ತಿರುವನಂತಪುರಂ: ಕೊರೊನಾ ರೋಗಿಗಳ ಚಿಕಿತ್ಸೆಗೆ ಎಷ್ಟು ರೂಪಾಯಿ ಖರ್ಚಾಗಬಹುದು? ಈ ಪ್ರಶ್ನೆ ಹಲವು ಮಂದಿಗೆ ಕಾಡಿರಬಹುದು. ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ಕೇರಳದಲ್ಲಿ ಪ್ರತಿನಿತ್ಯ ಒಬ್ಬ ಸೋಂಕಿತನಿಗೆ ಅಂದಾಜು 25 ಸಾವಿರ ರೂ. ಖರ್ಚಾಗುತ್ತದೆ.
ಕೊರೊನಾ ಚಿಕಿತ್ಸೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿದ್ದರೂ ಕೆಲ ಗುಣಮಟ್ಟದ ಖಾಸಗಿ ಆಸ್ಪತೆಯಲ್ಲೂ ಚಿಕಿತ್ಸೆ ನೀಡಲಾಗುತ್ತಿದೆ. ಸಾಧಾರಣವಾಗಿ ಕೋವಿಡ್-19 ರೋಗಿಗೆ ಪ್ರತಿನಿತ್ಯ 20 ಸಾವಿರದಿಂದ 25 ಸಾವಿರ ರೂ. ಖರ್ಚಾಗುತ್ತದೆ ಎಂದು ತಿರುವನಂತಪುರಂ ಮೆಡಿಕಲ್ ಕಾಲೇಜಿನ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಅಂದರೆ ಓರ್ವ ರೋಗಿ 14 ದಿನಗಳ ಕಾಲ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗುವವರೆಗೂ ಒಟ್ಟು 2.80 ಲಕ್ಷ ರೂ. ನಿಂದ 3.50 ಲಕ್ಷ ರೂ. ಶುಲ್ಕ ಆಗುತ್ತದೆ.
Advertisement
Advertisement
ಸಾಧಾರಣವಾಗಿ 3 ಅಥವಾ 5 ಸತತ ಪರೀಕ್ಷೆಗಳಲ್ಲಿ ನೆಗೆಟಿವ್ ಬಂದರೆ ಡಿಸ್ಚಾರ್ಜ್ ಮಾಡಲಾಗುತ್ತದೆ. ಆದರೆ ಕೆಲವೊಮ್ಮೆ 8 ಬಾರಿ ಪರೀಕ್ಷೆ ಮಾಡಲಾಗುತ್ತದೆ. ಬಾಲಿವುಡ್ ಹಾಡುಗಾರ್ತಿ ಕನಿಕಾ ಕಪೂರ್ ಅವರ 5 ಪರೀಕ್ಷೆಗಳಲ್ಲಿ ಪಾಸಿಟಿವ್ ಕಂಡುಬಂದು 6ನೇ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿತ್ತು.
Advertisement
ಯಾಕೆ ಇಷ್ಟು ಖರ್ಚು?
ಗಂಟಲ ದ್ರವದ ಮಾದರಿ ಪರೀಕ್ಷೆಗೆ 4,500 ರೂ. ದರವನ್ನು ನಿಗದಿ ಪಡಿಸಲಾಗಿದೆ. ಸುಪ್ರೀಂ ಕೋರ್ಟ್ ಅರ್ಜಿ ವಿಚಾರಣೆ ನಡೆಸಿ ಖಾಸಗಿ ಪ್ರಯೋಗಾಲಯಗಳಿಗೆ ಈ ದರವನ್ನು ನಿಗದಿ ಮಾಡಿದೆ. ಕೊರೊನಾ ಟೆಸ್ಟ್ ಕಿಟ್ ಒಂದಕ್ಕೆ 3 ಸಾವಿರ ರೂ. ಆಗುತ್ತದೆ.
Advertisement
ಪಾಸಿಟಿವ್ ಕಂಡು ಬಂದ ವ್ಯಕ್ತಿ ಅಥವಾ ಸಂಪರ್ಕಿತ ಶಂಕಿತ ವ್ಯಕ್ತಿಯನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಬೇಕು. ಖಾಸಗಿ ಆಸ್ಪತ್ರೆಗಳು ಅಂಬುಲೆನ್ಸ್ ಖರ್ಚನ್ನು ರೋಗಿಯಿಂದ ಭರಿಸಿಕೊಳ್ಳುತ್ತದೆ ಅಥವಾ ಸರ್ಕಾರದಿಂದ ಭರಿಸಿಕೊಳ್ಳುತ್ತದೆ.
ಇದಾದ ಬಳಿಕ ಐಸೋಲೇಷನ್ ವಾರ್ಡಿಗೆ ಶಿಫ್ಟ್ ಮಾಡಿದರೆ ಇಲ್ಲಿ ರೋಗಿ ಹೊರತು ಪಡಿಸಿ ಬೇರೆ ಯಾರಿಗೂ ಹಾಸಿಗೆ ಇರಬಾರದು. ಜೊತೆ ಈ ವಾರ್ಡಿನಲ್ಲಿ ಟಾಯ್ಲೆಟ್ ಇರಬೇಕು. ಹಿರಿಯ ವಯಸ್ಸಿನ ವ್ಯಕ್ತಿ ಆಗಿದ್ದರೆ ವೆಂಟಿಲೇಟರ್ ಅಗತ್ಯವಾಗಿ ಇರಬೇಕಾಗುತ್ತದೆ.
ಕೊಟ್ಟಾಯಂನ 94 ವರ್ಷದ ಪತಿ, 88 ವರ್ಷದ ಪತ್ನಿಯನ್ನು ಒಂದು ವಾರಕ್ಕೂ ಹೆಚ್ಚು ದಿನ ವೆಂಟಿಲೇಟರ್ ನಲ್ಲಿ ಇಡಲಾಗಿತ್ತು. ಖಾಸಗಿ ಆಸ್ಪತ್ರೆಗಳು ವೆಂಟಿಲೇಟರ್ ನಲ್ಲಿ ರೋಗಿಯನ್ನು ಇರಿಸಿದರೆ ಒಂದು ದಿನಕ್ಕೆ 25 ಸಾವಿರದಿಂದ 50 ಸಾವಿರ ರೂ. ಚಾರ್ಜ್ ಮಾಡುತ್ತವೆ. ಇದನ್ನೂ ಓದಿ: ಕೊರೊನಾ ಗೆದ್ದ ವೃದ್ಧ ದಂಪತಿ ಡಿಸ್ಚಾರ್ಜ್- ಆಹಾರ ಏನಿತ್ತು?
ಆಸ್ಪತ್ರೆಯ ವರ್ಗೀಕರಣದ ಆಧಾರದಲ್ಲಿ ರೂಮ್ ಬಾಡಿಗೆ ನಿರ್ಧಾರವಾಗುತ್ತದೆ. ಕನಿಷ್ಟ ಒಂದು ದಿನದ ಬಾಡಿಗೆಗೆ ಕಡಿಮೆ ದರ ಎಂದಾದರೂ 1 ಸಾವಿರ – 1,500 ರೂ. ನಿಗದಿಯಾಗಿರುತ್ತದೆ.
100 ಬೆಡ್ ಸಾಮರ್ಥ್ಯದ ಕೋವಿಡ್-19 ಆಸ್ಪತ್ರೆಗೆ ಕನಿಷ್ಟ 200 ವೈಯಕ್ತಿಕ ಸುರಕ್ಷಾ ಸಾಧನ(ಪಿಪಿಇ) ಬೇಕಾಗುತ್ತದೆ. ವೈದ್ಯರು ಮತ್ತು ನರ್ಸ್ ಗಳು ಪ್ರತಿ 4 ಗಂಟೆಗೆ ಒಮ್ಮೆ ಈ ಪಿಪಿಇಯನ್ನು ಬದಲಾಯಿಸುತ್ತಾರೆ. ಒಂದು ಪಿಪಿಇ ಬೆಲೆ 750 ರೂ. ನಿಂದ ಆರಂಭಗೊಂಡು 1 ಸಾವಿರ ರೂ.ವರೆಗೆ ಇದೆ.
ಔಷಧಿ ಸಹ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಮಕ್ಕಳು, ಯುವಜನತೆ, ಹಿರಿಯ ನಾಗರಿಕರು ಇವರ ವಯಸ್ಸಿಗೆ ತಕ್ಕಂತೆ ಚಿಕಿತ್ಸೆ ಮತ್ತು ಔಷಧಿಗಳನ್ನು ನೀಡಬೇಕಾಗುತ್ತದೆ. ಆಹಾರ ಅಲ್ಲದೇ ಆಂಟಿಬಯೋಟಿಕ್ಸ್ ಸೇರಿದಂತೆ ಇತರ ಔಷಧಿಗಳಿಗೆ ಅಂದಾಜು 500 ರಿಂದ 1 ಸಾವಿರ ರೂ. ಖರ್ಚಾಗುತ್ತದೆ.
ಹಣ ಎಷ್ಟು ಬೇಕಾದರೂ ಖರ್ಚಾದರೂ ಪರವಾಗಿಲ್ಲ. ರೋಗಿ ಗುಣಮುಖನಾಗುವುದು ಮುಖ್ಯ ಎಂದು ಸಿಎಂ ನಮಗೆ ತಿಳಿಸಿದ್ದಾರೆ. ಹೀಗಾಗಿ ಹಣದ ವಿಚಾರಕ್ಕೆ ತಲೆಕೆಡಿಸಿಕೊಳ್ಳದೇ ಉತ್ತಮ ಚಿಕಿತ್ಸೆಯನ್ನು ನೀಡುವತ್ತ ಗಮನ ಹರಿಸಿದ್ದೇವೆ. ನಮ್ಮ ಆಸ್ಪತ್ರೆಯಲ್ಲಿ ವಿದೇಶಿಯರಿಗೂ ಅತ್ಯುತ್ತಮ ಚಿಕಿತ್ಸೆ ನೀಡಿದ್ದೇವೆ ಎಂದು ಕೇರಳ ಆರೋಗ್ಯ ಸಚಿವೆ ಕೆಕೆ ಶೈಲಜಾ ತಿಳಿಸಿದ್ದಾರೆ.