ಅಂತ್ಯಕ್ರಿಯೆಗೆ ಹಣವಿಲ್ಲದೆ 3 ದಿನ ನಾಲ್ಕು ಮೃತದೇಹಗಳ ಪಕ್ಕದಲ್ಲೇ ಮಲಗಿದ ಕುಟುಂಬ

Public TV
2 Min Read
deadbody cremation

ಜಲಂಧರ್: ಅಂತ್ಯಸಂಸ್ಕಾರಕ್ಕೆ ಹಣವಿಲ್ಲದೆ ಕುಟುಂಬಸ್ಥರು ಮೃತದೇಹದ ಪಕ್ಕದಲ್ಲೇ 3 ದಿನಗಳ ಕಾಲ ಮಲಗಿದ್ದ ಹೃದಯ ವಿದ್ರಾವಕ ಘಟನೆ ಪಂಜಾಬ್‍ನಲ್ಲಿ ನಡೆದಿದೆ.

ಮಹಿಳೆಯೊಬ್ಬರು ಗಂಡನ ಶವದ ಪಕ್ಕದಲ್ಲೇ ಮಲಗಿಕೊಂಡು ಮೂರು ದಿನ ಕಳೆದಿದ್ದಾರೆ. ಡಿಸೆಂಬರ್ 31ರಂದು ಜಲಂಧರ್‍ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ದಲಿಪ್ ಸಿಂಗ್(40) ಸಾವನ್ನಪ್ಪಿದ್ದರು. ಜೊತೆಗೆ ಮೂರು ತಿಂಗಳ ಮಗಳಾದ ಅಂಜಲಿ ಕೂಡ ಸಾವನ್ನಪ್ಪಿದ್ದು, ಅವರ ಶವಗಳನ್ನ ಮೂರು ದಿನಗಳಾದ್ರೂ ಅಂತ್ಯಸಂಸ್ಕಾರ ಮಾಡಿರಲಿಲ್ಲ. ದಲಿಪ್ ಸಿಂಗ್ ಪತ್ನಿ ಪಲಮ್‍ಗೆ ಕಾಲು ಮೂಳೆ ಮುರಿದಿದ್ದು, ಪತಿಯ ಶವದ ಪಕ್ಕದಲ್ಲೇ ಮೂರು ದಿನ ಮಲಗಿದ್ದಾರೆ.

ಅಂತ್ಯಸಂಸ್ಕಾರ ನೆರವೇರಿಸಲು ನನ್ನ ಬಳಿ ಹಣವಿಲ್ಲ ಎಂದು ಪಲಮ್ ಮಂಗಳವಾರದಂದು ಪತ್ರಿಕೆಯೊಂದಕ್ಕೆ ಹೇಳಿದ್ದಾರೆ. ಇಂತಹ ಕೆಟ್ಟ ಪರಿಸ್ಥಿತಿ ಎದುರಿಸಿದ್ದು ಪಲಮ್ ಒಬ್ಬರೇ ಅಲ್ಲ. ಅಪಘಾತ ನಡೆದ ವೇಳೆ ನಾನು ನನ್ನ ಗಂಡನ ಜೊತೆ ಇರಬೇಕಿತ್ತು ಎಂದು ಮತ್ತೊಬ್ಬ ಮೃತ ವ್ಯಕ್ತಿ ಮೋಹಿಂದರ್(23) ಪತ್ನಿಯಾದ 7 ತಿಂಗಳ ಗರ್ಭಿಣಿ ನೀಲಮ್(21) ಹೇಳಿದ್ದಾರೆ. ನನ್ನ ಕಣ್ಣ ಮುಂದೆಯೇ ಅವರ ಮೃತದೇಹ ಇದೆ. ಆದ್ರೆ ಅವರ ಅಂತ್ಯಸಂಸ್ಕಾರ ನೆರವೇರಿಸಲು ಸಾಧ್ಯವಾಗದೇ ಅಸಹಾಯಕಳಾಗಿದ್ದೀನಿ ಎಂದಿದ್ದಾರೆ.

ಒಟ್ಟು ಐವರು ಮೃತರಲ್ಲಿ ನಾಲ್ವರ ಅಂತ್ಯಸಂಸ್ಕಾರ ನೆರವೇರಿರರಿಲ್ಲ. ವಿಷಯ ತಿಳಿದ ನಂತರ ರೆಡ್ ಕ್ರಾಸ್ ಸಂಸ್ಥೆ ಅಂತ್ಯಸಂಸ್ಕಾರಕ್ಕಾಗಿ ತಲಾ 4 ಸಾವಿರ ರೂ. ನೀಡಿದೆ.

dead man

ಬೀದಿ ನಾಯಿಗಳು ಶವಗಳಿಗೆ ಹಾನಿ ಮಾಡಬಾರದೆಂಬ ಕಾರಣಕ್ಕೆ ಮೂರು ದಿನಗಳಿಂದ ನಾವು ಸಂಬಂಧಿಕರ ಮೃತದೇಹಗಳ ಜೊತೆಯಲ್ಲೇ ಮಲಗುತ್ತಿದ್ದೇವೆ. ನಾವು ತುಂಬಾ ಬಡವರು, ಅಂತ್ಯಕ್ರಿಯೆ ನೆರವೇರಿಸಲು ಹಣವಿಲ್ಲ ಎಂದು ಸಹೋದರನನ್ನು ಕಳೆದುಕೊಂಡಿರೋ ಭೋಲಾ ಹೇಳಿದ್ದಾರೆ.

ಈ ಕಾರ್ಮಿಕ ಕುಟುಂಬ ಇಲ್ಲಿನ ಲಾಂಬ್ರಾ ಗ್ರಾಮದಲ್ಲಿ ಗುಡಿಸಲು ಹಾಕಿಕೊಂಡು ವಾಸವಿದ್ದರು. ಕ್ರಿಸ್‍ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ಇಲ್ಲಿನ ಸ್ಥಳೀಯ ಚರ್ಚ್‍ಗೆ ಹೋಗಿದ್ದರು. ಅಲ್ಲಿಂದ ಆಟೋ ರಿಕ್ಷಾದಲ್ಲಿ ಹಿಂದಿರುಗುವಾಗ ಮತ್ತೊಂದು ವಾಹನಕ್ಕೆ ಆಟೋ ಡಿಕ್ಕಿಯಾಗಿ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಆಟೋ ಚಾಲಕ ಕೂಡ ಸಾವನ್ನಪ್ಪಿದ್ದು, ಅವರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಆದ್ರೆ ಉಳಿದವರಾದ ಮೋಹಿಂದರ್, ಧರಮ್ ದೇವಿ, ದಲಿಪ್ ಹಾಗೂ ಮಗಳಾದ ಅಂಜಲಿಯ ಅಂತ್ಯಕ್ರಿಯೆ ನರವೇರಿರಲಿಲ್ಲ.

ಘಟನೆಯಲ್ಲಿ ಗಾಯಗೊಂಡ 6 ಜನ ಕೂಡ ಯಾವುದೇ ಚಿಕಿತ್ಸೆ ಪಡೆದಿಲ್ಲ. ತಲೆಗೆ ತೀವ್ರವಾಗಿ ಗಾಯವಾಗಿದ್ದ ಜೋಹಿಲ್ ಎಂಬವರು ಮಾತ್ರ ಸ್ಥಳಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದ್ರೆ ಅವರ ಚಿಕಿತ್ಸೆಗೂ ಕೂಡ ಕುಟುಂಬದ ಬಳಿ ಹಣವಿಲ್ಲ. ಕಳೆದ ಮೂರು ದಿನಗಳಿಂದ ಚರ್ಚ್ ಮ್ಯಾನೇಜ್‍ಮೆಂಟ್ ಹಾಗೂ ಕೆಲವು ಗ್ರಾಮಸ್ಥರು ಇವರಿಗೆ ಊಟ ನೀಡಿದ್ದಾರೆ.

students suicide a5fe61de7d300c8f5169958120da8f1b

ಮಂಗಳವಾರದಂದು ಸಬ್- ಡಿವಿಷನಲ್ ಮ್ಯಾಜಿಸ್ಟ್ರೇಟ್ ಪರಮ್‍ವೀರ್ ಸಿಂಗ್ ಹಾಗೂ ಲಾಂಬ್ರಾ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಣಕಾಸಿನ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಡಿಸಿ ವಾರಿಂದರ್ ಕುಮಾರ್ ಶರ್ಮಾ ಈ ಬಗ್ಗೆ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆ ಮೃತರ ಕುಟುಂಬಕ್ಕೆ ತಲಾ 4 ಸಾವಿರ ರೂ. ನೀಡಿದೆ. ಅಂತ್ಯಸಂಸ್ಕಾರ ನೆರವೇರಿಸಲು ಒಪ್ಪಿದ್ದಾರೆ. ಸಿವಿಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಗೂ ಸರ್ಕಾರಿ ವೆಚ್ಚದಲ್ಲಿ ಎಲ್ಲಾ ಅಗತ್ಯ ಚಿಕಿತ್ಸೆ ಒದಗಿಸುವಂತೆ ಹೇಳಿದ್ದೇವೆ ಎಂದು ತಿಳಿಸಿದ್ದಾರೆ.

Dead Body

Share This Article