ಗಾಂಧಿನಗರ: ನಟ, ಹಾಲಿ ಸಂಸದ ಪರೇಶ್ ರಾವಲ್ ಬದಲಾಗಿ ಹಸ್ಮುಖ್ ಎಸ್. ಪಟೇಲ್ ಅವರನ್ನು ಗುಜರಾತ್‍ನ ಅಹಮದಾಬಾದ್ ಪೂರ್ವ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯು ಕಣಕ್ಕೆ ಇಳಿಸಿದೆ.
ಹಸ್ಮುಖ್ ಎಸ್ ಪಟೇಲ್ ಅವರ ಹೆಸರನ್ನು ಬಿಜೆಪಿ ಹೈಕಮಾಂಡ್ ಬುಧವಾರ ಘೋಷಣೆ ಮಾಡಿದೆ. ಎಚ್.ಎಸ್.ಪಟೇಲ್ ಅವರು ಗುಜರಾತ್‍ನ ಅಮ್ರಾವಾಡಿ ವಿಧಾನಸಭಾ ಕ್ಷೇತ್ರದಿಂದ ಅವರು 2012 ಹಾಗೂ 2017ರಲ್ಲಿ ಆಯ್ಕೆಯಾಗಿದ್ದರು.
ಪರೇಶ್ ರಾವಲ್ ಅವರು 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಜಯಗಳಿಸಿದ್ದರು. ಆದರೆ ಈ ಬಾರಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಹೀಗಾಗಿ ಅವರ ಬದಲಾಗಿ ಎಚ್.ಎಸ್.ಪಟೇಲ್ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ.
ನಾನು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಐದು ತಿಂಗಳ ಹಿಂದೆಯೇ ತಿಳಿಸಿದ್ದೆ. ಇದು ಪಕ್ಷದ ಅಂತಿಮ ನಿರ್ಧಾರ ಕೂಡ ಆಗಿದೆ ಎಂದು ಪರೇಶ್ ರಾವಲ್ ತಿಳಿಸಿದ್ದಾರೆ.
ಈ ಹಿಂದೆ ಟ್ವೀಟ್ ಮೂಲಕ ಚುನಾವಣೆ ಬಗ್ಗೆ ಹೇಳಿಕೊಂಡಿದ್ದ ಪರೇಶ್ ಅವರು, ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ಪ್ರಧಾನಿ ನರೇಂದ್ರ ಮೋದಿ ಅವರ ಗೆಲುವಿಗಾಗಿ ನಾನು ಶ್ರಮಿಸುತ್ತೇನೆ. ಆದರೆ ಪಕ್ಷ ಈ ಬಾರಿ ಟಿಕೆಟ್ ನೀಡಿದರೂ ಸ್ಪರ್ಧೆ ಮಾಡುವುದಿಲ್ಲ. ರಾಜಕೀಯ ಜೀವನದಲ್ಲಿ ನನಗೆ ಆಸಕ್ತಿಯಿಲ್ಲ ಎಂದು ತಿಳಿಸಿದ್ದರು.