ಹುಬ್ಬಳ್ಳಿ/ಧಾರವಾಡ: ಕಿಮ್ಸ್ ಆಸ್ಪತ್ರೆಯ ಮತ್ತೊಂದು ಎಡವಟ್ಟು ಬೆಳಕಿಗೆ ಬಂದಿದೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ನೆರವು ನೀಡಬೇಕಾಗಿದ್ದ ಸಿಬ್ಬಂದಿ, ರೋಗಿಗಳ ಸಹಾಯಕ್ಕೆ ಬರುತ್ತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಪುಟ್ಟ ಬಾಲಕಿಯೊಬ್ಬಳು ಆಸ್ಪತ್ರೆ ಆವರಣದಲ್ಲಿ ತಂದೆಯನ್ನು ಸ್ಟ್ರೆಚರ್ ಮೇಲೆ ಕುಳ್ಳಿರಿಸಿ ತಾನೇ ದೂಡಿಕೊಂಡು ಹೋದ ಘಟನೆ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.
ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಬಡವರ ಪಾಲಿಗೆ ಸಂಜೀವಿನಿ, ಪ್ರತಿನಿತ್ಯ ಸಾವಿರಾರು ಜನರು ಇಲ್ಲಿಗೆ ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಆಸ್ಪತ್ರೆಗೆ ಆಗಮಿಸುವ ರೋಗಿಗಳ ಸಹಾಯಕ್ಕೆ ನೂರಾರು ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ವ್ಹೀಲ್ ಚೇರ್, ಸ್ಟ್ರೆಚರ್ ಮೇಲೆ ರೋಗಿಗಳನ್ನು ಸರಿಯಾದ ವಾರ್ಡಿಗೆ ತೆಗೆದುಕೊಂಡು ಹೋಗಬೇಕಾಗಿದ್ದ ಸಿಬ್ಬಂದಿ ಇಲ್ಲಿ ಮೈಮರೆತಿದ್ದಾರೆ. ಅಲ್ಲದೆ ಸಿಬ್ಬಂದಿ ರೋಗಿಗಳ ನೆರವಿಗೆ ಬರುತ್ತಿಲ್ಲ ಎನ್ನುವ ಆರೋಪವೂ ಕೇಳಿ ಬಂದಿದೆ.
Advertisement
Advertisement
ತನ್ನ ತಂದೆಯ ಜೊತೆಗೆ ಆಸ್ಪತ್ರೆಗೆ ಬಂದಿದ್ದ ಪುಟ್ಟ ಬಾಲಕಿಯೊಬ್ಬಳು, ತಂದೆಯನ್ನು ಸ್ಟ್ರೆಚರ್ ಮೇಲೆ ಕುಳ್ಳಿರಿಸಿ ದೂಡಿಕೊಂಡು ಸ್ಕ್ಯಾನ್ ಮಾಡಿಸಲು ಹೋದ ಘಟನೆ ಬೆಳಕಿಗೆ ಬಂದಿದೆ. ಈ ದೃಶ್ಯ ನೋಡಿದ ಹಲವರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
Advertisement
ಕಾಲಿಗೆ ಪೆಟ್ಟು ಬಿದ್ದಿದ್ದರಿಂದ ನಡೆಯಲಾಗದ ಸ್ಥಿತಿಯಲ್ಲಿದ್ದ ನಾಗರಾಜ್, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದಿದ್ದರು. ಕಿಮ್ಸ್ ನಲ್ಲಿ ಕಾಲಿನ ಸ್ಕ್ಯಾನಿಂಗ್ ಮಾಡಿಸಲು ಅಲ್ಲಿದ್ದ ಸಿಬ್ಬಂದಿ ನೆರವು ನೀಡಬೇಕಿತ್ತು. ಆದರೆ ಯಾರು ಸಹ ನೆರವು ನೀಡದಿದ್ದಾಗ ನಾಗರಾಜ್ ಪತ್ನಿ ಹಾಗೂ ಅವರ ಮಗಳು ಇಬ್ಬರು ಸೇರಿ, ನಾಗರಾಜ್‍ರನ್ನು ಸ್ಟ್ರೆಚರ್ ಮೇಲೆ ಕುಳ್ಳಿರಿಸಿ ಸ್ಕ್ಯಾನಿಂಗ್ ಸೆಂಟರ್ ವೆರೆಗೆ ಕರೆದುಕೊಂಡು ಹೋಗಿದ್ದಾರೆ.
Advertisement
ನೂರಾರು ಸಿಬ್ಬಂದಿ ಇದ್ದರು ಸಹ ರೋಗಿಗಳ ನೆರವಿಗೆ ಅವರು ಬರದೇ ಬೇಜವಾಬ್ದಾರಿ ತೋರುತ್ತಿದ್ದಾರೆ. ರೋಗಿಗಳ ಜೊತೆಗೆ ಬಂದವರೇ ರೋಗಿಗಳನ್ನು ಬೇರೆ ಬೇರೆ ವಾರ್ಡ್ ಗಳಿಗೆ ಶಿಫ್ಟ್ ಮಾಡುವಂತಹ ವ್ಯವಸ್ಥೆ ಕಿಮ್ಸ್ ನಲ್ಲಿ ಕಂಡು ಬರುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ತನ್ನ ತಂದೆಯ ನೆರವಿಗೆ ಆಸ್ಪತ್ರೆ ಸಿಬ್ಬಂದಿ ಬಾರದಿದ್ದಾಗ ಬಾಲಕಿ ತಾನೇ ಸ್ಟ್ರೆಚರ್ ದೂಡಿಕೊಂಡು ಹೋಗಿ ಚಿಕಿತ್ಸೆ ಕೊಡಿಸಿರುವುದು ಕಿಮ್ಸ್ ಆಸ್ಪತ್ರೆಯ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.