ಲಾಕ್‍ಡೌನ್ ನಡುವೆ ಬೆಂಗ್ಳೂರಿನಲ್ಲಿ ಮದ್ಯ ಮಾರಾಟ- 90 ರೂ. ಎಣ್ಣೆ 600ಕ್ಕೆ ಮಾರಾಟ

Public TV
3 Min Read
PUBLIC STING

-ಖಾಕಿ ಸರ್ಪಗಾವಲಿನ ನಡ್ವೆ  ಬಿಂದಾಸ್ ಮಾರಾಟ
-ಹಸಿವು ತುಂಬಿಸುವರಿಂದಲೇ ಮದ್ಯ ಪೂರೈಕೆ

ಬೆಂಗಳೂರು: ಕೊರೊನಾ ತಡೆಗಾಗಿ ವಿಧಿಸಿರುವ ಲಾಕ್‍ಡೌನ್ ನ್ನು ಕೆಲ ಖದೀಮರು ಬಂಡವಾಳವಾಗಿ ಮಾಡಿಕೊಂಡು ಅಕ್ರಮವಾಗಿ ಮದ್ಯ ಮಾರಾಟದಲ್ಲಿ ತೊಡಗಿಕೊಂಡಿದ್ದಾರೆ. ಪಬ್ಲಿಕ್ ಟಿವಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಎಣ್ಣೆ ದಂಧೆ ಬಯಲಾಗಿದೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಸರ್ಕಾರ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಕೆಲ ದಂಧೆಕೋರರು ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು 90 ರೂ. ಬೆಲೆಯ ಮದ್ಯವನ್ನು ಬರೋಬ್ಬರಿ 600 ರೂ.ಗೆ ಮಾರಾಟ ಮಾಡುತ್ತಿರೋದು ಪಬ್ಲಿಕ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Liquor Sting 6

ರಾಜ್ಯದ ಮೂಲೆ ಮೂಲೆಗಳಿಂದ ಮದ್ಯವನ್ನು ತರುತ್ತಿರುವ ದಂಧೆಕೋರರು ಖಾಕಿ ಸರ್ಪಗಾವಲಿನಲ್ಲೇ ರಾಜಾರೋಷವಾಗಿ ದಂಧೆ ನಡೆಸುತ್ತಿದ್ದಾರೆ. ಹೆದ್ದಾರಿಯಲ್ಲಿ ಖಾಕಿ ಬಂದೋಬಸ್ತ್ ಕಲ್ಪಿಸಲಾಗಿದ್ದರೂ, ಮದ್ಯ ಸಿಲಿಕಾನ್ ಸಿಟಿ ಪ್ರವೇಶಿಸುತ್ತಿರೋದು ಗಮನಿಸಿದ್ರೆ, ಮೇಲ್ನೋಟಕ್ಕೆ ಪೊಲೀಸರ ವೈಫಲ್ಯ ಎದ್ದು ಕಾಣಿಸುತ್ತಿದೆ.

Liquor Sting 7

ಮಧ್ಯರಾತ್ರಿ ಎರಡು, ಮೂರು ಗಂಟೆಗೆ ರಾಮನಗರ, ಕುಣಿಗಲ್, ತುಮಕೂರಿನಿಂದ ಬೆಂಗಳೂರಿಗೆ ಮದ್ಯ ಪೂರೈಕೆ ಆಗುತ್ತಿದೆ. ಈ ಮದ್ಯವನ್ನು ಸ್ವಿಗ್ಗಿ, ಝೋಮ್ಯಾಟೊ ಬ್ಯಾಗ್ ಗಳಲ್ಲಿ ಖದೀಮರು ಹಾಕಿಕೊಂಡು ಸಿಲಿಕಾನ್ ಸಿಟಿಯಲ್ಲಿ ಮನೆ ಮನೆಗೆ ತೆರಳಿ ಸರಬರಾಜು ಮಾಡುತ್ತಿದ್ದಾರೆ. ಯಾರ ಭಯವಿಲ್ಲದೇ ಮದ್ಯ ಮಾರಾಟ ಮಾಡುತ್ತಿರೋದು ಸಿಲಿಕಾನ್ ಸಿಟಿ ಪೊಲೀಸರಿಗೆ ಗೊತ್ತೇ ಇಲ್ವಾ ಅನ್ನೋ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

Liquor Sting 2

ಅಕ್ರಮ ಮದ್ಯ ಮಾರಾಟದ ಸುದ್ದಿ ತಿಳಿಯುತ್ತಿದ್ದಂತೆ ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ತಂಡದ ಕ್ಯಾಮೆರಾದಲ್ಲಿ ಎಣ್ಣೆ ದಂಧೆ ಸಂಪೂರ್ಣವಾಗಿ ಸೆರೆಯಾಗಿದೆ. ಪಬ್ಲಿಕ್ ಟಿವಿ ಪ್ರತಿನಿಧಿ ಮದ್ಯ ಖರೀದಿಸುವ ಗ್ರಾಹಕನಾಗಿ ಮಾರುವೇಷದಲ್ಲಿ ಹೋದಾಗ ದಂಧೆಕೋರ ದಂಧೆಯ ಸಂಪೂರ್ಣ ಮಾಹಿತಿಯನ್ನು ರಿವೀಲ್ ಮಾಡಿದ್ದಾನೆ.

ಸ್ಥಳ- ಸುಂಕದಕಟ್ಟೆ
ಪಬ್ಲಿಕ್ ಟಿವಿ: ಎಷ್ಟು ಹೇಳಿದ್ರು
ಮದ್ಯ ವಿತರಕ : 600 ರೂಪಾಯಿ
ಪಬ್ಲಿಕ್ ಟಿವಿ: ಹೇ..ನನ್ಗೆ 550 ಹೇಳಿದ್ರು
ಮದ್ಯ ವಿತರಕ: ಇಲ್ಲ.. ಕೇಳ್ರಿ..ಸಿಗೊದೆ ನಮ್ಗೆ 250. ಊರು ಕಡೆಯಿಂದ ತರಿಸೋದು ನಾವು. ಇಲ್ಲೆಲ್ಲ ಸೀಲ್ ಹೊಡೆದಿದಾರೆ.
ಪಬ್ಲಿಕ್ ಟಿವಿ: ನೈಂಟಿ ರೂಪಿಸ್ ಬ್ರೋ ಇದು
ಮದ್ಯ ವಿತರಕ: ಗೊತ್ತು ಗುರು..ನಮ್ಗೂ ಗೊತ್ತು ನಿಮ್ಗೂ ಗೊತ್ತು. ನಾವು ಅಲ್ಲಿಂದ ತರಬೇಕಲ್ಲ
ಪಬ್ಲಿಕ್ ಟಿವಿ: ಎಲ್ಲಿಂದ ತರೋದು
ಮದ್ಯ ವಿತರಕ: ಬೇರೆ ಕಡೆಯಿಂದ.
ಪಬ್ಲಿಕ್ ಟಿವಿ: ಒಂದು ರೇಟ್ ಮಾಡಿ ಕೊಡಿ. ಇವತ್ತಿಗಷ್ಟೆ ಅಲ್ಲ.
ಮದ್ಯ ವಿತರಕ: ನೋಡಣ್ಣ. ನಮ್ದು ಆಗಿದ್ರೆ ಹೇಗಾದ್ರೂ ಆಗ್ತಿತ್ತು. ಅಲ್ಲೇ 550 ರೂಪಾಯಿ ಕೊಟ್ಟು ತರ್ತಿವಿ.
ಮತ್ತೊಬ್ಬ ಮದ್ಯ ವಿತರಕ: ಅದ್ರಲ್ಲಿ ಏನು ಸಿಗಲ್ಲಣ್ಣ. ಸುಮ್ನೆ
ಪಬ್ಲಿಕ್ ಟಿವಿ: ನೀವು ಎಲ್ಲಿಂದ ತರೋದು?
ಮದ್ಯ ವಿತರಕ: ರಾಮನಗರ ಆಕಡೆ ಈಕಡೆಯಿಂದ ತರೋದು.ಕುಣಿಗಲ್ ಯಡಿಯೂರುಯಿಂದ ತರ್ತಾರೆ. ಇಲ್ಲಿ ಎಲ್ಲಿಯೂ ಸಿಗಲ್ಲಣ್ಣ
ಪಬ್ಲಿಕ್ ಟಿವಿ: ಬೇರೆ ಕಡೆಯಿಂದ ತರ್ತಿರಲ್ಲ..ನಿಮ್ಗೆ ಭಯ ಆಗಲ್ವಾ..!
ಮದ್ಯ ವಿತರಕ: ಆಗ್ತದೆ ಏನು ಮಾಡೋದು ಅಣ.
ಪಬ್ಲಿಕ್ ಟಿವಿ: ಕವರ್ ಇಲ್ವಾ?
ಮದ್ಯ ವಿತರಕ: ಹಂಗೆ ಎತ್ಕೊಂಡು ಬಿಡಿ
ಪಬ್ಲಿಕ್ ಟಿವಿ: ಹೇಗೆ ಒಟ್ಟಿಗೆ ಕಾಟನ್ ತರ ತರಿಸ್ತೀರಾ..?
ಮದ್ಯ ವಿತರಕ: ಒಂದು ಕೇಸ್ ತರಿಸ್ತೀವಿ
ಪಬ್ಲಿಕ್ ಟಿವಿ : ಎಲ್ಲಿಂದ ಹೇಗೆ ತರಿಸ್ತಿರಿ?
ಮದ್ಯ ವಿತರಕ: ಇದ್ರಲ್ಲಿ ಇಟ್ಕೊಳ್ಳೋದು
ಪಬ್ಲಿಕ್ ಟಿವಿ: ಬೈಕಾ..? ಬೈಕ್ ಬಿಡಲ್ವಾಲ್ಲ?
ಮದ್ಯ ವಿತರಕ: ಬರಬಹುದು
ಪಬ್ಲಿಕ್ ಟಿವಿ: ಬೈಕ್ ಓಡಾಡಂಗಿಲ್ವಲ್ಲ. ಹಂಗೆ ಮಾಡ್ತಿರಿ?
ಮದ್ಯ ವಿತರಕ: ಅದು ಇದು ಹುಷಾರಿಲ್ಲ ಅಂತ ಹೇಳ್ಕೊಂಡು ಹೋಗಬೇಕು.
ಪಬ್ಲಿಕ್ ಟಿವಿ: ಕೇಸಲ್ಲಿ ಎಷ್ಟಿರುತ್ತೆ?
ಮದ್ಯ ವಿತರಕ : 48
ಪಬ್ಲಿಕ್ ಟಿವಿ : 48ನೂ ಗಾಡಿಯಲ್ಲೇ ಇಡುತ್ತಾ…?
ಮದ್ಯ ವಿತರಕ: ಅಲ್ಲಿಲ್ಲಿ ಇಡ್ಕೊಂಡು ಬರ್ತಿವಿ
ಪಬ್ಲಿಕ್ ಟಿವಿ: ಅಷ್ಟು ರಿಸ್ಕ್ ತೊಗೋತಿರಿ. ಯಾರದ್ರೂ ಏನಾದ್ರು ಮಾಡಿದ್ರೆ
ಮದ್ಯ ವಿತರಕ: ಸಿಗೋದು 50 ರೂಪಾಯಿ ಅಷ್ಟೆ
ಪಬ್ಲಿಕ್ ಟಿವಿ: ಮತ್ತೆ ಯಾಕೆ ಅಷ್ಟೊಂದು ರಿಸ್ಕ್ ತೊಗೊತಿರಿ. ಕಾಲೇಜಿಗೆ ಹೋಗಲ್ವಾ..?
ಮದ್ಯ ವಿತರಕ: ಇನ್ನೊಂದು ಎಕ್ಸಾಂ ಇದೆ. ಇಂಗ್ಲೀಷ್.
ಪಬ್ಲಿಕ್ ಟಿವಿ: ಸೆಕೆಂಡ್ ಪಿಯುಸಿನಾ
ಮದ್ಯ ವಿತರಕ: ಹು.
ಪಬ್ಲಿಕ್ ಟಿವಿ: ಈಗ ನಿಮ್ಗೆ ಪಾಸ್ ಇರಲ್ವಲ್ಲ. ಹೇಗೆ ಹೊರಗಡೆ ಬರ್ತಿರಿ
ಮದ್ಯ ವಿತರಕ: ನೈಟ್ 2, 3 ಗಂಟೆಗೆ ಹೋಗ್ತಿವಿ

Liquor Sting 5

ಸುಂಕದಕಟ್ಟೆ, ಕುರುಬರ ಹಳ್ಳಿ ಹೀಗೆ ಬೆಂಗಳೂರಿನ ಹಲವು ಕಡೆ ಮದ್ಯ ಮಾರಾಟ ಮಾಡಲಾಗುತ್ತಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಮಧ್ಯರಾತ್ರಿ ತರಕಾರಿ, ದಿನಸಿ ತರುವ ವಾಹನಗಳ ಮೂಲಕವೂ ಮದ್ಯ ನಗರಕ್ಕೆ ಬರುತ್ತಿದೆ ಎನ್ನಲಾಗುತ್ತಿದೆ. ಟೋಲ್ ಗಳಲ್ಲಿ ಸಾಲು ಸಾಲು ಪೊಲೀಸರು ಇದ್ರೂ, ಅವರ ದಿಕ್ಕು ತಪ್ಪಿಸಿ ಎಣ್ಣೆ ರವಾನೆ ಮಾಡಲಾಗುತ್ತದೆ. ಈ ಸುದ್ದಿ ನೋಡಿಯಾದ್ರೂ ಅಬಕಾರಿ ಸಚಿವ ನಾಗೇಶ್ ಮತ್ತು ಪೊಲೀಸರು ಎಚ್ಚೆತ್ತುಕೊಂಡು ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *