ಹುಬ್ಬಳ್ಳಿ: ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ದೇಶಾದ್ಯಂತ ಲಾಕ್‍ಡೌನ್ ಮಾಡಲಾಗಿದೆ. ಆದರೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಲಾಕ್‍ಡೌನ್ ನಿಯಮ ಉಲ್ಲಂಘಿಸಿ ರಾಮನವಮಿ ಆಚರಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಲಾಕ್‍ಡೌನ್ ಇರುವುದರಿಂದ ಜನರು ಮನೆಯಿಂದ ಹೊರಗಡೆ ಬರಬಾರದು ಎಂದು ಸರ್ಕಾರ ಆದೇಶ ನೀಡಿದೆ. ಆದರೆ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪೊಲೀಸರೇ ರಾಮನವಮಿ ಮಾಡಲು ಅವಕಾಶ ನೀಡಿದ್ದಾರೆ ಎನ್ನಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಗುಂಪಾಗಿ ಜನರು ಸೇರಬಾರದು ಎಂದು ಹೇಳುವ ಪೊಲೀಸರ ಎದುರೇ ರಾಮನವಮಿ ಆಚರಿಸಲಾಗಿದ್ದು ತೀವ್ರ ಟೀಕೆಗೆ ಗುರಿಯಾಗಿದೆ.
Advertisement
Advertisement
ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಾಮನವಮಿ ಆಚರಿಸುತ್ತಿರುವ ವಿಡಿಯೋವೊಂದು ಎಲ್ಲೆಡೆ ಹರಿಡಾಡುತ್ತಿದ್ದು, ವಿಡಿಯೋದಲ್ಲಿ ಪೊಲೀಸ್ ಸಿಬ್ಬಂದಿ ಕೂಡ ಪೂಜೆಯಲ್ಲಿ ಭಾಗಿಯಾಗಿರುವ ದೃಶ್ಯ ಸೆರೆಯಾಗಿದೆ. ಅಲ್ಲದೇ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ರಾಮನವಮಿ ಆಚರಿಸಿ ಎಂದು ಪೊಲೀಸ್ ಸಿಬ್ಬಂದಿ ಜನರಿಗೆ ಹೇಳುತ್ತಿರುವ ದೃಶ್ಯ ಕೂಡ ವಿಡಿಯೋದಲ್ಲಿದೆ. ಆದರೆ ಗುಂಪಾಗಿ ಸೇರಬೇಡಿ ಎಂದು ಜಾಗೃತಿ ಮೂಡಿಸುವ ಪೊಲೀಸರೇ ಹೀಗೆ ಆಚರಣೆಗೆ ಅವಕಾಶ ನೀಡಿದರೆ ಹೇಗೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.