ಕೋಲಾರ: ಕೋಲಾರದಲ್ಲಿ ಮದ್ಯ ಸಿಗದ ಹಿನ್ನೆಲೆಯಲ್ಲಿ ಮದ್ಯ ಪ್ರಿಯರು ಅನ್ಯ ಮಾರ್ಗಗಳನ್ನ ಕಂಡುಕೊಳ್ಳುತ್ತಿದ್ದು, ಮದ್ಯ ಕಳವು, ಕಳ್ಳಭಟ್ಟಿಯಂತಹ ಕೃತ್ಯಗಳಲ್ಲಿ ತೊಡಗಿದ್ದಾರೆ.
ಲಾಕ್‍ಡೌನ್‍ನಿಂದಾಗಿ ಮದ್ಯದಂಗಡಿಗಳು ಬಂದ್ ಆದ ಕಾರಣ ಗಡಿ ಜಿಲ್ಲೆ ಕೋಲಾರದ ಜನರು ಕಳ್ಳಭಟ್ಟಿ, ಸೇಂದಿಗೆ ಮೊರೆ ಹೋಗುತ್ತಿದ್ದಾರೆ. ಮತ್ತೆ ಕೆಲವರು ಬಾರ್‍ಗಳಿಗೆ ಕನ್ನ ಹಾಕಿ ಲಕ್ಷಾಂತರ ರೂಪಾಯಿ ಮದ್ಯ ಕಳ್ಳತನ ಮಾಡುತ್ತಿದ್ದಾರೆ. ಆಂಧ್ರಪ್ರದೇಶ ಹಾಗೂ ತಮಿಳುನಾಡು ಗಡಿಯಲ್ಲಿ ಅಕ್ರಮ ಕಳ್ಳಬಟ್ಟಿ ಹಾಗೂ ಸೇಂಧಿ ಮಾರಾಟ, ಸಾಗಾಟ ನಿಯಂತ್ರಣಕ್ಕೆ ಬರುತ್ತಿಲ್ಲ. ದಿನೇ ದಿನೆ ಅಬಕಾರಿ ಇಲಾಖೆಗೆ ಕಳ್ಳಭಟ್ಟಿ, ಸೇಂಧಿ ಮಾರಾಟ ಜಾಲ ತಲೆ ನೋವಾಗಿ ಪರಿಣಮಿಸಿದೆ.
Advertisement
Advertisement
ಕೋಲಾರ ಜಿಲ್ಲೆಯಲ್ಲಿ 140 ಬಾರ್‍ಗಳಿದ್ದು, ಇದುವರೆಗೂ 8 ಬಾರ್ ಗಳು ಕಳ್ಳತನವಾಗಿದೆ. ಸುಮಾರು 6 ಕಳ್ಳಭಟ್ಟಿ ಹಾಗೂ ಸೇಂಧಿ ಪ್ರಕರಣಗಳು ದಾಖಲಾಗಿವೆ ಎಂದು ಅಬಕಾರಿ ಅಧೀಕ್ಷಕಿ ಸುಮಿತಾ ತಿಳಿಸಿದ್ದಾರೆ. ಕೋಲಾರ ಅಬಕಾರಿ ಅಧೀಕ್ಷಕರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್‍ಡೌನ್ ಆದ ಬಳಿಕ ಜಿಲ್ಲೆಯಲ್ಲಿ ಮದ್ಯಕ್ಕೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಆದರೆ ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿರುವ ಬಾರ್ ಆ್ಯಂಡ್ ರೆಸ್ಟೋರೆಂಟ್‍ಗಳನ್ನು ಬಂದ್ ಮಾಡಿದ ಬಳಿಕ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ ಎಂದರು.
Advertisement
Advertisement
ಮದ್ಯ ಸಿಗದ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಲ್ಲಿ ಇದುವರೆಗೂ 6 ಕಳ್ಳಭಟ್ಟಿ ಹಾಗೂ ಸೇಂಧಿ ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಇದರಿಂದ 180 ಲೀಟರ್ ನಷ್ಟು ಬೆಲ್ಲದ ಕೊಳೆ, 3 ಲೀ. ಸೇಂಧಿ ಹಾಗೂ 35 ಲೀಟರ್ ನಷ್ಟು ಕಳ್ಳಬಟ್ಟಿಯನ್ನು ವಶಪಡಿಸಿಕೊಂಡಿದ್ದು, ಮೂರು ಜನರನ್ನು ಬಂಧಿಸಲಾಗಿದೆ. ಇದುವರೆಗೆ ಸುಮಾರು ಏಳುವರೆ ಲಕ್ಷದಷ್ಟು ಮದ್ಯ ಕಳುವಾಗಿದೆ ಎಂದು ಸ್ಪಷ್ಟಪಡಿಸಿದರು.