದ ನಡುವೆಯೂ ಕೋಲಾರ ನಾಯಕರ ಮುನಿಸಿಗೆ ತೇಪೆ ಹಚ್ಚಿ ಡಿಕೆಶಿ ಸಂಧಾನ!
Advertisement
Advertisement
ಈ ಹಿಂದೆ ಆಗಿದ್ದನ್ನು ಮರೆತು ಸಂಸದ, ಕೋಲಾರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರನ್ನು ಗೆಲ್ಲಿಸೋಣ. ಯಾವ ಚುನಾವಣೆ ಯಾವಾಗ ಬರುತ್ತದೆ ಅಂತ ಗೊತ್ತಿಲ್ಲ. ಸಚಿವ ಕೃಷ್ಣಭೈರೇಗೌಡ ಅವರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಗೆಲ್ಲುತ್ತಾರೆ ಎನ್ನುವ ವಿಶ್ವಾಸವಿದೆ. ಹೀಗಾಗಿ ಶಿಡ್ಲಘಟ್ಟ ವಿ.ಮುನಿಯಪ್ಪ ಅವರನ್ನು ಮಂತ್ರಿ ಮಾಡುತ್ತೇವೆ ಎಂದು ಭರವಸೆ ನೀಡಿದರು.
Advertisement
ಕಾಂಗ್ರೆಸ್-ಜೆಡಿಎಸ್ ಮೈತ್ರಿ ನಿರ್ಧಾರವನ್ನು ಉತ್ತರ ಕರ್ನಾಟಕ ಭಾಗದ ಎರಡೂ ಪಕ್ಷಗಳ ಕಾರ್ಯಕರ್ತರು ಸ್ವಾಗತಿಸಿದ್ದಾರೆ. ಆದರೆ ಮೈಸೂರು ಕರ್ನಾಟಕ ಭಾಗದಲ್ಲಿ ಭಿನ್ನಾಭಿಪ್ರಾಯ ಸಹಜವಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಸಂಸದರು ಹಾಗೂ ಶಾಸಕರು ಅನುದಾನ ಕೊಡಬೇಕು. ಒಂದು ವೇಳೆ ಅನುದಾನ ನೀಡದಿದ್ದಾಗ ಈ ತರಹದ ಭಿನ್ನಾಭಿಪ್ರಾಯ ಬರುವುದು ಸಹಜ ಎಂದು ಪರೋಕ್ಷವಾಗಿ ಕೆ.ಎಸ್.ಮುನಿಯಪ್ಪ ಅವರಿಗೆ ಟಾಂಗ್ ಕೊಟ್ಟರು.
Advertisement
ನಮ್ಮ ಕ್ಷೇತ್ರದಲ್ಲೂ ಅನುದಾನ ವಿಚಾರವಾಗಿ ಸಮಸ್ಯೆಯಾಗಿತ್ತು. ನಮ್ಮ ಕ್ಷೇತ್ರದಲ್ಲೂ ಓರ್ವ ಹೆಣ್ಣು ಮಗಳನ್ನು ಕರೆದುಕೊಂಡು ಬಂದು ಗೆಲ್ಲಿಸಿದ್ದೆ. ಆದರೆ ಅವರು ನನ್ನ ಬಿಟ್ಟು ಏನೋ ಮಾಡುವುದಕ್ಕೆ ಹೋದರು. ಅದಕ್ಕೆ ನಡಿಯವ್ವ ಅಂತ ಪ್ಯಾಕ್ ಮಾಡಿ ಕಳಿಸಿಕೊಟ್ಟೆ ಎಂದು ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ರಮೇಶ್ ಗೌಡ ವಿರುದ್ಧ ಗುಡುಗಿದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯಲ್ಲಿ ರಾಜ್ಯದ 20ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಸೇರಿದಂತೆ ಅನೇಕ ನಾಯಕರು ಮೈತ್ರಿಯಲ್ಲಿ ಬಿರುಕು ತರುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಏನೇ ಭಾಷಣ ಮಾಡಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.