ಉಡುಪಿ: ಲಿವಾ ಮಿಸ್ ದಿವಾ-2020 ಗೆದ್ದ ಉಡುಪಿ ಮೂಲದ ಆಡ್ಲಿನ್ ಕ್ಯಾಸ್ಟಲಿನೋ ತನ್ನ ಹುಟ್ಟೂರು ಉಡುಪಿಗೆ ಆಗಮಿಸಿದ್ದಾರೆ. ಮಿಸ್ ಯೂನಿವರ್ಸ್ ಸ್ಪರ್ಧೆಗೆ ಭಾರತದಿಂದ ಆಯ್ಕೆಯಾಗಿರುವ ಆಡ್ಲಿನ್‍ಗೆ ಉಡುಪಿಯಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ.
ಉಡುಪಿಯ ಉದ್ಯಾವರ ಕೊರಂಗ್ರಪಾಡಿಯ ಮನೆಗೆ ಆಗಮಿಸಿದ ಆಡ್ಲಿನ್, ಕುಟುಂಬಸ್ಥರ ಜೊತೆ ಸಂತೋಷದಿಂದ ಬೆರೆತರು. ಸಂಬಂಧಿಕರ ಜೊತೆ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ದೊಡ್ಡಪ್ಪನ ಮನೆಯಲ್ಲಿ ಅಯ್ದ ಕುಟುಂಬಿಕರಿಂದ ವಿಶೇಷ ಪ್ರಾರ್ಥನೆ ನಡೆಯಿತು. ಗೆಲುವಿಗೆ ಏಸುವಿನ ಆಶೀರ್ವಾದವೇ ಕಾರಣ ಎಂದು ಪ್ರಾರ್ಥನೆ ವೇಳೆ ಆಡ್ಲಿನ್ ಕುಟುಂಬದ ಹಿರಿಯರು ತಿಳಿಸಿದರು.
Advertisement
Advertisement
ಆಡ್ಲಿನ್ ಕ್ಯಾಸ್ಟಲಿನೊ ಕುವೈಟ್‍ನಲ್ಲಿ ಹುಟ್ಟಿ ಬೆಳೆದಿದ್ದರೂ ಕೊಂಕಣಿ ಭಾಷೆಯ ಮೂಲಕವೇ ದೇವರ ಪೂಜೆ, ಪ್ರಾರ್ಥನೆ ಮಾಡುತ್ತಾರೆ. ಮನೆಯಲ್ಲಿ ಬೈಬಲ್‍ನ ಚರಣಗಳನ್ನು ಪಠಣ ಮಾಡಿದರು. ಸುಮಾರು 10 ನಿಮಿಷ ಏಸು ಮತ್ತು ಮೇರಿಯ ವಿಶೇಷ ಪ್ರಾರ್ಥನೆ ನೆರವೇರಿತು.
Advertisement
ನೆರೆಕರೆಯ ಹಿಂದೂಗಳು ಆಗಮಿಸಿ ಆಡ್ಲಿನ್ ಕ್ಯಾಸ್ಟಲಿನೋ ಅವರಿಗೆ ಆರತಿ ಎತ್ತಿ, ದೃಷ್ಟಿ ತೆಗೆದರು. ಉಡುಪಿಯ ಶಂಕರಪುರ ಮಲ್ಲಿಗೆ ಹೂವು ಕೊಟ್ಟು ಆಶೀರ್ವಾದ ಮಾಡಿದರು. ಉದ್ಯಾವರ ಚರ್ಚ್ ವ್ಯಾಪ್ತಿಯ ಐಸಿವೈಎಂ ಸಂಘಟನೆಯವರು ಆಡ್ಲಿನ್ ಕ್ಯಾಸ್ಟಲಿನೋ ಅವರನ್ನು ತೆರೆದ ಜೀಪ್‍ನಲ್ಲಿ ಮೆರವಣಿಗೆ ಮಾಡಿದರು. ಸುಮಾರು ಮೂರು ಕಿ.ಮೀ. ಮೆರವಣಿಗೆ ಉದ್ದಕ್ಕೂ ಆಡ್ಲಿನ್ ಪರಿಚಯಸ್ಥರು ಹಾಗೂ ಸಂಬಂಧಿಕರತ್ತ ಕೈ ಬೀಸಿದರು.
Advertisement
ಕಂಬಳದ ಕೋಣ, ಕರಾವಳಿ ಚೆಂಡೆ, ರಂಗಿನ ಕೊಡೆ ಹಿಡಿದು ಚರ್ಚ್ ವರೆಗೆ ಮೆರವಣಿಗೆ ಮಾಡಲಾಯಿತು. ನೂರಾರು ವಾಹನಗಳು, ಆಪ್ತರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಉದ್ಯಾವರ ನಗರದಾದ್ಯಂತ ಆಡ್ಲಿನ್ ಕ್ಯಾಸ್ಟಲಿನೋ ಅವರ ಕಟೌಟ್ ಗಳು ರಾರಾಜಿಸುತ್ತಿದ್ದವು.
ಲಿವಾ ಮಿಸ್ ದಿವಾ 2020 ಎಂಟನೇ ಆವೃತ್ತಿ ಮುಂಬೈನ ಅಂಧೇರಿಯಲ್ಲಿ ನಡೆದಿತ್ತು. ಇದರಲ್ಲಿ ಜಯಗಳಿಸುವ ಮೂಲಕ ಮಂಗಳೂರು ಮೂಲದ ಆಡ್ಲಿನ್ ಕ್ಯಾಸ್ಟೆಲಿನೋ ಈ ಬಾರಿಯ ಮಿಸ್ ಯೂನಿವರ್ಸ್ 2020 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. 20 ಮಂದಿ ಹೆಸರಾಂತ ಮಾಡೆಲ್‍ಗಳು ಪಾಲ್ಗೊಂಡಿದ್ದ ಕಣದಲ್ಲಿ ಕಳೆದ ಬಾರಿಯ ಚಾಂಪಿಯನ್ ವರ್ತಿಕಾ ಸಿಂಗ್ ವಿಜಯಿಯೆಂದು ಘೋಷಣೆಯಾದ ಬಳಿಕ ಆಡ್ಲಿನ್‍ಗೆ ಕಿರೀಟ ತೊಡಿಸಿದರು. ವರ್ತಿಕಾ ಸಿಂಗ್ 2019ರ ಸಾಲಿನ ಮಿಸ್ ಯೂನಿವರ್ಸ್ ಇಂಡಿಯಾ ಆಗಿ ಆಯ್ಕೆಯಾಗಿದ್ದರು.
ಫೆ.22ರಂದು ಮುಂಬೈನ ಯಶ್ ರಾಜ್ ಸ್ಟುಡಿಯೋದಲ್ಲಿ ನಡೆದ ಈ ಮಾಡೆಲಿಂಗ್ ಸ್ಪರ್ಧೆಯಲ್ಲಿ ಬಾಲಿವುಡ್ ನಟರಾದ ಅನಿಲ್ ಕಪೂರ್, ಆದಿತ್ಯ ರಾಯ್ ಕಪೂರ್, ಮಿಸ್ ಯೂನಿವರ್ಸ್ 2000 ಲಾರಾ ದತ್ತಾ, ಡಿಸೈನರ್ ಗಳಾದ ಶಿವನ್ ಮತ್ತು ನರೇಶ್, ಮಿಸ್ ಸುಪ್ರಾ ನ್ಯಾಷನಲ್ 2014 ಆಶಾ ಭಟ್, ಮಿಸ್ ಯೂನಿವರ್ಸ್ ಶ್ರೀಲಂಕಾ 2006 ಜಾಕ್ವೇಲಿನ್ ಫೆರ್ನಾಂಡಿಸ್, ಡಿಸೈನರ್ ನಿಕಿಲ್ ಮೆಹ್ರಾ, ಗ್ಯಾವಿನ್ ಮಿಗೆಲ್ ತೀರ್ಪುಗಾರರ ತಂಡದಲ್ಲಿದ್ದರು.
ನಟಿ ಮಲೈಕಾ ಅರೋರಾ ಫೈನಲ್ ಸ್ಪರ್ಧೆಯಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದರು. ಆವಿತ್ರಿ ಚೌಧರಿ ಮಿಸ್ ದಿವಾ 2020 ಆಗಿ ಆಯ್ಕೆಯಾಗಿದ್ದು, ಮಿಸ್ ಸುಪ್ರನ್ಯಾಷನಲ್ 2020 ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ. 2019ರಲ್ಲಿ ಶೆಫಾಲಿ ಸೂದ್ ಸುಪ್ರನ್ಯಾಷನಲ್ ಇಂಡಿಯಾ ಆಗಿ ಮೂಡಿ ಬಂದಿದ್ದರು. ಮಂಗಳೂರು ಮೂಲದ ಆಡ್ಲಿನ್ ಕ್ಯಾಸ್ಟೆಲಿನೋ ಸೇರಿದಂತೆ ಕಳೆದೆರಡು ವರ್ಷದಲ್ಲಿ ಬೇರೆ ಬೇರೆ ವಿಭಾಗದಲ್ಲಿ ಜಯ ಗಳಿಸಿದ್ದ ಮಾಡೆಲ್‍ಗಳು ಪರಸ್ಪರ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಕೊನೆಯ ಸುತ್ತಿನಲ್ಲಿ ಆಡ್ಲಿನ್ ಅವರನ್ನು ವಿಜಯಿಯೆಂದು ಘೋಷಿಸಲಾಯಿತು. ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ 2016ರಲ್ಲಿ ಮಿಸ್ ಸುಪ್ರನ್ಯಾಷನಲ್ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದರು.