ಬೆಂಗಳೂರು: ಬಿಜೆಪಿ (BJP) ರಾಜ್ಯಾಧ್ಯಕ್ಷ ವಿಜಯೇಂದ್ರ (Vijayendra) ಬದಲಾವಣೆಗೆ ರೆಬೆಲ್ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಲಿಂಗಾಯತ ದಾಳ ಉರುಳಿಸಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲಿನಲ್ಲಿಂದು ಯತ್ನಾಳ್ ನೇತೃತ್ವದಲ್ಲಿ ಬಿಜೆಪಿ ಲಿಂಗಾಯತ ಮುಖಂಡರ (Lingayat Leaders) ಸಭೆ ನಡೆಸಿ ಮತ್ತೊಂದು ಸುತ್ತಿನ ಸಮರ ಸಾರಲಾಗಿದೆ.
ಸಭೆಯಲ್ಲಿ ಯತ್ನಾಳ್, ಜಿ ಎಂ ಸಿದ್ದೇಶ್ವರ, ಮಹೇಶ್ ಕುಮಟಳ್ಳಿ, ಬಿ ಪಿ ಹರೀಶ್ ಸೇರಿದಂತೆ ವೀರಶೈವ ಲಿಂಗಾಯತ ಸಮುದಾಯದ ಬಿಜೆಪಿ ಮಾಜಿ ಶಾಸಕರು, ಜಿಲ್ಲಾ ಮಾಜಿ ಅಧ್ಯಕ್ಷರು, ಮಾಜಿ ಪದಾಧಿಕಾರಿಗಳು ಸೇರಿ 60-70 ಜನ ಸಭೆಯಲ್ಲಿ ಭಾಗವಹಿಸಿದ್ದರು.
ಈ ಮೂಲಕ ವಿಜಯೇಂದ್ರ ವಿರುದ್ಧ ಲಿಂಗಾಯತ ಮುಖಂಡರನ್ನು ಒಗ್ಗೂಡಿಸುವ ಪ್ರಯತ್ನಕ್ಕೆ ಶಾಸಕ ಯತ್ನಾಳ್ ಮುಂದಾಗಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಇಳಿಸುವಂತೆ ಹೈಕಮಾಂಡ್ ಬಳಿ ನಿಯೋಗ ಕೊಂಡೊಯ್ಯುವ ನಿರ್ಣಯ ಕೈಗೊಳ್ಳಲಾಗಿದೆ.
ವಿಜಯೇಂದ್ರ ಮತ್ತೆ ರಾಜ್ಯಾಧ್ಯಕ್ಷ ಆಗಬಾರದು. ವಿಜಯೇಂದ್ರ ಬದಲು ಯತ್ನಾಳ್ ಅಥವಾ ವಿ ಸೋಮಣ್ಣ ಅಥವಾ ಬೊಮ್ಮಾಯಿಯನ್ನು ಮುಂದಿನ ರಾಜ್ಯಾಧ್ಯಕ್ಷ ಮಾಡುವಂತೆ ವರಿಷ್ಠರಿಗೆ ಮನವಿ ಮಾಡಲು ತೀರ್ಮಾನಿಸಲಾಗಿದೆ. ಇದನ್ನೂ ಓದಿ: ನಿಮಗೆ ನಾಚಿಕೆಯಾಗಬೇಕು – ಕೇರಳ ಕಾಂಗ್ರೆಸ್ ವಿರುದ್ಧ ಪ್ರೀತಿ ಝಿಂಟಾ ಕೆಂಡಾಮಂಡಲ
ಲಿಂಗಾಯತರಲ್ಲದಿದ್ದರೆ ಒಬಿಸಿ ಸಮುದಾಯದ ಸುನೀಲ್ ಕುಮಾರ್, ಎಸ್‌ಸಿ ಸಮುದಾಯದ ಲಿಂಬಾವಳಿ, ಒಬಿಸಿ ಸಮುದಾಯದ ಕುಮಾರ್ ಬಂಗಾರಪ್ಪ ಅವರನ್ನಾದರೂ ರಾಜ್ಯಾಧ್ಯಕ್ಷ ಮಾಡುವಂತೆ ಒತ್ತಾಯಿಸಲು ನಿರ್ಧರಿಸಲಾಗಿದೆ. ಇದೇವೇಳೆ ಸಭೆಯಲ್ಲಿ ವಿಜಯೇಂದ್ರ ವಿಫಲ ನಾಯಕ ಅಂತ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಸಮುದಾಯದ ಮನೆ ಮನೆ ಜಾಗೃತಿಗೂ ಚಿಂತಿಸಲಾಗಿದೆ. ಒಟ್ಟಿನಲ್ಲಿ ಈ ಸಭೆ ಮೂಲಕ ವಿಜಯೇಂದ್ರ ಪರ ಲಿಂಗಾಯತರು ಇಲ್ಲ ಅನ್ನೋ ಸಂದೇಶ ರವಾನೆ ಮಾಡುವ ಕಸರತ್ತು ನಡೆಸಲಾಗಿದೆ.