ಓರಗೆಯ ಗಂಡು ಮಕ್ಕಳೊಂದಿಗೆ ಬೆಳೆದವಳಿಗೆ ತಾನು ಹೆಣ್ಣು ಅನ್ನೋದೇ ಮರೆತು ಹೋಗಿತ್ತೇನೋ. ಶಸ್ತ್ರ ಶಾಸ್ತ್ರ ಪಾರಂಗತೆಯಾದವಳಿಗೆ ಯುದ್ಧ ಭೂಮಿಯೇ ಕರ್ಮಸ್ಥಾನವಾಗಿಬಿಟ್ಟಿತ್ತು. ಉಳ್ಳಾಲ ರಾಜ್ಯದ ಪಟ್ಟಕ್ಕೇರಿದ ಮಹಾರಾಣಿ ಪೋರ್ಚುಗೀಸರ ವಿರುದ್ಧ ತೊಡೆತಟ್ಟಿ ನಿಂತುಬಿಟ್ಟಾಕೆ. ಓಡುವ ಕುದುರೆಗೆ ಲಗಾಮು ಹಾಕುತ್ತಿದ್ದ ಛಲಗಾತಿ. ಮದವೇರಿದ ಗಜಕ್ಕೆ ಅಂಕುಶ ಹಾಕಿ ಹತೋಟಿಗೆ ತರುತ್ತಿದ್ದ ದಿಟ್ಟೆ. ಗಂಡನೇ ಶತ್ರುಪಾಳಯದ ಜೊತೆ ಸೇರಿ ಕತ್ತಿ ಮಸೆದಾಗ ಅಂಜದೆ ಕಚ್ಚೆ ಕಟ್ಟಿ ನಿಂತ ರಣ ಚಂಡಿ. ಮಂಗಳೂರು-ಉಳ್ಳಾಲ ರಾಜ್ಯಗಳ ರಕ್ಷಣೆಗಾಗಿ ತನ್ನ ವೈಯುಕ್ತಿಕ ಜೀವನವನ್ನೇ ಬಲಿಕೊಟ್ಟ ಆ ಗಂಡೆದೆಯ ಹೆಣ್ಣೇ ವೀರ ರಾಣಿ ಅಬ್ಬಕ್ಕ.
ಉಳ್ಳಾಲ…ಇಲ್ಲಿ ಹರಡಿರುವ ವಿಶಾಲ ಸಾಗರದ ತಟದಲ್ಲಿರುವ ಪ್ರಶಾಂತವಾದ ಊರು. ಭೋರ್ಗರೆಯುತ್ತಾ ದಡಕ್ಕೆ ತಾಕಿ ಮತ್ತೆ ಹಿಮ್ಮುಖವಾಗಿ ಹೋಗೋ ಅಲೆಗಳು. ಕಣ್ಣು ಹಾಯಿಸಿದಷ್ಟು ನೀಲಾಗಾಸವನ್ನೇ ಚುಂಬಿಸುತ್ತಿದೆಯೇನೋ ಅನ್ನೋ ಹಾಗಿರೋ ಕಡಲು. ತುಳುವರ ವೀರಪರಂಪರೆ ಸಾರುವ ಉಳ್ಳಾಲದಲ್ಲಿದ್ದವಳೇ ರಾಣಿ ಅಬ್ಬಕ್ಕ.
Advertisement
ಉಳ್ಳಾಲ ಕೋಟೆ ರಾಣಿ ಅಬ್ಬಕ್ಕನ ರಾಜಧಾನಿಯಾಗಿತ್ತು. ಅಷ್ಟರಲ್ಲಾಗ್ಲೇ ಗೋವಾವನ್ನು ಆಕ್ರಮಿಸಿಕೊಂಡಿದ್ದ ಪೋರ್ಚುಗೀಸರು ಉಳ್ಳಾಲದತ್ತ ತಮ್ಮ ಗಮನಹರಿಸಿದ್ರು. 1525ರಲ್ಲಿ ದಕ್ಷಿಣ ಕರಾವಳಿಯ ಭಾಗಕ್ಕೆ ದಾಳಿ ಮಾಡಿ ಮಂಗಳೂರು ಕೋಟೆಯನ್ನೇ ಹೊಡೆದುರುಳಿಸಿಬಿಟ್ಟಿದ್ರು. ಉಳ್ಳಾಲದ ಮೂಲಕವಾಗಿ ಸಾಂಬಾರ ಸಾಮಾಗ್ರಿಗಳು ಸೇರಿದಂತೆ ಇತರೆ ವಸ್ತುಗಳ ಸಾಗಾಣೆಗೆ ಅನುಕೂಲಕರವಾಗಿತ್ತು. ಹೀಗಾಗಿ ಪೋರ್ಚುಗೀಸರು, ಡಚ್ಚರು ಹಾಗೂ ಬ್ರಿಟೀಷರ ಕಾಲಾವಧಿಯಲ್ಲೂ ಉಳ್ಳಾಲಕ್ಕಾಗಿ ಕಾದಾಟ ನಡೀತಾನೇ ಇತ್ತು. ಆದ್ರೆ, ಪೋರ್ಚುಗೀಸರು ಭಾರತದಲ್ಲಿ ತಮ್ಮ ವಸಾಹತನ್ನು ಸ್ಥಾಪಿಸಲು ಬಂದಾಗ ಅವರನ್ನು ಹೊಡೆದೋಡಿಸುವಲ್ಲಿ ರಾಣಿ ಅಬ್ಬಕ್ಕನ ಪಾತ್ರವನ್ನು ನೆನಪಿಸಿಕೊಳ್ಳಲೇಬೇಕು. 1525ರಲ್ಲಿ ನಡೆದ ಮೊದಲ ದಾಳಿಯ ಬಳಿಕ ಅಬ್ಬಕ್ಕ ತನ್ನ ಸೇನೆಯನ್ನು ಬಲಪಡಿಸುವಲ್ಲಿ ಮುತುವರ್ಜಿವಹಿಸಿದ್ದಳು.
Advertisement
ಆದ್ರೆ, 1558ರಲ್ಲಿ ನಡೆದ ಯುದ್ಧ ಮಾತ್ರ ಅಬ್ಬಕ್ಕನ ಜಂಗಾಬಲವನ್ನೇ ಉಡುಗಿಸಿಬಿಟ್ಟಿತ್ತು. ಮಕ್ಕಳು, ಹಿರಿಯರೆನ್ನದೆ ಸಾವಿರಾರು ಜನರನ್ನು ಪೋರ್ಚುಗೀಸರ ಸೇನೆ ಸಜೀವವಾಗಿ ದಹಿಸಿಬಿಟ್ಟಿತ್ತು. ಇಡೀ ನಗರವೇ ಬೆಂಕಿಯ ಕೆಂಡದಂತೆ ನಿಗಿ ನಿಗಿ ಉರೀತಾ ಇತ್ತು. ತದ ನಂತರ 1568ರ ದಾಳಿಯಲ್ಲಿ ಅಬ್ಬಕ್ಕ ಎಲ್ಲವನ್ನೂ ಕಳೆದುಕೊಂಡು ಮಸೀದಿಯೊಂದರಲ್ಲಿ ಆಶ್ರಯ ಪಡೆಯುವ ಸ್ಥಿತಿಗೆ ತಲುಪ್ಪಿದ್ದಳು. ಆದ್ರೆ ಇಷ್ಟಕ್ಕೇ ಸುಮ್ಮನಾಗದ ಅಬ್ಬಕ್ಕ ಕೇವಲ 200 ಸೈನಿಕರನ್ನು ಕಟ್ಟಿಕೊಂಡು ಶತ್ರುಪಾಳಯಕ್ಕೆ ಎದೆಯೊಡ್ಡಿ ನಿಂತಿದ್ಲು.
Advertisement
1569ರಲ್ಲಿ ಮತ್ತೆ ಅಂತಹದ್ದೇ ದಾಳಿ ನಡೆದಿತ್ತು. ಆದ್ರೆ ಇದೊಂದು ರೀತಿಯಲ್ಲಿ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗದ ಮಾದರಿಯಲ್ಲಿ ನಡೆದು ಹೋಯ್ತು. ಇಷ್ಟಾದ್ರೂ ಅಬ್ಬಕ್ಕ ಮಾತ್ರ ಪೋರ್ಚುಗೀಸರ ಕೈಗೆ ಸಿಗ್ತಾನೇ ಇರಲಿಲ್ಲ. ಬಿಜಾಪುರದ ಸುಲ್ತಾನರು ಹಾಗೂ ಕಲ್ಕತ್ತಾದ ಝಮೋರಿನ್‍ಗಳ ಸಾಥ್ ತೆಗೆದುಕೊಂಡ ಅಬ್ಬಕ್ಕ ರಿಪುಗಳ ರುಂಡ ಚೆಂಡಾಡಲು ಟೊಂಕ ಕಟ್ಟಿ ನಿಂತಿದ್ಲು. ಅದೇ ಕೊನೆ ಆ ಯುದ್ಧದಲ್ಲಿ ಅಬ್ಬಕ್ಕ ಸೆರೆಮನೆ ಸೇರಿದ್ಲು.
Advertisement
ಅಬ್ಬಕ್ಕ ಈಗ ಒಂಟಿಯಾಗಿಬಿಟ್ಟಿದ್ಲು. ಅತ್ತದರಿ ಇತ್ತ ಪುಲಿ ಅನ್ನೋ ಪರಿಸ್ಥಿತಿಯಲ್ಲಿ ವಿಲವಿಲ ಒದ್ದಾಡಿಬಿಟ್ಳು. ಆದ್ರೆ ಈಕೆಯ ಧೈರ್ಯ ಹಾಗೂ ಸಾಹಸೀ ಪ್ರವೃತ್ತಿಯಿಂದಾಗಿ ಅಂತರಾಷ್ಟ್ರೀಯ ಪ್ರಸಿದ್ಧಿ ಪಡೆದಿದ್ಲು. ಇದೇ ಸಮಯದಲ್ಲಿ ವಿಜಯನಗರ ಸಾಮ್ರಾಜ್ಯದ ಪ್ರಾಬಲ್ಯ ಕ್ಷೀಣಿಸುತ್ತಾ ಬಂದಿತ್ತು. ಪೋರ್ಚುಗೀಸ ಕಡಲುಗಳ್ಳರು ದಕ್ಷಿಣ ಭಾರತದ ನೌಕಾ ವ್ಯಾಪಾರವನ್ನು ಪೋರ್ಚುಗೀಸರು ಸಂಪೂರ್ಣವಾಗಿ ಹತೋಟಿಗೆ ತೆಗೆದುಕೊಂಡಿದ್ರು. ಇದಕ್ಕೆ ಹೊಡೆತಕೊಡುವ ಉದ್ದೇಶದಿಂದ ಕೆಳದಿ ನಾಯಕರ ನೆರವು ಪಡೆದ ಅಬ್ಬಕ್ಕ ಮಧ್ಯಪ್ರಾಚ್ಯ ದೇಶಗಳೊಂದಿಗೆ ವ್ಯಾಪಾರ ಶುರುಹಚ್ಚಿಕೊಂಡಿದ್ಲು. ಮಂಗಳೂರಿನ ಕೋಟೆಯನ್ನು ವಶಪಡಿಸಿಕೊಂಡಿದ್ದ ಪೋರ್ಚುಗೀಸರಿಗೆ ತಕ್ಕ ಶಾಸ್ತಿ ಮಾಡಲು ಅಬ್ಬಕ್ಕ ಕಾಯ್ತಾ ಇದ್ಲು. ತನ್ನ ಕುಶಲ ರಾಜತಂತ್ರದೊಂದಿಗೆ ಕ್ಯಾಲಿಕಟ್‍ನ ಝಾಮೋರಿನ್, ಅರಬ್‍ನ ಮೂರ್ ರು, ಮೊಪ್ಲಾ ಜನಾಂಗ ಹಾಗೂ ಕೆಳದಿ ರಾಜರ ನೆರವಿನೊಂದಿಗೆ ಮತ್ತೆ ಯುದ್ಧ ಘೋಷಿಸಿದ್ಲು.
ಅಂದಹಾಗೆ ಅಬ್ಬಕ್ಕಳಿಗೆ ವಿಶೇಷವಾದ ಯುದ್ಧಕಲೆಯೊಂದು ಕರತಲಾಮಲಕವಾಗಿರುತ್ತೆ. ಅದುವೇ ಅಗ್ನಿವನ. ಈ ವಿಶೇಷ ತಂತ್ರ ಗೊತ್ತಿದ್ದ ಕೊನೆಯ ರಾಣಿಯೂ ಈಕೆಯೇ ಆಗಿದ್ದಳು. ಈ ಯುದ್ಧದಲ್ಲಿ ಪೋರ್ಚುಗೀಸರು ಮಣ್ಣುಮುಕ್ತಾರೆ. ಅಬ್ಬಕ್ಕಳ ಸೇನಾನಿಯಂತ್ರಣ ಕಂಡು ಯುದ್ಧಭೂಮಿಗೆ ಬಂದ ಪರಕೀಯರು ಒಂದು ಕ್ಷಣ ದಂಗಾಗಿ ಹೋಗ್ತಾರೆ. ಬೇಕ, ಬಸರೂರುಗಳಿಂದಲೂ ಹರಿದು ಬಂದ ನೆರವನ್ನು ಕಂಡು ಅಬ್ಬಕ್ಕಳಿಗೆ ಆನೆಬಲಬಂದಂತಾಗಿತ್ತು. ಆದ್ರೆ, ಅವೆಲ್ಲಾ ಬಂದು ಸೇರುವವವರೆಗೆ ಸ್ವಲ್ಪ ದೂರದ ತಲಪಾಡಿಯಲ್ಲಿ ತಲೆಮರೆಸಿಕೊಳ್ಳುವುದು ಸೂಕ್ತ ಅಂತಾ ಮಂತ್ರಿಗಳು ಅಬ್ಬಕ್ಕ ರಾಣಿಗೆ ತಿಳಿಸಿದ್ರು. ಆದ್ರೆ ಮಕ್ಕಳಂತಿರುವ ಪ್ರಜೆಗಳನ್ನು ಕಷ್ಟದಲ್ಲಿ ದೂಡಿ ತಾನು ಹೇಡಿಯಂತೆ ಕೂರುವುದು ಅಬ್ಬಕ್ಕಳಿಗೆ ಬೇಕಿರಲಿಲ್ಲ.
ಇದಾದ ಬಳಿಕ 1568ರಲ್ಲಿ ಮತ್ತೊಮ್ಮೆ ಉಳ್ಳಾಲದ ಮೇಲೆ ಸೇನೆಯನ್ನು ಪೋರ್ಚುಗೀಸರು ಛೂ ಬಿಡ್ತಾರೆ. ಈ ಕಾಳಗದಲ್ಲಿ ಅಬ್ಬಕ್ಕ ವೈರಿ ಪಡೆಯ ಸೇನಾಧಿಕಾರಿಯನ್ನೇ ನೆಲಕ್ಕುರುಳಿಸುತ್ತಾಳೆ. ಈ ಯುದ್ಧದಲ್ಲಿ ವೈರಿಪಡೆ ಶಾಂತಿಯ ಒಡಂಬಡಿಕೆಗೆ ಬರುತ್ತಾರೆ. ಅಬ್ಬಕ್ಕಳನ್ನು ಹೇಗಾದ್ರೂ ಮಣಿಸಲೇಬೇಕೆಂದು ನಿರ್ಧರಿಸಿದ್ದ ಗೋವಾದ ವೈಸ್ ರಾಯ್ ತನ್ನ 3000 ಜನ ಸೇನಾ ಬಲ ಹಾಗೂ ಅನೇಕ ಯುದ್ಧ ನೌಕೆಗಳೊಂದಿಗೆ ಉಳ್ಳಾಲಕ್ಕೆ ಲಗ್ಗೆ ಇಡುತ್ತಾನೆ. ಆಕ್ರಮಣದ ಸುದ್ದಿ ಕೇಳಿದ ಅಬ್ಬಕ್ಕ ಯುದ್ಧವಸ್ತ್ರ ಧರಿಸಿ ಪ್ರತಿರೋಧ ಒಡ್ಡುತ್ತಾಳೆ.
ಆದ್ರೆ ಈ ಯುದ್ಧವೇ ಅಬ್ಬಕ್ಕಳ ಬಾಳಿನ ಕೊನೆಯ ಯುದ್ಧವಾಗುತ್ತದೆ. ಆಕೆಯ ಮೇಲೆ ಗುಂಡಿನ ಸುರಿಮಳೆಯೇ ಬಂದೆರಗುತ್ತದೆ. ಸೈನಿಕರನ್ನು ಯುದ್ಧಕ್ಕಾಗಿ ಹುರಿದುಂಬಿಸುತ್ತಾ ವೀರಮರಣವನ್ನು ಹೊಂದುತ್ತಾಳೆ. ಇದು ಅಬ್ಬಕ್ಕ ಅನ್ನೋ ಧೀರ ಮಹಿಳೆಯ ರೋಚಕ ಕಥೆಯ ಸಂಕ್ಷಿಪ್ತವಷ್ಟೇ. ಭಾರತದ ಇತಿಹಾಸದುದ್ದಕ್ಕೂ ಕಾಣುವುದು ಇಂತಹಾ ವೀರ ಮಹಿಳೆ, ಪುರುಷರ ಕಥೆಗಳನ್ನೇ. ಅರಬ್ ಹಾಗೂ ಪೋರ್ಚುಗೀಸರ ದಾಖಲೆಗಳಲ್ಲಿ ಈಕೆ ಸರಳ,ಸಜ್ಜನ, ದೃಢ ವಿಚಾರಗಳ ಬಗ್ಗೆ ವಿವರಿಸಲಾಗಿದ್ದು ಈಕೆಯನ್ನು ಕೊಂಡಾಡಿದ್ದಾರೆ. ಇತಿಹಾಸದ ಪುಟಗಳಲ್ಲಿ ವೀರಗಾಥೆಯನ್ನ ಬರೆದ ಕಡಲ ತಡಿಯ ಅಬ್ಬಕ್ಕ ಅನ್ನೋ ಸಿಂಹಿಣಿಗೆ ನಮ್ಮದೊಂದು ಸಲಾಂ.
ಕ್ಷಮಾ ಭಾರದ್ವಾಜ್, ಉಜಿರೆ