– ಅಂಗಡಿ, ಮುಂಗಟ್ಟುಗಳಿಗೆ ಸಮಯ ನಿಗದಿ
– ಗೌರಿಬಿದನೂರು ಕೊರೊನಾ ಮುಕ್ತ ನಗರ
ಚಿಕ್ಕಬಳ್ಳಾಪುರ: ಜಿಲ್ಲೆ ಆರೆಂಜ್ ಝೋನ್ ವ್ಯಾಪ್ತಿಯಲ್ಲಿದ್ದು, ಚಿಕ್ಕಬಳ್ಳಾಪುರ ನಗರದ 17, 10, 12, 13 ನಾಲ್ಕು ವಾರ್ಡ್ ಹೊರತುಪಡಿಸಿ, ಜಿಲ್ಲೆಯಾದ್ಯಾಂತ ಸಡಿಲಿಕೆಗಳು ಅನ್ವಯವಾಗಲಿವೆ ಅಂತ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್. ಲತಾ ಸ್ಪಷ್ಟಪಡಿಸಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಕೊರೊನಾ ಸೋಂಕಿತರ 17 ನೇ ವಾರ್ಡ್ ಹಾಗೂ ಅಕ್ಕ ಪಕ್ಕದ 3 ವಾರ್ಡುಗಳನ್ನ ಈಗಾಗಲೇ ಸೀಲ್‍ಡೌನ್ ಮಾಡಲಾಗಿದ್ದು, ಕಂಟೈನ್‍ಮೆಂಟ್ ಝೋನ್ ಅಂತ ಗುರುತಿಸಲಾಗಿದೆ. ಈ 4 ವಾರ್ಡುಗಳಲ್ಲಿ ಸೀಲ್‍ಡೌನ್ ಮುಂದುವರಿಯಲಿದ್ದು, ನಗರದ ಉಳಿದ ವಾರ್ಡುಗಳಿಗೆ ಸಡಲಿಕೆಗಳನ್ನ ನೀಡಲಾಗಿದೆ. ಚಿಕ್ಕಬಳ್ಳಾಪುರ ನಗರದ ನಾಲ್ಕು ವಾರ್ಡುಗಳು ಹೊರತುಪಡಿಸಿ ಜಿಲ್ಲೆಯ ನಗರ ಪ್ರದೇಶಗಳಲ್ಲಿ ಎಲ್ಲಾ ರೀತಿಯ ಅಂಗಡಿ ಮುಂಗಟ್ಟುಗಳು ಆರಂಭಿಸಲು ಬೆಳಗ್ಗೆ 07 ಗಂಟೆಯಿಂದ ಮಧ್ಯಾಹ್ನ 02 ಗಂಟೆಯವರೆಗೆ ಮಾತ್ರ ಅವಕಾಶವಿದೆ. ಆದರೆ ಗ್ರಾಮೀಣ ಭಾಗದಲ್ಲಿ ಬೆಳಗ್ಗೆ 07 ರಿಂದ ಸಂಜೆ 7 ರವರೆಗೆ ತೆರೆಯಲು ಅನುಮತಿಯಿದೆ.
ರಾಜ್ಯಾದ್ಯಂತ ಇಂದು ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದ್ದು, ಮದ್ಯಪಾನಪ್ರಿಯರು ನಾ ಮುಂದು ತಾ ಮುಂದು ಅಂತ ಮದ್ಯ ಖರೀದಿಗೆ ಮುಗಿಬಿದ್ದಿದ್ದಾರೆ. ಅದೇ ಆಸೆಗಣ್ಣಿನಿಂದ ಇಂದು ಬೆಳಗ್ಗೆ ಮದ್ಯ ಖರೀದಿಸಿಲು ಮುಂದಾಗಿದ್ದ ಮದ್ಯಪ್ರಿಯರಿಗೆ ಚಿಕ್ಕಬಳ್ಳಾಪುರ ಹಾಗೂ ಗೌರಿಬಿದನೂರು ನಗರದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಶಾಕ್ ಕಾದಿತ್ತು. ಈ ಬಗ್ಗೆ ಸಭೆ ನಡೆಸಿ ಅಂತಿಮ ತೀರ್ಮಾನಕ್ಕೆ ಬಂದಿರೋ ಜಿಲ್ಲಾಡಳಿತ ಕೊನೆಗೆ ಚಿಕ್ಕಬಳ್ಳಾಪುರ ಹಾಗೂ ಗೌರಿಬಿದನೂರು ನಗರದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದೆ.
ಚಿಕ್ಕಬಳ್ಳಾಪುರ ನಗರದಲ್ಲಿ ಮಾತ್ರ ಬೆಳಗ್ಗೆ 09 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಉಳಿದಂತೆ ಜಿಲ್ಲೆಯ ಇತರೆ ಭಾಗಗಳಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮದ್ಯ ಮಾರಾಟಕ್ಕೆ ಅವಕಾಶವಿದ್ದು, ಯಾವುದೇ ನಿರ್ಬಂಧವಿಲ್ಲ. ಸದ್ಯ ಜಿಲ್ಲೆಯಲ್ಲೂ ಸಹ ಮದ್ಯ ಮಾರಾಟಕ್ಕೆ ಅನುಮತಿ ಸಿಕ್ಕಿರುವುದರಿಂದ ಮದ್ಯ ಪ್ರಿಯರು ಕಿಲೋಮೀಟರ್ ಗಟ್ಟಲೇ ಕ್ಯೂ ನಿಂತು ಮದ್ಯ ಖರೀದಿಸಿದ್ದಾರೆ. ಗೌರಿಬಿದನೂರು ತಾಲೂಕು ಕೋಟಾಲದಿನ್ನೆ ಹಾಗೂ ಬಾಗೇಪಲ್ಲಿ ನಗರದ ವೈನ್ ಶಾಪ್ ವೊಂದರ ಬಳಿ ಕಿಲೋಮೀಟರ್ ಗಟ್ಟಲೇ ಕ್ಯೂ ಇತ್ತು. ಇನ್ನೂ ಹಲವೆಡೆ ಸಹ ಸರದಿ ಸಾಲಿನಲ್ಲಿ ನಿಂತ ಮದ್ಯಪ್ರಿಯರು ಮದ್ಯ ಖರೀದಿಸಿದ್ದಾರೆ.
ಕೆಲವೆಡೆ ಸಾಮಾಜಿಕ ಅಂತರ ನಿರ್ಲಕ್ಷ್ಯ ಮಾಡಿದ ಘಟನೆಗಳು ನಡೆದಿದ್ದು, ಮದ್ಯದಂಗಡಿಗಳ ಬಳಿ ಪೊಲೀಸ್ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ. ಮತ್ತೊಂದೆಡೆ ಚಿಕ್ಕಬಳ್ಳಾಪುರ ಜಿಲೆಯಲ್ಲಿ ಮೊಟ್ಟ ಮೊದಲ ಕೊರೊನಾ ಸೋಂಕು ಕಾಣಿಸಿಕೊಂಡಿದ್ದ ಹಾಗೂ ಹಾಟ್‍ಸ್ಪಾಟ್ ಆಗಿದ್ದ ಗೌರಿಬಿದನೂರು ನಗರವನ್ನ ಕೊರೊನಾ ಮುಕ್ತ ಅಂತ ಕಂಟೈನ್‍ಮೆಂಟ್ ಝೋನ್ ನಿಂದ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಕೈಬಿಟ್ಟಿದೆ. ಇಷ್ಟು ದಿನ ಗೌರಿಬಿದನೂರು ನಗರದ ಹಿರೇಬಿದನೂರಿನ ವಾರ್ಡು ನಂಬರ್ 29 ಹಾಗೂ 30 ನ್ನ ಕಂಟೈನ್‍ಮೆಂಟ್ ಝೋನ್ ಆಗಿ ಗುರುತಿಸಲಾಗಿತ್ತು.
ಸದ್ಯ ಗೌರಿಬಿದನೂರು ನಗರದಲ್ಲಿ ಕಳೆದ 21 ದಿನಗಳಲ್ಲಿ ಯಾವುದೇ ಹೊಸ ಕೊರೊನಾ ಪ್ರಕರಣ ಕಂಡು ಬರದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಗೌರಿಬಿದನೂರು ನಗರವನ್ನ ಕಂಟೈನ್‍ಮೆಂಟ್ ಝೋನ್ ವ್ಯಾಪ್ತಿಯಿಂದ ಬಿಡುಗಡೆ ಮಾಡಿದ್ದೇವೆ ಅಂತ ಡಿಸಿ ಆರ್ ಲತಾ ತಿಳಿಸಿದರು. ಉಳಿದಂತೆ ಸರಳವಾಗಿ ನಡೆಸಲು ಮದುವೆ, ಹಾಗೂ ಶುಭ ಸಮಾರಂಭಗಳಿಗೆ ಅವಕಾಶವಿದ್ದು 50 ಮಂದಿ ಮಾತ್ರ ಪಾಲ್ಗೊಳ್ಳಬೇಕು ಹಾಗೂ ಕಟ್ಟುನಿಟ್ಟಿನ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಅಂತ ಡಿ ಸಿ ಸೂಚನೆ ನೀಡಿದ್ದಾರೆ. ಇದರ ಜೊತೆಗೆ ಸೆಲೂನ್ ಹಾಗೂ ಬ್ಯೂಟಿ ಪಾರ್ಲರ್ ಗಳಿಗೆ ಅನುಮತಿ ನೀಡಲಾಗಿದೆ.