ಚಿಕ್ಕಮಗಳೂರು: ಆಕಾಶದಲ್ಲಿ ಅಥವಾ ಮರಗಳ ಮೇಲೆ ಒಂದರೆಡು ಬೆಳ್ಳಕ್ಕಿಗಳನ್ನು ನೋಡಿದರೆ ಮನಸ್ಸು ಖುಷಿಯಾಗುತ್ತೆ. ಆದರೆ ಕಾಫಿನಾಡಿನಲ್ಲಿ ಬೆಳ್ಳಕ್ಕಿ ಪ್ರಪಂಚ ಸೃಷ್ಟಿ ಆಗುತ್ತಿದೆ.
ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಇಟ್ಟಿಗೆ ಸೀಗೋಡು ಗ್ರಾಮದಲ್ಲಿ ಬೆಳ್ಳಕ್ಕಿಯ ಪ್ರಪಂಚ ಸೃಷ್ಟಿ ಆಗಿದೆ. ಬಾಳೆಹೊನ್ನೂರು ಸಮೀಪವಿರುವ ಈ ಗ್ರಾಮದ ವಿನಾಯಕ ಕೆರೆಯ ಅಂಗಳದಲ್ಲಿರುವ ಮರಗಳಲ್ಲಿ ನೆಲೆಸಿರುವ ಬೆಳ್ಳಕ್ಕಿಗಳ ಹಿಂಡು ನೋಡುಗರ ಮನಸ್ಸಿಗೆ ಮುದ ನೀಡುತ್ತಿದೆ.
Advertisement
Advertisement
ಪ್ರತಿ ವರ್ಷವೂ ಚಳಿಗಾದಲ್ಲಿ ಸುತ್ತಮುತ್ತಲ ಬತ್ತದ ಗದ್ದೆ, ಹಳ್ಳ-ಕೊಳ್ಳಗಳಲ್ಲಿ ಮೀನು, ಸಣ್ಣ-ಪುಟ್ಟ ಕೀಟಗಳನ್ನು ತಿಂದು ವಿನಾಯಕ ಕೆರೆಯ ಅಂಗಳದಲ್ಲಿರುವ ಮರಗಳಲ್ಲಿ ಸಾವಿರಾರು ಬೆಳ್ಳಕ್ಕಿಗಳು ಆಶ್ರಯ ಪಡೆದಿವೆ. ಬೆಳಗ್ಗಿನ ಜಾವ 6 ಗಂಟೆ ಹಾಗೂ ಸಂಜೆ 6ರ ವೇಳೆಯ ಆಸುಪಾಸಿನಲ್ಲಿ ಹಸಿರು ಚೆಲ್ಲಿ ನಿಂತಿರುವ ಮರಗಳ ಮೇಲೆ ಒಮ್ಮೆಲೆ ಸಾವಿರಾರು ಬೆಳ್ಳಕ್ಕಿಗಳು ಹಾರಾಡುವ ದೃಶ್ಯ ನೋಡುಗರ ಮನಸ್ಸಿಗೆ ಮುದ ನೀಡುತ್ತಿದೆ. ಚಿವ್ ಚಿವ್ ಎನ್ನುವ ಮರಿ ಹಕ್ಕಿಗಳ ನಿನಾದದ ಜೊತೆ ಅತ್ತಿಂದತ್ತ ಇತ್ತಿಂದತ್ತ ಮರದಿಂದ ಮರಕ್ಕೆ ಹಾರಾಡುವ ಬೆಳ್ಳಕ್ಕಿಗಳ ರಂಗಿನಾಟ ಮತ್ತಷ್ಟು ಸುಂದರವಾಗಿದೆ.
Advertisement
Advertisement
ಮುಸ್ಸಂಜೆಯಲ್ಲಿ ರವಿ ಮೆಲ್ಲಗೆ ಮರೆಯಾಗುತ್ತಿದ್ದಂತೆ ಬೆಳ್ಳಕ್ಕಿಗಳ ಗುಂಪು ಕೆರೆಯ ಬಳಗ ಸೇರಿಕೊಳ್ಳುತ್ತವೆ. ಹನಿ ಹನಿಗೂಡಿದರೆ ಹಳ್ಳ ಎಂಬಂತೆ ಒಂದು ಎರಡು ಮೂರು ಎಂದು ಲೆಕ್ಕ ಹಾಕುವುದರಲ್ಲಿ ಒಮ್ಮೆಲೆ ಸಾವಿರಾರು ಬೆಳ್ಳಕ್ಕಿಗಳು ಕಣ್ಣಿಗೆ ಹಬ್ಬದೂಟ ಬಡಿಸುತ್ತವೆ. ಮರಗಳ ಮೇಲೆ ಒಟ್ಟೊಟ್ಟಾಗಿ ಆಟವಾಡುವ ಹಕ್ಕಿಗಳು ಕತ್ತಲು ಆವರಿಸುತ್ತಿದ್ದಂತೆ ಫುಲ್ ಸೈಲೆಂಟಾಗಿ ಗೂಡು ಸೇರುತ್ತವೆ.
ಪ್ರತಿ ಬಾರಿ ಡಿಸೆಂಬರ್ ವೇಳೆಗೆ ನಾನಾ ಪ್ರದೇಶಗಳಿಂದ ಬರುತ್ತಿದ್ದ ಬೆಳ್ಳಕ್ಕಿಗಳು ಈ ಬಾರಿ ನವೆಂಬರ್ ತಿಂಗಳಿನಲ್ಲಿಯೇ ಆಹಾರವನ್ನು ಅರಸಿಕೊಂಡು ಮಲೆನಾಡಿಗೆ ಲಗ್ಗೆ ಇಟ್ಟಿವೆ. ಮಲೆನಾಡು ಭಾಗದಲ್ಲಿ ಈ ವೇಳೆ ಭತ್ತದ ಕಟಾವು ನಡೆಯುವುದರಿಂದ ಸಹಜವಾಗಿಯೇ ಬೆಳಕ್ಕಿಗಳು ಇಲ್ಲಿ ನೆಲೆಸಿ ವಂಶಾಭಿವೃದ್ಧಿ ನಡೆಸಿ ಬಳಿಕ ತಮ್ಮ ತಮ್ಮ ಊರುಗಳಿಗೆ ವಾಪಾಸ್ ಹೋಗುತ್ತವೆ. ಹೀಗೆ ಒಂದೆಡೆ ಸಾವಿರಾರು ಬೆಳ್ಳಕ್ಕಿಗಳು ಒಟ್ಟಿಗೆ ಸೇರಿ ಮಲೆನಾಡಿನ ಚುಮು-ಚುಮು ಚಳಿಯ ಮಂಜಿಗೆ ಮತ್ತಷ್ಟು ರಂಗು ನೀಡುತ್ತಿರುವುದು ಸ್ಥಳೀಯರು ಸೇರಿದಂತೆ ಪಕ್ಷಿಪ್ರಿಯರ ಪಾಲಿನ ನೆಚ್ಚಿನ ತಾಣವಾಗಿ ಕೆರೆ ಮಾರ್ಪಟ್ಟಿದೆ.