ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸ್ತಿದ್ದಂತೆಯೇ ರಾಜಕೀಯ ಪಕ್ಷಗಳ ಚದುರಂಗದಾಟದ ಮತ್ತೊಂದು ಮೆಟ್ಟಿಲು ಏರಿದೆ. ಕನ್ನಡಧ್ವಜ, ಟಿಪ್ಪು ಜಯಂತಿ, ಹನುಮ ಜಯಂತಿ ವಿಷಯಗಳಾಗಿ ನಡೆದ ರಾಜಕೀಯ ವಿದ್ಯಮಾನಗಳಲ್ಲಿ ಈಗ ಮತ್ತೆ ಮಹದಾಯಿ ಹೋರಾಟದ ಬಿಸಿಯೇರಿದೆ. ಇದರ ಮಧ್ಯೆಯೇ ಲಿಂಗಾಯತ ವಿವಾದ ಮಹತ್ವದ ತಿರುವು ಪಡೆಯುವ ಸಾಧ್ಯತೆ ಇದೆ.
ಹುಬ್ಬಳ್ಳಿಯಲ್ಲಿ ಗುರುವಾರ ನಡೆದ ಬಿಜೆಪಿಯ ರ‍್ಯಾಲಿಯ ವೇಳೆ ಉತ್ತರಪ್ರದೇಶ ಸಿಎಂ ಆದಿತ್ಯನಾಥ್ ಅವರು ಮೂರು ಸಾವಿರ ಮಠಕ್ಕೆ ಭೇಟಿ ನೀಡಿದ್ದರು. ಸಿಎಂ ಯೋಗಿ ಅವರ ಈ ಭೇಟಿಯು ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಇದು ಮೋದಿಯ ಲೆಕ್ಕಾಚಾರ ಅನ್ನುವ ಮಾತು ಕೇಳಿ ಬಂದಿತ್ತು. ಆದರೆ, ಬಿಜೆಪಿ ನಾಯಕರ ಲೆಕ್ಕಚಾರಕ್ಕೆ ತಿರುಗೇಟು ನೀಡಲು ಸಿದ್ಧರಾಗಿರುವ ಸಿಎಂ ಸಿದ್ದರಾಮಯ್ಯ, ಲಿಂಗಾಯತರಿಗೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ಪ್ಲಾನ್ ಮಾಡಿದ್ದಾರೆ.
ಪ್ರತ್ಯೇಕ ಲಿಂಗಾಯತ ಧರ್ಮದ ಸ್ಥಾಪನೆ ಮಾಡುವ ಸಲುವಾಗಿ ಸರ್ಕಾರ 7 ಜನರ ತಜ್ಞರ ಸಮಿತಿ ರಚನೆ ಮಾಡಿದೆ. ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ಹಿರಿಯ ಪತ್ರಕರ್ತ ದ್ವಾರಕನಾಥ್, ರಾಜಕೀಯ ವಿಶ್ಲೇಷಕ ಮುಜಾಫರ್ ಅಸಾದಿ, ಪತ್ರಕರ್ತ ಸಜ್ರ್ಯೂ ಕಾಟ್ಕರ್, ಸಾಹಿತಿ ಎಸ್.ಜಿ. ಸಿದ್ದರಾಮಯ್ಯ, ಪುರುಷೋತ್ತಮ ಬಿಳಿಮಲೆ, ರಾಮಕೃಷ್ಣ ಮರಾಠೆ ತಜ್ಞರ ಸಮಿತಿಯ ಸದಸ್ಯರಾಗಿದ್ದಾರೆ.
ಒಂದು ತಿಂಗಳಲ್ಲಿ ವರದಿ ನೀಡುವಂತೆ ತಜ್ಞರ ಸಮಿತಿಗೆ ಸೂಚಿಸಿದ್ದು, ತಜ್ಞರ ಸಮಿತಿ ವರದಿ ಬಳಿಕ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ಶಿಫಾರಸ್ಸು ಮಾಡುವ ಕುರಿತು ನಿರ್ಧಾರವಾಗಲಿದೆ.