ಬೆಳಗಾವಿ: ನಿಖಿಲ್ ಎಲ್ಲಿದೀಯಪ್ಪಾ ಅಂತ ಕೇಳಬೇಡಿ, ಹುಡುಕಬೇಡಿ. ಯಾಕಂದ್ರೆ ನಿಖಿಲ್ ಸಿಕ್ಕಿದ್ದಾನೆ ಎಂದು ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗ್ಡೆ ವ್ಯಂಗವಾಡಿದ್ದಾರೆ.
ಇಲ್ಲಿನ ಕಿತ್ತೂರು ನಗರದಲ್ಲಿ ಇಂದು ಸಂಜೆ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಕೇಂದ್ರ ಸಚಿವರು, ಮಂಡ್ಯದಲ್ಲಿ ಕಾಂಗ್ರೆಸ್-ಮೈತ್ರಿ ನಾಯಕರು ಕಾರ್ಯಕರ್ತರಿಗೆ ಟಿಶರ್ಟ್ ಕೊಟ್ಟಿದ್ದಾರೆ. ಅದರ ಮೇಲೆ ನಾನು ನಿಖಿಲ್ ಅಂತ ಬರೆದಿದ್ದಾರೆ. ಟಿಶರ್ಟ್ ಅಷ್ಟೇ ಅಲ್ಲದೇ ಮದ್ಯದ ಬಾಟಲ್‍ಗಳನ್ನು ಕೂಡ ಹಂಚಿದ್ದಾರೆ. ಹೀಗಾಗಿ ಟಿಶರ್ಟ್ ಹಾಕಿಕೊಂಡಿದ್ದ ಒಬ್ಬ ಯುವಕ ಎಣ್ಣೆ ಹೊಡೆದು, ಫುಲ್ ಟೈಟ್ ಆಗಿ ದಾರಿಯಲ್ಲಿ ಬಿದ್ದಿದ್ದ. ಪತ್ರಕರ್ತರೊಬ್ಬರು ಅವನ ಫೋಟೋವನ್ನು ತೆಗೆದು, ಎಲ್ಲರಿಗೂ ಕಳುಹಿಸಿ ನಿಖಿಲ್ ಸಿಕ್ಕಿದ್ದಾನೆ ಅಂತ ಮಾಹಿತಿ ಮುಟ್ಟಿಸಿದ್ದಾರೆ ಎಂದು ಹೇಳಿದರು.
ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗ್ಡೆ ಅವರ ಪ್ರಚಾರ ಭಾಷಣವನ್ನು ಸಭೆಯಲ್ಲಿದ್ದ ಕೆಲವರು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಬಳಿಕ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ನಟ, ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಟನೆಯ `ಜಾಗ್ವಾರ್’ ಚಿತ್ರದ ಆಡಿಯೋ ಸಮಾರಂಭ ನಡೆಸಿತ್ತು. ಆಗ ಸಿಎಂ ಕುಮಾರಸ್ವಾಮಿ ಅವರು, `ನಿಖಿಲ್ ಎಲ್ಲಿದೀಯಪ್ಪಾ’ ಎಂದು ಹೇಳಿದ್ದರು. ಈ ಡೈಲಾಗ್ ಲೋಕಸಭಾ ಚುನಾವಣೆ ಕಾವೇರುತ್ತಿದ್ದಂತೆ ಫುಲ್ ವೈರಲ್ ಆಗಿದ್ದು, ಅಂತರ್ಜಾಲ ಲೋಕವನ್ನು ಆವರಿಸಿ ಕೊಂಡಿದೆ.
ಸಾಮಾಜಿಕ ಜಾಲತಾಣದಲ್ಲಿ, ಕಾಲೇಜ್ ಫಂಕ್ಷನ್‍ಗಳಲ್ಲಿ, ಅಲ್ಲದೆ ಐಪಿಎಲ್ ಕ್ರಿಕೆಟ್‍ನಲ್ಲೂ ಇದೇ ಡೈಲಾಗ್ ಕೇಳಿ ಬಂದಿತ್ತು. ಅಷ್ಟೇ ಅಲ್ಲದೆ ವಿದೇಶಗಳಲ್ಲೂ ನಿಖಿಲ್ ಎಲ್ಲಿದೀಯಪ್ಪಾ ಡೈಲಾಗ್ ಭಾರೀ ಸದ್ದು ಮಾಡಿದೆ. ಹೀಗಾಗಿ ನಿಖಿಲ್ ಎಲ್ಲಿದೀಯಪ್ಪಾ ಸಿನಿಮಾ ಟೈಟಲ್‍ಗೆ ಈಗ ಭರ್ಜರಿ ಬೇಡಿಕೆ ಶುರುವಾಗಿದ್ದು, ಚಿತ್ರತಂಡಗಳು ಈ ಟೈಟಲ್ ಪಡೆಯಲು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಾಕಷ್ಟು ಅರ್ಜಿಗಳನ್ನ ಸಲ್ಲಿಸಿವೆ. ಆದರೆ ಇದು ರಾಜಕೀಯಕ್ಕೆ ಸಂಬಂಧಿಸಿದ ವಿಚಾರವಾಗಿದ್ದು, ಟೈಟಲ್ ಕೊಡಲು ಫಿಲ್ಮ್ ಚೇಂಬರ್ ನಿರಾಕರಿಸಿದೆ ಎಂದು ಎನ್ನಲಾಗುತ್ತಿದೆ.