ನವದೆಹಲಿ: ಲೋಕಸಭಾ ಚುನಾವಣೆಯ 6ನೇ ಹಂತದ ಮತದಾನ 7 ರಾಜ್ಯಗಳ 59 ಕ್ಷೇತ್ರಗಳಿಗೆ ಭಾನುವಾರ ನಡೆಯಲಿದೆ. ಚುನಾವಣಾ ಆಯೋಗ ಅಗತ್ಯ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಒಟ್ಟು 59 ಕ್ಷೇತ್ರಗಳಿಗೆ ಅಂದರೆ ಉತ್ತರಪ್ರದೇಶದ 14, ಹರಿಯಾಣ 10, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಬಿಹಾರದಲ್ಲಿ ತಲಾ 8, ದೆಹಲಿಯ 7 ಹಾಗೂ ಜಾರ್ಖಂಡ್‍ನ 4 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
6ನೇ ಹಂತದ ಮತದಾನದಲ್ಲಿ ದೇಶದ ಘಟಾನುಘಟಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪ್ರಮುಖವಾಗಿ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ದೆಹಲಿಯ 7 ಕ್ಷೇತ್ರಗಳಲ್ಲಿ ಗೆದ್ದು ಬೀಗಿತ್ತು. ಈ ಬಾರಿ ಆಪ್ ಹಾಗೂ ಕಾಂಗ್ರೆಸ್ ದೆಹಲಿಯಲ್ಲಿ ಬಿಜೆಪಿಗೆ ಪ್ರಬಲ ಪೈಪೋಟಿ ನೀಡುತ್ತಿವೆ. ಈ ಹಿನ್ನೆಲೆಯಲ್ಲಿ ದೆಹಲಿಯ ಚುನಾವಣೆ ಸಾಕಷ್ಟು ಕುತೂಹಲ ಮೂಡಿಸಿತ್ತು.
ಚುನಾವಣಾಯ ಸ್ವರ್ಧೆ ಕಣದಲ್ಲಿ ದಿಗ್ವಿಜಯ್ ಸಿಂಗ್, ಸಾಧ್ವಿ ಪ್ರಜ್ಞಾಸಿಂಗ್, ಶೀಲಾ ದೀಕ್ಷಿತ್, ಗೌತಮ್ ಗಂಭೀರ್, ಅಖಿಲೇಶ್ ಯಾದವ್, ಜ್ಯೋತಿರಾದಿತ್ಯ ಸಿಂಧಿಯಾ, ಕೇಂದ್ರ ಸಚಿವರಾದ ಮನೇಕಾ ಗಾಂಧಿ, ಡಾ.ಹರ್ಷವರ್ಧನ್, ರಾಧಾ ಮೋಹನ್ ಸಿಂಗ್, ನರೇಂದ್ರ ಸಿಂಗ್ ತೋಮರ್ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.
ಇತ್ತ ಮೇ 19ಕ್ಕೆ ನಡೆಯಲಿರುವ 7ನೇ ಹಂತದ ಪ್ರಚಾರ ಭರಾಟೆ ಜೋರಾಗಿದೆ. ಮೇ 19ರ ಮತದಾನ ಪ್ರಕ್ರಿಯೆಯೊಂದಿಗೆ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಮೇ 23ಕ್ಕೆ ಫಲಿತಾಂಶ ಲಭಿಸಲಿದೆ.