ಎಲೆಕ್ಟ್ರಿಕ್ ವಾಹನಗಳಿಗೆ ಬೇಕಾಗಿರುವ ಲೀಥಿಯಂ ನಿಕ್ಷೇಪ ಮಂಡ್ಯದಲ್ಲಿ ಪತ್ತೆ

Public TV
2 Min Read
Mandya Lithium 1

– ಕರಿಘಟ್ಟ ಬೆಟ್ಟದ ಹಿಂಭಾಗದ ಗೋಮಾಳ ಪ್ರದೇಶದಲ್ಲಿ ನಿಕ್ಷೇಪ
– ‘ಕರೆಂಟ್ ಸೈನ್ಸ್’ ಪತ್ರಿಕೆಯಲ್ಲಿ ವಿಜ್ಞಾನಿಯಿಂದ ಲೇಖನ

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕರಿಘಟ್ಟ ಬೆಟ್ಟದ ಹಿಂಭಾಗದ ಗೋಮಾಳ ಪ್ರದೇಶದಲ್ಲಿ ಲೀಥಿಯಂ ನಿಕ್ಷೇಪ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪೆಟ್ರೋಲ್, ಡಿಸೇಲ್ ಮೇಲಿನ ಅವಲಂಬನೆ ತಗ್ಗಿಸಲು ಭಾರತ ಸರ್ಕಾರ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡುತ್ತಿದೆ. ಇದಕ್ಕಾಗಿಯೇ ಬಜೆಟ್‍ನಲ್ಲಿ ನೂರಾರು ಕೋಟಿಯನ್ನು ಮೀಸಲಿಟ್ಟಿದೆ. ಇಂತಹ ಸಂಧರ್ಭದಲ್ಲಿ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳ ತಯಾರಿಕೆಗೆ ಅತ್ಯಗತ್ಯವಾದ ಲೀಥಿಯಂ ಲೋಹ ಪತ್ತೆಯಾಗಿದ್ದು, ಭಾರೀ ಸಂಚಲನ ಉಂಟುಮಾಡಿದೆ.

Mandya Lithium 2

ಎಲೆಕ್ಟ್ರಿಕ್ ವಾಹನಗಳಿಗೆ ಬ್ಯಾಟರಿ ತಯಾರಿಸಲು ಅತ್ಯವಶ್ಯಕವಾದ ಲೀಥಿಯಂ ಲೋಹ ಭಾರತದಲ್ಲೇ ಪತ್ತೆಯಾಗಿದೆ ಎಂದು ಬ್ಯಾಟರಿ ತಂತ್ರಜ್ಞಾನ ಸಂಶೋಧಕ, ಭಾರತೀಯ ವಿಜ್ಞಾನ ಕೇಂದ್ರದ ಗೌರವ ಪ್ರಾಧ್ಯಾಪಕರಾದ ಎನ್.ಮುನಿಚಂದ್ರಯ್ಯ ‘ಕರೆಂಟ್ ಸೈನ್ಸ್’ ಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ ಬಹಿರಂಗಪಡಿಸಿದ್ದಾರೆ.

‘ಕರೆಂಟ್ ಸೈನ್ಸ್’ ಲೇಖನದ ಪ್ರಕಾರ ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕರಿಘಟ್ಟ ಬೆಟ್ಟದ ಹಿಂಭಾಗದ ಗೋಮಾಳ ಪ್ರದೇಶದಲ್ಲಿ ನಿಕ್ಷೇಪ ಪತ್ತೆಯಾಗಿದೆ. ಅಲ್ಲಾಪಟ್ಟಣ-ಮರಳಗಾಲ ಗ್ರಾಮಗಳು ಈ ಪ್ರದೇಶಕ್ಕೆ ಹೊಂದಿಕೊಂಡಿವೆ. ಇನ್ನೂ ಇಡೀ ದೇಶದಲ್ಲಿ ಸಿಗದ ಲೀಥಿಯಂ ನಿಕ್ಷೇಪ ಮಂಡ್ಯದಲ್ಲಿ ಪತ್ತೆಯಾಗಿರುವುದು ಇದೀಗ ಬಾರಿ ಸಂಚಲನ ಮೂಡಿಸಿದೆ. 2017ನೇ ಸಾಲಿನಲ್ಲಿ 384 ದಶಲಕ್ಷ ಲೀಥಿಯಂ ಬ್ಯಾಟರಿಗಳನ್ನು ಇತರೆ ದೇಶಗಳಿಂದ ಭಾರತ ಆಮದು ಮಾಡಿಕೊಳ್ಳುತ್ತಿತ್ತು. 2019ರಲ್ಲಿ ಅದರ ಪ್ರಮಾಣ 1.2 ಶತಕೋಟಿಗೆ ಏರಿಕೆಯಾಗಿತ್ತು. ಆದ್ರೆ ಇದೀಗ ಭಾರತದಲ್ಲೇ ಲೀಥಿಯಂ ನಿಕ್ಷೇಪ ಪತ್ತೆಯಾಗಿರುವುದರಿಂದ ದೇಶದ ವಾಣಿಜ್ಯ ದೃಷ್ಟಿಯಿಂದ ಮಹತ್ವದ್ದಾಗಿದೆ.

Mandya Lithium 1

ಪತ್ರಿಕೆ ವರದಿ ಪ್ರಕಾರ ಅಲ್ಲಾಪಟ್ಟಣ-ಮರಳಗಾಲ ವ್ಯಾಪ್ತಿಯಲ್ಲಿ 14,100 ಟನ್‍ಗಳಷ್ಟು ಲೀಥಿಯಂ ಸಿಗುವ ಸಾಧ್ಯತೆ ಇದೆ. ಆದರೆ ಚಿಲಿ, ಆಸ್ಟ್ರೇಲಿಯಾ, ಪೋರ್ಚುಗಲ್ ದೇಶಗಳಲ್ಲಿ ಸಿಗುವಂತೆ ಇಲ್ಲಿ ಸಿಗಲಾರದು ಎಂದು ಉಲ್ಲೇಖಿಸಲಾಗಿದೆ. ಚಿಲಿಯಲ್ಲಿ 8.6 ಮಿಲಿಯನ್ ಟನ್, ಆಸ್ಟ್ರೇಲಿಯಾದಲ್ಲಿ 2.8 ಮಿಲಿಯನ್ ಟನ್, ಅರ್ಜೆಂಟೀನಾದಲ್ಲಿ 1.7ಮಿಲಿಯನ್ ಟನ್, ಪೋರ್ಚುಗಲ್‍ನಲ್ಲಿ ವಾರ್ಷಿಕವಾಗಿ 60 ಸಾವಿರ ಟನ್‍ಗಳಷ್ಟು ಈ ಲೋಹ ಸಿಗುತ್ತದೆ. ಮಂಡ್ಯದಲ್ಲಿ ಪತ್ತೆಯಾಗಿರುವ ಪ್ರದೇಶದಲ್ಲಿ 14,100 ಟನ್‍ಗಳಷ್ಟೇ ಲೀಥಿಯಂ ಸಿಗುವ ಸಾಧ್ಯತೆಗಳಿದ್ದು, ಲೀಥಿಯಂ ಉತ್ಪಾದಿಸುವ ದೇಶಗಳಿಗೆ ಹೋಲಿಸಿದ್ರೆ ತೀರಾ ಕಡಿಮೆ ಎಂದು ಹೇಳಲಾಗಿದೆ.

Mandya Lithium 3

ಮರಳಗಾಲ-ಅಲ್ಲಾಪಟ್ಟಣ ವ್ಯಾಪ್ತಿಯಲ್ಲಿ ಕಳೆದೆರಡು ದಶಕಗಳಿಂದ ಭಾರತ ಸರ್ಕಾರದ ಅಣು ಖನಿಜ ಸಂಶೋಧನಾ ಘಟಕದ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದರು. ಆರಂಭದಲ್ಲಿ ಈ ಪ್ರದೇಶದಲ್ಲಿ ಯುರೇನಿಯಂ ನಿಕ್ಷೇಪ ಪತ್ತೆಯಾಗಿದೆ ಎಂದು ಸುದ್ದಿಯಾಗಿತ್ತು. ಸಂಶೋಧನೆ ಮುಂದುವರಿದಂತೆ ಇಲ್ಲಿ ಕಾಗೆ ಬಂಗಾರ ಸಿಗಲಾರಂಭಿಸಿತ್ತಾದ್ರು, ಇದೀಗ ಲೀಥಿಯಂ ನಿಕ್ಷೇಪ ಪತ್ತೆಯಾದ ಬಗ್ಗೆ ಮಾಹಿತಿ ಹೊರಬಿದ್ದಿದೆ. ಈ ಬಗ್ಗೆ ಅಣು ಖನಿಜ ವಿಜ್ಞಾನಿಗಳನ್ನ ವಿಚಾರಿಸಿದಾಗ. ಲೀಥಿಯಂ ಪತ್ತೆಯಾಗಿರುವುದು ನಿಜ. ಲೋಹ ಪ್ರಮಾಣ ಕಡಿಮೆಯಿದ್ದು ಇಷ್ಟೇ ಪ್ರಮಾಣದಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗುವುದಿಲ್ಲ. ಇನ್ನಷ್ಟು ದಿನಗಳಕಾಲ ಈ ಬಗ್ಗೆ ಸಂಶೋಧನೆ ನಡೆಯಬೇಕಿದೆ ಎನ್ನುತ್ತಾರೆ.

ಲೀಥಿಯಂ ನಿಕ್ಷೇಪ ಪತ್ತೆಯಾಗಿದೆ ಎಂದು ಹೇಳಲಾಗುತ್ತಿರುವ ಪ್ರದೇಶದಲ್ಲಿ ಸರ್ಕಾರದಿಂದ ಬಂದ ರೈತರ ಜಮೀನುಗಳಿವೆ. ಮಾಲೀಕರ ಅನುಮತಿ ಪಡೆಯದೇ ಭೂಮಿಯನ್ನು ಅಗೆಯಲಾಗುತ್ತಿದೆ ಎಂದು ಸ್ಥಳೀಯ ರೈತರು ಆರೋಪಿಸಿದ್ದಾರೆ. ಒಟ್ಟಾರೆ ಭಾರತದಲ್ಲೇ ಅಪರೂಪದ ಲೋಹ ಲೀಥಿಯಂ ಪತ್ತೆಯಾದ ವಿಚಾರ ವಿಜ್ಞಾನಿಗಳಿಗೆ ಸಂತಸ ತರಿಸಿದ್ದು. ಈ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆದು ಖಚಿತ ಮಾಹಿತಿ ಹೊರಬೀಳಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *