– ನಾನು ಯಾರೆಂದು ಹೇಳುವ ಸಮಯ ಬಂದಿದೆ
– ರಾಜಕೀಯದಲ್ಲಿ ನನಗೆ ಎಬಿಸಿಡಿಯೂ ಗೊತ್ತಿಲ್ಲ
– ಜನರ ಅಭಿಮಾನಕ್ಕೆ ಮಣಿದು ಸ್ಪರ್ಧೆಗೆ ಒಪ್ಪಿಕೊಂಡೆ
– ಕಾಂಗ್ರೆಸ್-ಜೆಡಿಎಸ್‍ಗೆ ತಿರುಗೇಟು ಕೊಟ್ಟ ಸುಮಲತಾ
ಮಂಡ್ಯ: ನಾನು ಸ್ಪರ್ಧಿಸುತ್ತೇನೆ ಎಂದು ಹೇಳಿದಾಗ ಮಾತುಗಳ ಬಾಣ ಬಿಡಲು ಆರಂಭಿಸಿದರು. ನಾನು ಅಂತಹ ಮಾತುಗಳಿಗೆ ಉತ್ತರ ಕೊಡುವುದಿಲ್ಲ. ಅವರ ಮಾತುಗಳಿಗೆ ಮತದಾನದ ದಿನ ನೀವು ಉತ್ತರವನ್ನು ನೀಡಬೇಕು ಎಂದು ಸುಮಲತಾ ಹೇಳಿದ್ದಾರೆ.
ನಾಮಪತ್ರ ಸಲ್ಲಿಸಿ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಮಂಡ್ಯದ ಮೂಲೆ ಮೂಲೆಗೂ ಹೋಗಿ ಜನರನ್ನು ಕೇಳಿದೆ. ನಾನು ರಾಜಕೀಯಕ್ಕೆ ಬರಬಹುದಾ? ಲೋಕಸಭೆಗೆ ನಿಲ್ಲಬಹುದಾ ಎಂದು ಕೇಳಿ ಅಭಿಪ್ರಾಯ ಕಲೆ ಹಾಕಿದೆ. ನೀವು ಯಾವುದೇ ಪಕ್ಷ, ಪಕ್ಷೇತರರಾಗಿ ನಿಂತರೂ ಪರವಾಗಿಲ್ಲ, ಅಂಬರೀಶ್ ಅಣ್ಣನನ್ನ ನೋಡಿ ವೋಟ್ ಹಾಕುತ್ತೇವೆ ಎಂದು ಜಿಲ್ಲೆಯ ಜನತೆ ಹೇಳಿದರು. ಈ ಕಾರಣಕ್ಕೆ ನಾನು ನಿಮ್ಮ ಮುಂದೆ ನಿಂತಿದ್ದೇನೆ ಎಂದು ಹೇಳಿದರು. ಇದನ್ನು ಓದಿ : ಮೈಯಲ್ಲಿರುವ ರಕ್ತವನ್ನ ತೆಗೆದು ನಿಮ್ಮ ಕಾಲು ತೊಳೆದ್ರೂ ಕಡಿಮೆನೇ: ನಟ ದರ್ಶನ್
Advertisement
Advertisement
ರಾಜಕೀಯಕ್ಕೆ ಬಂದು ಹೆಸರು ಮಾಡುವ ಆಸೆ ನನಗಿರಲಿಲ್ಲ. ಐದಾರು ಭಾಷೆಗಳಲ್ಲಿ 200 ಚಿತ್ರಗಳನ್ನ ಮಾಡಿದ್ದೇನೆ. ಇವತ್ತಿನ ದಿನ ನನ್ನನ್ನ ನಾನು ಪರಿಚಯ ಮಾಡಿಕೊಳ್ಳಬೇಕು. 40 ವರ್ಷಗಳು ಚಿತ್ರರಂಗದಲ್ಲಿದ್ದೆ. 27 ವರ್ಷಗಳ ಕಾಲ ನಿಮ್ಮ ಅಂಬರೀಶ್ ಅಣ್ಣನ ಧರ್ಮ ಪತ್ನಿಯಾಗಿದ್ದೆ. ಯಾರು ನಾನು ಎನ್ನುವ ಕುರಿತು ಅಭಿಪ್ರಾಯ ಹಂಚಿಕೊಳ್ಳುವ ಸಮಯ ಬಂದಿದೆ. ನಾನು ಮಳವಳ್ಳಿ ಹುಚ್ಚೇಗೌಡರ ಸೊಸೆ, ಈ ಮಣ್ಣಿನ ಸೊಸೆ, ಅಂಬರೀಶ್ ಪತ್ನಿ ಮಂಡ್ಯದ ಹೆಣ್ಣು ಮಗಳು. ಈ ಮಣ್ಣಿನ ಮಗ ಅಭಿಷೇಕ್ ತಾಯಿ ಎಂದು ತಿಳಿಸಿದರು. ಇದನ್ನು ಓದಿ : ನಾವು ಮಾಡೋದು ತಪ್ಪು ಅಂದ್ರೆ ಆ ತಪ್ಪನ್ನೇ ಮಾಡ್ತೀವಿ – ನಮ್ ಬಗ್ಗೆ ಕೆಟ್ಟದಾಗಿ ಮಾತನಾಡೋದು ಬಿಡಿ: ಯಶ್
Advertisement
ನಾನ್ಯಾರು ಎಂದು ಕೇಳುವವರಿಗೆ ನೀವು ಉತ್ತರ ಕೊಟ್ಟಿದ್ದೀರಿ. ಜೀವನದಲ್ಲಿ ಯಾವ ದಿನ ಬರಬಾರದೆಂದು ಅಂದುಕೊಂಡಿದ್ದೇನೋ ಆ ದಿನ ಬಂದಿತ್ತು. ನಾನು ಕಳೆದ ಮೂರ್ನಾಲ್ಕು ತಿಂಗಳಿಂದ ತುಂಬಾ ಕಷ್ಟದಲ್ಲಿದ್ದೆ. ಆಗ ನೀವು ನನಗೆ ಧೈರ್ಯ ತುಂಬಿದಿರಿ. ಸಾಕಷ್ಟು ವರ್ಷ ಅಂಬರೀಶ್ ಕಾಂಗ್ರೆಸ್‍ಗಾಗಿ ದುಡಿದಿದ್ದರು. ನೀವು ನಮ್ಮನ್ನ ಕೈಬಿಟ್ಟರೆ ನೀವು ಮಂಡ್ಯದ ಸೊಸೆಯಲ್ಲ ಎಂದು ಅಂಬರೀಶ್ ಅಭಿಮಾನಿಗಳು ಹೇಳಿದರು. ಆದರೆ ನನಗೆ ರಾಜಕೀಯಲ್ಲಿ ಎಬಿಸಿಡಿ ಕೂಡ ಗೊತ್ತಿಲ್ಲ ಅಂದರೂ ಬಿಡದೇ ಅಂಬರೀಶಣ್ಣ ಮಾಡಿರುವ ಕೆಲಸಗಳು ಬೆನ್ನಿಗಿವೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಅಂಬರೀಶ್ ಅಭಿಮಾನಿಗಳು ನನ್ನಲ್ಲಿ ಕೇಳಿಕೊಂಡರು ಎಂದು ಸುಮಲತಾ ಹೇಳಿದರು.
Advertisement
ಅಂಬರೀಶ್ ಅವರನ್ನ ನಂಬಿದ್ದ ಜನತೆ ಪರ ನಿಂತುಕೊಳ್ಳುವುದು ಸರಿ ಅನಿಸಿತು. ಅಂಬರೀಶ್ ಸಾಕಷ್ಟು ವರ್ಷ ಕಾಂಗ್ರೆಸ್‍ಗಾಗಿ ದುಡಿದಿದ್ದಾರೆ. ಹೀಗಾಗಿ ಕಾಂಗ್ರೆಸ್ ಕದ ತಟ್ಟಿದ್ದೆ. ನಿಮಗೆ ಮಂಡ್ಯ ಬೇಡವೇ? ಯಾಕೆ ಬಿಟ್ಟು ಕೊಡುತ್ತಿರುವಿರಿ ಎಂದು ಕೇಳಿದೆ. ಅದಕ್ಕೆ ಅವರು ಮೈತ್ರಿ ಧರ್ಮದ ಕಥೆ ಹೇಳಿದರು ಎಂದು ತಿಳಿಸಿದರು.
ನಮ್ಮ ಕುಟುಂಬಕ್ಕಿಂತ ಮಂಡ್ಯಕ್ಕೆ ಅಂಬರೀಶ್ ಅವರ ಅಗತ್ಯವಿದೆ. ಅವರಿಗೆ ಹೆಚ್ಚು ಆಯಸ್ಸು ಕೊಡು ಎಂದು ದೇವರಲ್ಲಿ ಪ್ರಾರ್ಥಿಸಿದೆ. ಆದರೆ ದೇವರಿಗೆ ನನ್ನ ಪ್ರಾರ್ಥನೆ ತಲುಪಲಿಲ್ಲ. ಹೀಗಾಗಿ ಅವರನ್ನ ತನ್ನ ಬಳಿಗೆ ಕರೆದುಕೊಂಡುಬಿಟ್ಟ. ನಾನು ಕಣ್ಣೀರು ಹಾಕುವುದಿಲ್ಲ. ಧೈರ್ಯವಾಗಿ ಎಲ್ಲವನ್ನೂ ಎದುರಿಸುತ್ತೇವೆ ಎಂದು ಹೇಳಿ ಮತದಾರರ ಮನ ಒಲಿಸಲು ಪ್ರಯತ್ನಿಸಿದರು.
ನಾನು ಗೆಲುವು ಸಾಧಿಸಿದರೆ ವಿದೇಶಕ್ಕೆ ಹೋಗುತ್ತೇನೆ ಎಂದು ಕೆಲವರು ಹೇಳುತ್ತಿದ್ದಾರೆ. ಅಂಬರೀಶ್ ಅವರೊಂದಿಗೆ ನಾನು ಎಲ್ಲಾ ದೇಶಗಳನ್ನು ನೋಡಿದ್ದೆ. ಈಗ ಮಂಡ್ಯದ ಜನತೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಅಂಬರೀಶ್ ಅವರ ಪರವಾಗಿ ನಿಂತು ಕೆಲಸ ಮಾಡುವ ಅವಕಾಶ ಕೊಡಿ. ನನಗೆ ಯಾವುದೇ ದುರಾಸೆಯಿಲ್ಲ. ಮಂಡ್ಯದಿಂದ ಸ್ಪರ್ಧೆ ಮಾಡುತ್ತಿರುವುದು ಯಾರನ್ನೂ ವಿರೋಧಿಸಲು ಅಲ್ಲ. ಎದುರು ಹಾಕಿಕೊಳ್ಳಲು ಅಲ್ಲ. ಅಂಬರೀಶ್ ಅವರನ್ನು ಬೆಳೆಸಿದ ಜನತೆಗಾಗಿ ನಾನು ಹೋರಾಡುತ್ತಿರುವೆ ಎಂದು ಕಾಂಗ್ರೆಸ್-ಜೆಡಿಎಸ್‍ಗೆ ಟಾಂಗ್ ಕೊಟ್ಟರು.
ಅಂಬರೀಶ್ ಕಲಿಯುಗದ ಕರ್ಣ. ಅವರದ್ದು ಕೊಡುಗೈ. ಅಂಬರೀಶ್ ಯಾವತ್ತೂ ಸ್ವಾರ್ಥ ರಾಜಕಾರಣ, ಜಾತಿ, ದ್ವೇಷದ ರಾಜಕಾರಣ ಮಾಡಿಲ್ಲ. ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಹೀಗಾಗಿ ನನ್ನ ವಿರುದ್ಧ ವಾಗ್ದಾಳಿ ನಡೆಸಲು ವಿರೋಧಿಗಳಿಗೆ ಅವಕಾಶ ಸಿಗುತ್ತಿಲ್ಲ. ಅವರು ನನ್ನ ವಿರುದ್ಧ ಏನು ಮಾತನಾಡಬೇಕು ಎನ್ನುವುದನ್ನು ಯೋಚಿಸುತ್ತಿದ್ದಾರೆ ಎಂದರು.
ಕೇಬಲ್ ಕಟ್ ಆಗಿರುವ ವಿಚಾರವನ್ನು ಪ್ರಸ್ತಾಪ ಮಾಡಿದ ಅವರು, ಜನರ ಹಾಗೂ ನಮ್ಮ ಮಧ್ಯೆ ಇರುವ ಪ್ರೀತಿಯನ್ನು ಅವರು ಕಟ್ ಮಾಡಲಿ. ಹೀಗೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮ ನಿಮ್ಮ ನಡುವೆ ಎಷ್ಟೋ ಜನ್ಮಗಳ ಸಂಬಂಧವಿದೆ ಎಂದು ಹೇಳಿದರು.
ನನ್ನ ಬೆಂಬಲಕ್ಕೆ ರೈತ ಸಂಘಗಳು ಬೆಂಬಲ ನೀಡಿವೆ. ನಾನು ರೈತರ ಪರವಾಗಿ ಪಾರ್ಲಿಮೆಂಟ್‍ನಲ್ಲಿ ಮಾತನಾಡುತ್ತೇನೆ. ರೈತರ ಹೋರಾಟದ ಜೊತೆಗೆ ಇರುತ್ತೇನೆ ಎಂದು ಅವರು ಹೇಳಿದರು.
ಉಸಿರು ಉಸಿರಿನಲ್ಲಿ, ಮನ ಮನದಲ್ಲಿ, ಮನೆ ಮನೆಯಲ್ಲಿ ಅಂಬರೀಶ್ ಅಣ್ಣ ಅಂತಾ ಪೂಜಿಸುತ್ತಿರುವ ಮಂಡ್ಯದ ಜನತೆಗೆ ನನ್ನ ತುಂಬು ಹೃದಯದ ನಮಸ್ಕಾರಗಳು. ಇಲ್ಲಿಗೆ ಬಂದಿರುವ ನಟರಾದ ದರ್ಶನ್, ಯಶ್ ಅಭಿಮಾನಿಗಳಿಗೂ ನಮಸ್ಕಾರ ಎಂದು ಸುಮಲತಾ ಆರಂಭದಲ್ಲಿ ತಿಳಿಸಿ ತಮ್ಮ ಭಾಷಣವನ್ನು ಆರಂಭಿಸಿದರು.