– ಉರ್ದು ಭಾಷೆಯಲ್ಲಿ ಕರ ಪತ್ರ ಹಂಚಿದ ಬಚ್ಚೇಗೌಡ
ಬೆಂಗಳೂರು: ಕಾಶ್ಮೀರದಲ್ಲಿ ಮುಸ್ಲಿಂ ಸಮುದಾಯದ ಮತದಾರರನ್ನು ಸೆಳೆಯಲು ಬಿಜೆಪಿ ಕೇಸರಿ ಬಿಟ್ಟು, ಹಸಿರು ಬಣ್ಣದ ಮೊರೆ ಹೋಗಿದೆ. ಕರ್ನಾಟಕದಲ್ಲಿ ಅಲ್ಪಸಂಖ್ಯಾತರನ್ನು ಒಲೈಸಲು ಬಿಜೆಪಿ ಕರ ಪತ್ರಗಳ ಪ್ಲಾನ್ ರೂಪಿಸಿದೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಅವರು, ಮುಸ್ಲಿಂ ಮತದಾರರನ್ನು ಸೆಳೆಯಲು ಉರ್ದು ಭಾಷೆಯಲ್ಲಿ ಕರಪತ್ರ ಹಂಚುತ್ತಿದ್ದಾರೆ. ಈ ಕರಪತ್ರದಲ್ಲಿ ಅಭ್ಯರ್ಥಿ ಬಚ್ಚೇಗೌಡ ಹಾಗೂ ಕಮಲದ ಚಿಹ್ನೆ ಹಾಕಲಾಗಿದೆ. ಇಂಗ್ಲಿಷ್ ಸಂಖ್ಯೆಯನ್ನು ಹೊರತುಪಡಿಸಿ ಎಲ್ಲ ಮಾಹಿತಿಯನ್ನು ಉರ್ದು ಭಾಷೆಯಲ್ಲಿಯೇ ನೀಡಲಾಗಿದೆ.
2014ರ ಲೋಕಸಭಾ ಚುನಾವಣೆಯಲ್ಲಿ ಸಂಸದ ವೀರಪ್ಪ ಮೊಯ್ಲಿ ವಿರುದ್ಧ ಬಿ.ಎನ್.ಬಚ್ಚೇಗೌಡ ಅವರು ಕೇವಲ 9,520 ಮತಗಳಿಂದ ಸೋತಿದ್ದರು. ಹೀಗಾಗಿ ಈ ಬಾರಿ ಮುಸ್ಲಿಂ ಮತದಾರರ ವೋಟ್‍ಗಳ ಮೇಲೆ ಗಮನ ಹರಿಸಿರುವ ಬಚ್ಚೇಗೌಡ ಅವರು ಕರ ಪತ್ರಗಳನ್ನು ಉರ್ದು ಭಾಷೆಯಲ್ಲಿ ಮುದ್ರಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.