ಬೆಳಗಾವಿ: ಸಿಖ್, ಬೌದ್ಧರಂತೆ ಲಿಂಗಾಯತಕ್ಕೂ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನಕಾರ್ಯದರ್ಶಿ ಎಸ್.ಎಂ.ಜಾಮದಾರ ಆಗ್ರಹಿಸಿದರು.
ಬೆಳಗಾವಿಯ ಜಾಗತಿಕ ಲಿಂಗಾಯತ ಮಹಾಸಭಾ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆದಿದ್ದು, ಈ ಕುರಿತು ಜಾಮದಾರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆಗಾಗಿ ನಮ್ಮ ಹೋರಾಟ ನಿಂತಿಲ್ಲ. ನಮ್ಮ ಹಕ್ಕಿಗಾಗಿ ಹೋರಾಟ ಮುಂದುವರಿದಿದೆ. ಜನರಲ್ಲಿ ಅರಿವು ಮೂಡಿಸುವ ಕೆಲಸ ಭರದಿಂದ ಸಾಗಿದೆ. ಕರ್ನಾಟಕಕ್ಕಿಂತ ಮಹಾರಾಷ್ಟ್ರದಲ್ಲಿ ಜಾಗೃತಿ ಹೆಚ್ಚಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: 21 ವರ್ಷಕ್ಕೆ ಗ್ರಾಮದ ಮುಖ್ಯಸ್ಥೆಯಾಗಿ ಇತಿಹಾಸ ಸೃಷ್ಟಿಸಿದ ಯುವತಿ
ಕರ್ನಾಟಕದಲ್ಲಿಯೂ ಜಾಗೃತಿ ಹೆಚ್ಚಿಸಲು ಬೆಳಗಾವಿಯಲ್ಲಿ ಕಾರ್ಯಾಲಯ ತೆರೆದಿದ್ದೇವೆ. ಕೊರೊನಾ ಕಾರಣಕ್ಕೆ ಸಕ್ರಿಯವಾಗಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಆದರೆ ಈ ಸಮಯದಲ್ಲಿ ಸದಸ್ಯರ ಸಂಖ್ಯೆ ಹೆಚ್ಚಿಸಿಕೊಂಡಿದ್ದೇವೆ. ಕಾನೂನು ಹೋರಾಟಕ್ಕೆ ಮೂರು ನ್ಯಾಯವಾದಿಗಳ ನೇಮಕ ಮಾಡಿಕೊಂಡಿದ್ದೇವೆ. ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಕೇಂದ್ರದಿಂದಲೂ ಉತ್ತರ ಬಂದಿದೆ. ರಾಜ್ಯದ ಪ್ರಸ್ತಾವನೆ ಒಪ್ಪಲು ಕಷ್ಟವಾಗುತ್ತಿದೆ ಎಂದು ಕೇಂದ್ರ ಒಪ್ಪಿದೆ. ಲಿಂಗಾಯತ ಸಮುದಾಯದಲ್ಲಿ ಎಸ್ಸಿ ಎಸ್ಟಿಗಳಿದ್ದಾರೆ. ಇವರು ಮೀಸಲಾತಿ ಕಳೆದುಕೊಳ್ಳಬಹುದು ಎಂದು ತಿಳಿಸಿದರು.
ಸಿಖ್, ಬೌದ್ಧ ಸಮುದಾಯದಲ್ಲಿಯೂ ಎಸ್ಸಿ, ಎಸ್ಟಿಗಳಿದ್ದಾರೆ. ಆದರೂ ಆ ಎರಡೂ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಸಿಕ್ಕಿದೆ. ಸಿಖ್, ಬೌದ್ಧರಂತೆ ಲಿಂಗಾಯತಕ್ಕೂ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕು. ಲಿಂಗಾಯತದ 102 ಉಪಪಂಗಡ ಪೈಕಿ ವೀರಶೈವ ಕೂಡ ಒಂದು ಪಂಗಡವಷ್ಟೇ. ಆ ಒಂದು ಪಂಗಡದ ಮಾತು ಕೇಳಿ ನಮಗೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವುದು ಕಷ್ಟ ಎಂದರೆ ಹೇಗೆ? ಬಸವತತ್ವವೇ ಬೇರೆ, ವೀರಶೈವರ ತತ್ವವೇ ಬೇರೆ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಮೂರ್ನಾಲ್ಕು ದಿನ ಮಳೆ ಸೂಚನೆ – ಆತಂಕದಲ್ಲಿ ಬಯಲುಸೀಮೆ ಮಂದಿ
ಪ್ರತ್ಯೇಕ ಧರ್ಮಕ್ಕೆ 2018 ಮಾರ್ಚ್ 21 ರಂದು ಶಿಫಾರಸ್ಸು ಮಾಡಿದ್ದು, ರಾಜ್ಯ ಸರ್ಕಾರ ವೀರಶೈವರಂತೆ ನಾವೇನು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿಲ್ಲ. ರಾಜಕೀಯ ಉದ್ದೇಶಕ್ಕೆ ವೀರಶೈವರು ಏನೇನೋ ಹೇಳುತ್ತಿದ್ದಾರೆ. ವೀರಶೈವರ ಮಾತು ಕೇಳಿ ಇನ್ನುಳಿದ 101 ಪಂಗಡಕ್ಕೆ ಅನ್ಯಾಯ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಕೇಂದ್ರದ ಉತ್ತರಕ್ಕೆ ನಾವು ಕಾಯುತ್ತಿದ್ದೇವೆ. ಈ ಕುರಿತು ಹೆಚ್‍ಡಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪ್ರತಿಕ್ರಿಯೆ ನೀಡಲಿಲ್ಲ. ನಂತರ ಬಂದ ಬಿಎಸ್ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ಕೂಡ ಪ್ರತಿಕ್ರಿಯೆಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.