ಚಿಕ್ಕಮಗಳೂರು: ಕೊರೊನಾ ವೈರಸ್ ಸಂಬಂಧ ಜನ ಸಹಕರಿಸದಿದ್ದರೆ ಲಾಕ್ ಡೌನ್ ಅನಿವಾರ್ಯ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಹೆಚ್ಚಾದ್ರೆ ಸರ್ಕಾರಕ್ಕೆ ಲಾಕ್ ಡೌನ್ ಅನಿವಾರ್ಯ. ಜನರ ಜೀವ ಉಳಿಸುವುದು ಸರ್ಕಾರದ ಬದ್ಧತೆ. ಜನ ಕೋವಿಡ್ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಮನವಿ ಮಾಡಿಕೊಂಡರು.

ಇದೇ ವೇಳೆ ಕಾಂಗ್ರೆಸ್ ಪಕ್ಷದಿಂದ ನಡೆಯುತ್ತಿರುವ ಪಾದಯಾತ್ರೆಗೆ ಬೇಸರ ವ್ಯಕ್ತಪಡಿಸಿದ ಅವರು, ಪಾದಯಾತ್ರೆಗೆ ಅನುಮತಿ ಕೊಡುವುದು ಬಿಡುವುದು ಬೇರೆ. ಕೋವಿಡ್ ಸಮಯದಲ್ಲಿ ರಾಜಕಾರಣದ ನಡೆಯನ್ನ ಮುಂದೂಡುವುದು ಒಳ್ಳೆಯದು. ವಿರೋಧ ಪಕ್ಷವಾಗಿ ಹೋರಾಟ ಮಾಡಲು ಅವರಿಗೆ ಅವಕಾಶವಿದೆ. ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ಸಿಗರು ಏನು ಮಾಡಲಿಲ್ಲ. ಆದರೆ ಕೋವಿಡ್ ನಿಯಮಗಳನ್ನ ಪಾಲಿಸಬೇಕೆಂದು ಕೋರುತ್ತೇನೆ ಎಂದರು.

ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಸಚಿವರ ಕೈಬಿಡುವುದು ಗಾಳಿಸುದ್ದಿ. ಬೊಮ್ಮಾಯಿ ಸರ್ಕಾರದಲ್ಲಿ ಯಾವ ಸಚಿವರನ್ನೂ ಕೈ ಬಿಡುವುದಿಲ್ಲ. ಗೃಹ ಇಲಾಖೆ ತೃಪ್ತಿ ಕೊಟ್ಟಿದೆ, ಚಾಲೆಂಜ್ ಕೂಡ ಆಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸೋಂಕು ವೇಗವಾಗಿ ಹರಡುತ್ತಿದೆ, ನಾಳೆ ಸಂಜೆ ತಜ್ಞರ ಜೊತೆ ಸಭೆ ಮಾಡುತ್ತೇವೆ: ಬೊಮ್ಮಾಯಿ

ಇತ್ತ ಬೆಂಗಳೂರಿನಲ್ಲಿ ಸಿಎಂ ಮಾತನಾಡಿ, ಕೊರೊನಾ, ಓಮಿಕ್ರಾನ್ ಸೋಂಕು ವೇಗವಾಗಿ ಹರಡುತ್ತಿದೆ. ನಾಳೆ ಸಂಜೆ ತಜ್ಞರ ಜೊತೆ ಸಭೆಮಾಡಿ ದೀರ್ಘಾವಧಿ ಕ್ರಮ ತೆಗೆದುಕೊಳ್ಳುತ್ತೇವೆ. ಕೋವಿಡ್ ಬಗ್ಗೆ ಗಮನ ಹರಿಸುತ್ತಿದ್ದೇವೆ. ವೇಗವಾಗಿ ಸೋಂಕು ಹರಡುತ್ತಿದೆ. ತಜ್ಞರ ಜೊತೆ ಚರ್ಚೆ ಅವಶ್ಯಕತೆ ಇದ್ದು, ನಾಳೆ ಸಂಜೆ ತಜ್ಞರ ಜೊತೆ ಸಭೆಮಾಡುತ್ತೇವೆ. ಗುರುವಾರ ಕ್ಯಾಬಿನೆಟ್‍ನಲ್ಲಿ ಮಹತ್ವದ ತೀರ್ಮಾನದ ಜೊತೆಗೆ ದೀರ್ಘಾವಧಿ ಕ್ರಮ ತೆಗೆದುಕೊಳ್ಳುತ್ತೇವೆ. ಜನರಿಗೆ ತೊಂದರೆ ಆಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

