ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಿಂದ ಸ್ಪರ್ಧೆ ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭ ಮಾಡಲಾಗಿದ್ದು, ‘ನೀವು ಬಂದ್ರೆ 28ಕ್ಕೆ 28’ ಎಂಬ ಹ್ಯಾಶ್ ಟ್ಯಾಗ್ ಬಳಸಿ ರಾಷ್ಟ್ರಮಟ್ಟದಲ್ಲಿ ಅಭಿಯಾನ ಆರಂಭಿಸಲಾಗಿದೆ.
ಬೆಂಗಳೂರಿನ ದಕ್ಷಿಣ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಈ ಅಭಿಯಾನ ಆರಂಭ ಮಾಡಲಾಗಿದೆ. ಆದರೆ ಬಿಜೆಪಿ ರಾಜ್ಯ ನಾಯಕರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ತೇಜಸ್ವಿನಿ ಅನಂತ್‍ಕುಮಾರ್ ಅವರ ಹೆಸರು ಅಂತಿಮಗೊಳಿಸಿ ಕಳುಹಿಸಿದ್ದಾರೆ. ಹೈಕಮಾಂಡ್ ಹಂತದಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಘೋಷಣೆ ಆಗಬೇಕಿದೆ.
ಪ್ರಮುಖವಾಗಿ ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದಲ್ಲಿ ಅಭಿಯಾನ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಇಂತಹ ಅಭಿಯಾನ ಏಕೆ ಎಂಬ ಅನುಮಾನ ಮೂಡಲು ಕಾರಣವಾಗಿದೆ. ಅನಗತ್ಯವಾಗಿ ಕ್ಷೇತ್ರದಲ್ಲಿ ಗೊಂದಲ ಮೂಡಿಸಲು ಇಂತಹ ಅಭಿಯಾನ ಆರಂಭ ಮಾಡಲಾಗಿದೆಯೇ ಅಥವಾ ಹೈಕಮಾಂಡ್ ಚುನಾವಣೆಗೆ ಹೊಸ ನಾಯಕರ ಹೆಸರು ಚಾಲ್ತಿ ಇದೆಯಾ ಎಂಬ ಚರ್ಚೆಗಳು ಕೇಳಿ ಬಂದಿದೆ.
ಇತ್ತ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ತೇಜಸ್ವಿನಿ ಅನಂತ್‍ಕುಮಾರ್ ಅವರ ಹೆಸರನ್ನು ಶಿಫಾರಸ್ಸು ಮಾಡಿದ್ದು, ಇಂದು ಹೈಕಮಾಂಡ್ ಅಧಿಕೃತ ಘೋಷಣೆ ಮಾಡಲಾಗುತ್ತದೆ. ಯಾವುದೇ ರೀತಿಯ ಗೊಂದಲಗಳು ಪಕ್ಷದಲ್ಲಿ ಇಲ್ಲ ಎಂದಿದ್ದಾರೆ. ಅಲ್ಲದೇ ಕೋರ್ ಕಮಿಟಿ ಸಭೆ ಕೂಡ ತೇಜಸ್ವಿನಿ ಅನಂತ್‍ಕುಮಾರ್ ಅವರನ್ನೇ ಶಿಫಾರಸ್ಸು ಮಾಡಿರುವುದಿರಿಂದ ಹೈಕಮಾಂಡ್ ನಿರ್ಧಾರ ಮೇಲೆ ಹೆಚ್ಚಿನ ಕುತೂಹಲ ಮೂಡಿದೆ.