ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬೆಂಗಳೂರಿನ ದಕ್ಷಿಣ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದ್ದಾರೆ.
ನಗರದ ಬನಶಂಕರಿಗೆ ಅಮಿತ್ ಶಾ ಅವರು ರಾತ್ರಿ 9 ಗಂಟೆಗೆ ಆಗಮಿಸಿದಾಗ ಬಿಜೆಪಿ ಕಾರ್ಯಕರ್ತರು ಮೊಬೈಲ್ ಲೈಟ್ ಆನ್ ಮಾಡಿ ಅವರನ್ನು ಸ್ವಾಗತಿಸಿದರು. ಅಮಿತ್ ಶಾ ಮತಯಾಚನೆಯ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪ, ಆರ್.ಅಶೋಕ್, ವಿ.ಸೋಮಣ್ಣ, ಅಭ್ಯರ್ಥಿಗಳಾದ ತೇಜಸ್ವಿ ಸೂರ್ಯ ಮತ್ತು ಬೆಂಗಳೂರು ಉತ್ತರ ಕ್ಷೇತ್ರದ ಅಶ್ವಥ್‍ನಾರಾಯಣ ವಾಹನದ ವೇದಿಕೆ ಮೇಲೆ ನಿಂತಿದ್ದರು.
ತೇಜಸ್ವಿನಿ ಅನಂತ್‍ಕುಮಾರ್ ವಾಹನ ಏರಿದ ಕೂಡಲೇ ಸೋಮಣ್ಣ ಅವರನ್ನು ಹಿಂದಕ್ಕೆ ಕಳುಹಿಸಿ ಯಡಿಯೂರಪ್ಪ ಪಕ್ಕದಲ್ಲೇ ತೇಜಸ್ವಿನಿ ಅನಂತ್‍ಕುಮಾರ್ ಅವರನ್ನು ಅಮಿತ್ ಶಾ ನಿಲ್ಲಿಸಿ ಮತ ಯಾಚನೆ ಮಾಡಿದರು. ತೆರೆದ ವಾಹನದಲ್ಲಿ ಸಂಚರಿಸುತ್ತಿದ್ದಾಗ ಕಾರ್ಯಕರ್ತರು “ಮೋದಿ ಮೋದಿ” ಘೋಷಣೆ ಕೂಗಿ ಬೆಂಬಲಿಸುತ್ತಿದ್ದರು.
ರೋಡ್ ಶೋ ಹಿನ್ನೆಲೆಯಲ್ಲಿ ಬನಶಂಕರಿ ಬಸ್ ನಿಲ್ದಾಣದಿಂದ ಜೆಪಿ ನಗರ ಸಿಗ್ನಲ್ ವರೆಗಿನ ವಾಹನ ಸಂಚಾರವನ್ನು ಬಂದ್ ಮಾಡಲಾಗಿತ್ತು.