ಹೊಸವರ್ಷ ಆಚರಣೆಗೆ ಇನ್ನೇನು ಕೆಲವೇ ಗಂಟೆಗಳು ಬಾಕಿಯಿದೆ. ಹೊಸ ವರ್ಷದ ಗುಂಗಿನಲ್ಲಿದ್ದರೂ ಕೆಲವೊಂದು ಹಳೆಯ ಘಟನೆಗಳು, ನೆನಪುಗಳು ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದುಬಿಡುತ್ತದೆ. ಅದೇ ರೀತಿ 2024ರಲ್ಲಿ ಬಹಳಷ್ಟು ಸಂತೋಷದ ವಿಚಾರಗಳು ಮನಸ್ಸಿಗೆ ಮುದ ನೀಡಿದರೆ ಇನ್ನೊಂದೆಡೆ ಅನೇಕ ಅಹಿತಕರ ಘಟನೆಗಳು ಹಾಗೂ ಸಾವು-ನೋವುಗಳು ಬೇಸರ ತಂದಿವೆ. 2024ರಲ್ಲಿ ಸಿನಿಮಾ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ಅನೇಕ ಪ್ರಸಿದ್ಧ ಗಣ್ಯರು, ತಾರೆಯರು ನಮ್ಮನ್ನು ಅಗಲಿದ್ದಾರೆ. ಹೀಗೆ ಮರೆಯಾದವರ ಪೈಕಿ ಸದಾ ನೆನಪಿನಲ್ಲಿ ಉಳಿಯುವಂತಹ ಒಂದಿಷ್ಟು ಗಣ್ಯರ ಲಿಸ್ಟ್ ಇಲ್ಲಿದೆ.
ಎಸ್‌ಎಂ ಕೃಷ್ಣ:
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮಹಾರಾಷ್ಟ್ರದ ಮಾಜಿ ರಾಜ್ಯಪಾಲರಾಗಿದ್ದ ಎಸ್‌ಎಂ ಕೃಷ್ಣ ಅವರು 2024ರ ಡಿ.10ರಂದು ನಿಧನರಾದರು. 92 ವರ್ಷದ ಎಸ್‌ಎಂ ಕೃಷ್ಣ ಸುಮಾರು 6 ತಿಂಗಳಿನಿಂದ ಶ್ವಾಸಕೋಶದ ಸಮಸ್ಯೆ ಎದುರಿಸುತ್ತಿದ್ದರು. ಮೂಲತಃ ಮಂಡ್ಯ ಜಿಲ್ಲೆಯವರಾದ ಕೃಷ್ಣ 1932ರ ಮೇ.1ರಂದು ಜನಿಸಿದರು. 1994ರ ವಿಧಾನಸಭೆ ಚುನಾವಣೆಯಲ್ಲಿ ಪಾಂಚಜನ್ಯ ಮೊಳಗಿಸುವ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಎಸ್‌ಎಂ ಕೃಷ್ಣ ಪ್ರಮುಖ ಪಾತ್ರ ವಹಿಸಿದ್ದರು.
Advertisement
Advertisement
ರತನ್ ಟಾಟಾ:
ಸರಳ ವ್ಯಕ್ತಿತ್ವದ ಖ್ಯಾತ ಭಾರತೀಯ ಕೈಗಾರಿಕೋದ್ಯಮಿ ರತನ್ ಟಾಟಾ 2024ರ ಅ.09ರಂದು ಅನಾರೋಗ್ಯದಿಂದ ವಿಧಿವಶರಾದರು. ಟಾಟಾ ಗ್ರೂಪ್ ಹಾಗೂ ಟಾಟಾ ಸನ್ಸ್ನ ಅಧ್ಯಕ್ಷರಾಗಿದ್ದ ರತನ್ ಟಾಟಾ ಅನೇಕ ಸಾಮಾಜಿಕ ಸೇವೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇವರ ಸೇವೆಗಳನ್ನು ಗುರುತಿಸಿ 2000ನೇ ಇಸವಿಯಲ್ಲಿ ಭಾರತ ಸರ್ಕಾರ ಪದ್ಮಭೂಷಣ ಹಾಗೂ 2008ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
Advertisement
ಮನಮೋಹನ್ ಸಿಂಗ್:
ಭಾರತದ ಮಾಜಿ ಪ್ರಧಾನಿ, ಅರ್ಥ ಶಾಸ್ತçಜ್ಞ ಡಾ.ಮನಮೋಹನ್ ಸಿಂಗ್ ದೀರ್ಘಕಾಲದ ಉಸಿರಾಟ ಸಮಸ್ಯೆಯಿಂದ 2024ರ ಡಿ.26ರಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮನಮೋಹನ್ ಸಿಂಗ್ ಅವರು 2004 ರಿಂದ 2014 ರವರೆಗೆ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಅಡಿಯಲ್ಲಿ ಸಮ್ಮಿಶ್ರ ಸರ್ಕಾರವನ್ನು ಮುನ್ನಡೆಸುವ ಮೂಲಕ ಸತತ ಎರಡು ಬಾರಿ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅವರು 1991 ರಲ್ಲಿ ಪಿವಿ ನರಸಿಂಹ ರಾವ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಭಾರತದ ಆರ್ಥಿಕ ಉದಾರೀಕರಣದ ವಾಸ್ತುಶಿಲ್ಪಿಯಾಗಿದ್ದರು. 2005ರಲ್ಲಿ ಮನಮೋಹನ್ ಸಿಂಗ್ ಸಂಕೀರ್ಣ ಮಾರಾಟ ತೆರಿಗೆಯ ಬದಲು ಮೌಲ್ಯ ವರ್ಧಿತ ತೆರಿಗೆ (ವ್ಯಾಟ್) ಅನ್ನು ಜಾರಿಗೊಳಿಸಿದರು. ಇದು ದೇಶದ ಅರ್ಥ ವ್ಯವಸ್ಥೆಯಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿತು.
Advertisement
ಸೀತಾರಾಮ್ ಯೆಚೂರಿ:
ಹಿರಿಯ ರಾಜಕಾರಣಿ ಹಾಗೂ ಸಿಪಿಐ ಹಿರಿಯ ಮುಖಂಡ ಸೀತಾರಾಮ್ ಯೆಚೂರಿ 2024ರ ಸೆ.12ರಂದು ನಿಧನರಾದರು. ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಇತ್ತೀಚೆಗೆ ಆಕ್ಸಿಜನ್ ಸಪೋರ್ಟ್ನಲ್ಲಿ ಇರಿಸಲಾಗಿತ್ತು. 1974ರಲ್ಲಿ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಸೇರಿದಾಗ ಯೆಚೂರಿಯವರ ರಾಜಕೀಯ ಪಯಣ ಆರಂಭವಾಯಿತು. ಆ ಬಳಿಕ ರಾಜಕೀಯದ ಮೆಟ್ಟಿಲುಗಳನ್ನು ಅತ್ಯಂತ ಶೀಘ್ರವಾಗಿ ಏರಿದ್ದರು. ಮೂರು ಬಾರಿ ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾಗಿದ್ದ ಸೀತಾರಾಮ್ ಯೆಚೂರಿ ಬಳಿಕ, ಎಸ್‌ಎಫ್‌ಐನ ಅಖಿಲ ಭಾರತ ಅಧ್ಯಕ್ಷರಾಗಿದ್ದರು. 1984 ರಲ್ಲಿ, ಅವರು ಸಿಪಿಐ(ಎಂ) ಕೇಂದ್ರ ಸಮಿತಿಗೆ ಆಯ್ಕೆಯಾದ ಅವರು ಬಳಿಕ ಶಾಶ್ವತ ಆಹ್ವಾನಿತರೆನಿಸಿಕೊಂಡಿದ್ದರು. 1992 ರ ಹೊತ್ತಿಗೆ, ಅವರು ಪಾಲಿಟ್‌ಬ್ಯೂರೊದ ಸದಸ್ಯರಾಗಿದ್ದರು, ಅವರು ಮೂರು ದಶಕಗಳ ಕಾಲ ಈ ಸ್ಥಾನವನ್ನು ಹೊಂದಿದ್ದರು.
ರೋಹಿತ್ ಬಾಲ್:
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದ್ದ ಖ್ಯಾತ ವಸ್ತ್ರ ವಿನ್ಯಾಸಕ ರೋಹಿತ್ ಬಾಲ್ ನ.1ರ ತಡರಾತ್ರಿ ಅಸುನೀಗಿದರು. ಭಾರತದ ಮೊದಲ ಫ್ಯಾಷನ್ ಡಿಸೈನರ್‌ಗಳಲ್ಲಿ ಒಬ್ಬರಾಗಿದ್ದ ರೋಹಿತ್ ಬಾಲ್, 1990ರ ದಶಕದಲ್ಲಿ ವಸ್ತ್ರ ವಿನ್ಯಾಸ ವೃತ್ತಿಯನ್ನು ಕೈಗೆಟುಕುವ ಹಾಗೂ ಗ್ಲಾಮರಸ್ ವೃತ್ತಿಯಾಗಿ ಜನಪ್ರಿಯಗೊಳಿಸಿದ್ದರು. ಭಾರತದ ಮೊದಲ ಫ್ಯಾಷನ್ ಡಿಸೈನರ್‌ಗಳಲ್ಲಿ ಒಬ್ಬರಾಗಿದ್ದ ರೋಹಿತ್ ಬಾಲ್, 1990ರ ದಶಕದಲ್ಲಿ ವಸ್ತ್ರ ವಿನ್ಯಾಸ ವೃತ್ತಿಯನ್ನು ಕೈಗೆಟುಕುವ ಹಾಗೂ ಗ್ಲಾಮರಸ್ ವೃತ್ತಿಯಾಗಿ ಜನಪ್ರಿಯಗೊಳಿಸಿದ್ದರು. ಅವರ ನವನವೀನ ರಚನೆಯ ಬಟ್ಟೆಗಳನ್ನು ತೊಡದ ಸೆಲೆಬ್ರಿಟಿಗಳೇ ಇಲ್ಲ. ಹಾಲಿವುಡ್ ತಾರೆಗಳು ಮತ್ತು ಸೂಪರ್ ಮಾಡೆಲ್‌ಗಳ ಅಂದವನ್ನು ರೋಹಿತ್ ಬಾಲ್ ವಿನ್ಯಾಸದ ಬಟ್ಟೆಗಳು ಸಹಾಯ ಮಾಡಿದ್ದವು. ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಮಕಾಲೀನ ಟ್ರೆಂಡ್‌ನೊಂದಿಗೆ ಸಂಯೋಜಿಸುವಲ್ಲಿ ಅವರು ಹೆಸರುವಾಸಿಯಾಗಿದ್ದರು.
ಜಾಕೀರ್ ಹುಸೇನ್:
ತಬಲಾ ಮಾಂತ್ರಿಕ ಎಂದೇ ಖ್ಯಾತರಾಗಿರುವ ಜಾಕಿರ್ ಹುಸೇನ್ ಡಿ.15ರಂದು ಇಹಲೋಕ ತ್ಯಜಿಸಿದರು. ಇವರ ನಿಧನಕ್ಕೆ ಕೇವಲ ಭಾರತ ಮಾತ್ರವಲ್ಲ, ಇಡೀ ವಿಶ್ವವೇ ಮರುಗಿದೆ. ಜಾಕಿರ್ ತಬಲಾ ಸದ್ದು ಜನರ ನಶೆ ಏರುವಂತೆ ಮಾಡುತ್ತಿತ್ತು, ಜನ ಅವರನ್ನು ವಾಹ್ ಉಸ್ತಾದ್ ಎನ್ನುತ್ತಿದ್ದರು. ಜಾಕಿರ್ ತನ್ನ ಕಲೆಯ ಪತಾಕೆಯನ್ನು ದೇಶ ಮಾತ್ರವಲ್ಲದೆ ವಿಶ್ವದಾದ್ಯಂತ ಹಾರಿಸಿದ್ದರು. ಜಾಕಿರ್ ಹುಸೇನ್ ಮಾರ್ಚ್ 9 1951ರಲ್ಲಿ ಮುಂಬೈನಲ್ಲಿ ಜನಿಸಿದರು. ಅನೇಕ ಕಠಿಣ ಹಾದಿಗಳು, ಸವಾಲುಗಳನ್ನು ದಾಟಿ ಪ್ರಪಂಚದಾದ್ಯಂತ ಜನರ ಹೃದಯದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ಜಾಕಿರ್ ಹುಸೇನ್‌ಗೆ 2009ರಲ್ಲಿ ಗ್ರ‍್ಯಾಮಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. 1988 ರಲ್ಲಿ ಪದ್ಮಶ್ರೀ ಮತ್ತು 2002 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗಿತ್ತು. 1990 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಶ್ಯಾಮ್ ಬೆನಗಲ್:
ಭಾರತೀಯ ಚಿತ್ರರಂಗದ ಹಿರಿಯ ನಿರ್ದೇಶಕ ಶ್ಯಾಮ್ ಬೆನಗಲ್ ಡಿ.23ರಂದು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅನಂತ್ ನಾಗ್ ನಟನೆಯ ಅಂಕುರ್, ಗಿರೀಶ್ ಕಾರ್ನಾಡ್ ಅಭಿನಯದ ನಿಶಾಂತ್, ಸ್ಮಿತಾ ಪಾಟೀಲ್ ನಟನೆಯ ಮಂಥನ್, ಭೂಮಿಕಾ ಸೇರಿದಂತೆ ಹಲವು ಸಿನಿಮಾಗಳನ್ನು ಶ್ಯಾಮ್ ಬೆನಗಲ್ ನಿರ್ದೇಶಿಸಿದ್ದರು. ಪ್ಯಾರಲಲ್ ಸಿನಿಮಾ ಮೂಲಕ ಅವರು ಭಾರತೀಯ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದರು. 18 ಬಾರಿ ಶ್ಯಾಮ್ ಬೆನಗಲ್ ಅವರು ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಅವರಿಗೆ ಗೌರವಿಸಲಾಗಿತ್ತು. ಫಿಲ್ಮ್ ಫೇರ್, ನಂದಿ ಅವಾರ್ಡ್ ಮುಂತಾದ ಗೌರವಗಳು ಕೂಡ ಅವರಿಗೆ ಸಿಕ್ಕಿದ್ದವು. ಪದ್ಮಶ್ರೀ, ಪದ್ಮ ಭೂಷಣ ಪ್ರಶಸ್ತಿಗಳು ಸಹ ಶ್ಯಾಮ್ ಬೆನಗಲ್ ಅವರ ಮುಡಿಗೇರಿದ್ದವು. ರಿಯಲಿಸ್ಟಿಕ್ ಸಿನಿಮಾಗಳ ಮೂಲಕ ಶ್ಯಾಮ್ ಬೆಗನಲ್ ಅವರು ಹೆಸರುವಾಸಿ ಆಗಿದ್ದರು.
ದ್ವಾರಕೀಶ್:
ಕರ್ನಾಟಕದ ಕುಳ್ಳ ಎಂದೇ ಫೇಮಸ್ ಆಗಿದ್ದ ಹಿರಿಯ ನಟ, ನಿರ್ಮಾಪಕ ನಿರ್ದೇಶಕ ದ್ವಾರಕೀಶ್ ಏ.16ರಂದು ಇಹಲೋಕ ತ್ಯಜಿಸಿದರು. 81 ವರ್ಷ ವಯಸ್ಸಿನ ದ್ವಾರಕೀಶ್ ಅವರು ವಯೋಸಹಜ ಕಾಯಿಲೆಯಿಂದ ಬಳುತ್ತಿದ್ದರು.ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಬಾಲಕೃಷ್ಣ, ಅಶ್ವಥ್, ಸೇರಿದಂತೆ ಕನ್ನಡ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್‌ಗಳ ಜೊತೆ ಅಭಿನಯಿಸಿದ ಕೀರ್ತಿ ದ್ವಾರಕೀಶ್ ಅವರಿಗೆ ಸಲ್ಲುತ್ತದೆ. 1964ರಲ್ಲಿ ವೀರಸಂಕಲ್ಪ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಬಂದ ದ್ವಾರಕೀಶ್ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. 40ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿರುವ ಇವರು 15ಕ್ಕೂ ಹೆಚ್ಚು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. ಡಾ.ರಾಜ್‌ಕುಮಾರ್, ವಿಷ್ಣುವರ್ಧನ್ ಅವರಂತಹ ದಿಗ್ಗಜರ ಸಿನಿಮಾಗಳನ್ನು ನಿರ್ಮಿಸಿ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದರು. ಚಿತ್ರರಂಗದಲ್ಲಿ ಅವರ ಅಪಾರ ಸೇವೆ ಪರಿಗಣಿಸಿ ಬೆಂಗಳೂರು ವಿಶ್ವವಿದ್ಯಾನಿಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಿತ್ತು.
ಅಪರ್ಣಾ:
ಅಪ್ಪಟ ಕನ್ನಡದಲ್ಲಿಯೇ ನಿರೂಪಣೆ ಮಾಡುತ್ತಿದ್ದ ಅಪರ್ಣಾ ಧ್ವನಿಗೆ ಮಾರುಹೋಗದವರೇ ಇಲ್ಲ. ನನ್ನ ಗುರುತು ಕನ್ನಡ, ನನ್ನ ಅಸ್ತಿತ್ವ ಕನ್ನಡ ಎಂದು ಹೆಮ್ಮೆಯಿಂದ ಹೇಳುತ್ತಿದ್ದ ಅಪರ್ಣಾ 2024ರ ಜುಲೈ 11 ರಂದು ಶ್ವಾಸಕೋಶದ ಕ್ಯಾನ್ಸರ್‌ನಿಂದ ನಿಧನರಾದರು. ನಿರೂಪಣೆಯಷ್ಟೇ ಅಲ್ಲದೇ ಮಸಣದ ಹೂವು, ಇನ್ಸ್ ಪೆಕ್ಟರ್ ವಿಕ್ರಮ್ ಸೇರಿದಂತೆ ಹಲವು ಚಿತ್ರಗಳಲ್ಲೂ ಅಪರ್ಣಾ ನಟಿಸಿದ್ದರು.ನಮ್ಮ ಮೆಟ್ರೋ ಸೇರಿದಂತೆ ಅನೇಕ ಪ್ರಕಟಣೆಗಳಿಗೆ ಧ್ವನಿ ನೀಡಿದ್ದ ಅಪರ್ಣಾ, ಮೂಡಲ ಮನೆ, ಮುಕ್ತ ಮುಕ್ತ ಮೊದಲಾದ ಧಾರಾವಾಹಿಗಳಲ್ಲೂ ನಟಿಸಿದ್ದರು. ದೀಪಾವಳಿ ಕಾರ್ಯಕ್ರಮದಲ್ಲಿ ಸತತ 8 ಗಂಟೆಗಳ ಕಾಲ ನಿರೂಪಣೆ ಮಾಡಿದ್ದ ಅಪರ್ಣಾ, 2013 ರಲ್ಲಿ ಬಿಗ್ ಬಾಸ್ ಶೋ ನಲ್ಲಿಯೂ ಭಾಗವಹಿಸಿದ್ದರು.
ರಾಮೋಜಿ ರಾವ್:
ಆಂಧ್ರ ಪ್ರದೇಶದ ಗುಂಟೂರಿನ ಸಮೀಪದ ಪೆದಪರುಪುಡಿ ಗ್ರಾಮದಲ್ಲಿ 1936 ನವೆಂಬರ್ 16ರಂದು ರೈತ ಕುಟುಂಬದಲ್ಲಿ ಜನಿಸಿದ ರಾಮೋಜಿ ರಾವ್ ಸಾಧನೆ ಅಸಾಮಾನ್ಯವಾದದ್ದು. 2024 ಜೂನ್ 8ರಂದು ತಮ್ಮ 87ನೇ ವಯಸ್ಸಿನಲ್ಲಿ ರಾವ್ ಇಹಲೋಕ ತ್ಯಜಿಸಿದರು. ಆದರೆ ತಾವು ಪ್ರವೇಶಿಸಿದ ಪ್ರತಿಯೊಂದು ಕ್ಷೇತ್ರಕ್ಕೂ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿದ್ದು, ಶಾಶ್ವತ ಪರಂಪರೆಯನ್ನೇ ಬಿಟ್ಟು ಹೋಗಿದ್ದಾರೆ. 1962ರಲ್ಲಿ ಮಾರ್ಗದರ್ಶಿ ಚಿಟ್‌ಫಂಡ್, 1974ರಲ್ಲಿ ಈನಾಡು, 1980ರಲ್ಲಿ ಪ್ರಿಯಾ ಫುಡ್ಸ್, 1980ರಲ್ಲಿ ಡಾಲ್ಫಿನ್ ಗ್ರೂಪ್ ಆಫ್ ಹೋಟೆಲ್ಸ್, 1983ರಲ್ಲಿ ಉಷಾಕಿರಣ್ ಮೂವೀಸ್, 1995ರಲ್ಲಿ ಈಟಿವಿ ವಾಹಿನಿಗಳು, 1996ರಲ್ಲಿ ರಾಮೋಜಿ ಫಿಲ್ಮ್ ಸಿಟಿ, 2002ರಲ್ಲಿ ರಮಾದೇವಿ ಪಬ್ಲಿಕ್ ಸ್ಕೂಲ್ ಮತ್ತು 2019ರಲ್ಲಿ ಈಟಿವಿ ಭಾರತ್ ಸ್ಥಾಪಿಸಿದರು. ಇಂದಿಗೂ ಈ ಎಲ್ಲಾ ಸಂಸ್ಥೆಗಳು ಯಶಸ್ವಿಯಾಗಿ ನಡೆಯುತ್ತಿವೆ.