Connect with us

ಮಂಡ್ಯ ಸ್ಥಳೀಯ ಉಪಚುನಾವಣೆ: ಠೇವಣಿ ಕಳೆದುಕೊಂಡ ಕಾಂಗ್ರೆಸ್, ಬಿಜೆಪಿ

ಮಂಡ್ಯ ಸ್ಥಳೀಯ ಉಪಚುನಾವಣೆ: ಠೇವಣಿ ಕಳೆದುಕೊಂಡ ಕಾಂಗ್ರೆಸ್, ಬಿಜೆಪಿ

-ಕಾಂಗ್ರೆಸ್‍ಗೆ 5 ಮತ, ಬಿಜೆಪಿಗೆ 3 ಮತ

ಮಂಡ್ಯ: ಜಿಲ್ಲೆಯ ನಾಗಮಂಗಲದ ಪಟ್ಟಣ ಪಂಚಾಯಿತಿಯ 13 ನೇ ವಾರ್ಡ್‍ಗೆ ನಡೆದ ಉಪಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಠೇವಣಿ ಕಳೆದುಕೊಂಡು ಮುಜುಗರ ಅನುಭವಿಸಿವೆ. ಜೆಡಿಎಸ್ ಮಾತ್ರ ಅಭ್ಯರ್ಥಿಯನ್ನು ಕಣಕ್ಕಳಿಸದೇ ಬುದ್ಧಿವಂತಿಕೆ ಪ್ರದರ್ಶಿಸಿದೆ.

ಜೆಡಿಎಸ್ ಪಕ್ಷದಿಂದ ಅಮಾನತ್ತಾದ ಶಾಸಕ ಚಲುವರಾಯಸ್ವಾಮಿ ಸ್ವಕ್ಷೇತ್ರವಾದ ನಾಗಮಂಗಲ ಪಟ್ಟಣ ಪಂಚಾಯಿತಿ 13ನೇ ವಾರ್ಡ್‍ನ ಸದಸ್ಯರಾಗಿದ್ದ ಎನ್‍ಸಿ.ಕೇಶವ್ ಕಳೆದ ಮೂರು ತಿಂಗಳ ಹಿಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ರು. ಈ ಹಿನ್ನೆಲೆಯಲ್ಲಿ 13 ನೇ ವಾರ್ಡ್‍ಗೆ ಫೆಬ್ರವರಿ 12 ರಂದು ಚುನಾವಣೆ ನಡೆದಿತ್ತು.

13ನೇ ವಾರ್ಡ್‍ನ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಅಬ್ದುಲ್ ಅಜೀಜ್ ಸ್ಪರ್ಧಿಸಿದ್ರೆ, ಬಿಜೆಪಿಯಿಂದ ಶ್ರೀನಿವಾಸ್ ಎಂಬವರು ಸ್ಪರ್ಧಿಸಿದ್ದರು. ಆದರೆ ಸ್ಥಳೀಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಶಾಸಕ ಸುರೇಶ್‍ಗೌಡ ಪಕ್ಷದಿಂದ ನಿಲ್ಲಿಸಲಾಗಿದ್ದ ಅಭ್ಯರ್ಥಿಗೆ ಬದಲಾಗಿ ಗಿರೀಶ್ ಎಂಬವರನ್ನ ಬೆಂಬಲಿಸಿ ಚುನಾವಣೆಗೆ ನಿಲ್ಲಿಸಿದ್ದರು. ಚಲುವರಾಯಸ್ವಾಮಿ ವಿನಯ್ ಕುಮಾರ್ ಎಂಬ ಅಭ್ಯರ್ಥಿಯ ಪರ ವ್ಯಾಪಕ ಪ್ರಚಾರ ಮಾಡಿದ್ರು.

ಭಾನುವಾರ ನಡೆದ ಚುನಾವಣೆಯಲ್ಲಿ ಒಟ್ಟು 615 ಮತಗಳ ಪೈಕಿ 547 ಮತಗಳು ಚಲಾವಣೆಯಾಗಿದ್ದವು. ಅದರಲ್ಲಿ ಸುರೇಶ್ ಗೌಡ ಬೆಂಬಲಿತ ಅಭ್ಯರ್ಥಿ ಗಿರೀಶ್ 304 ಮತ ಪಡೆದು ಗೆಲುವು ಸಾಧಿಸಿದ್ರೆ, ಚೆಲುವರಾಯಸ್ವಾಮಿ ಬೆಂಬಲಿತ ಅಭ್ಯರ್ಥಿ ವಿನಯ್ ಕುಮಾರ್ 235 ಮತ ಪಡೆದು ಸೋಲನ್ನಪ್ಪಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕೇವಲ ಐದು ಮತ ಪಡೆದಿದ್ರೆ, ಬಿಜೆಪಿ ಅಭ್ಯರ್ಥಿ ಮೂರು ಮತ ಪಡೆದು ಠೇವಣಿ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವೊಂದು ಸ್ಥಳೀಯ ಸಂಸ್ಥೆಗೆ ನಡೆದ ಚುನಾವಣೆಯೊಂದರಲ್ಲಿ ಕೇವಲ ಐದು ಮತ ಪಡೆದು ನಗೆಪಾಟಲಿಗೀಡಾಗಿದೆ.