ವಿಜಯಪುರ: ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ವಿರುದ್ಧ ಮಾಜಿ ಸಚಿವ ಎಂ.ಬಿ ಪಾಟೀಲ್ ಅವರು ಮತ್ತೆ ಗುಡುಗಿದ್ದಾರೆ.
ನಗರದಲ್ಲಿ ಮಾತನಾಡಿದ ಮಾಜಿ ಸಚಿವರು, ನಮ್ಮಲ್ಲಿ ಹುಳುಕುಗಳು ಇದ್ದರೆ ಪೇಜಾವರಶ್ರೀ ತೆಗೆಯಲಿ. ನಮ್ಮನ್ನು ಪದೇ ಪದೇ ಕೆದುಕುತ್ತಿದ್ದಾರೆ. ಅವರ ವಯಸ್ಸು ಹಾಗೂ ಹಿರಿತನಕ್ಕೆ ಇದು ಸರಿಯಲ್ಲ. ಹೀಗೆ ಮುಂದುವರಿದರೆ ಧಕ್ಕೆ ಆಗುತ್ತದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
Advertisement
ನಮ್ಮ ಆತ್ಮಸಾಕ್ಷಿ ಶ್ರೇಷ್ಠವಾಗಿದೆ. ಪೇಜಾವರ ಸ್ವಾಮೀಜಿ ಸವಾಲನ್ನು ಬದ್ಧತೆಯಿಂದ ಸ್ವೀಕರಿಸುತ್ತೇವೆ. ಅವರು ಧೈರ್ಯದ ಬಗ್ಗೆ ಮಾತನಾಡಿದ್ದಾರೆ. ಆ ರೀತಿ ಮಾತನಾಡಬಾರದು. ಬಸವಧರ್ಮದ ಬಗ್ಗೆ ನಮಗಿರುವ ಹೆಮ್ಮೆ, ನಂಬಿಕೆಯನ್ನು ಪೇಜಾವರ ಸ್ವಾಮೀಜಿ ಮುಂದಿಡುತ್ತೇವೆ. ಈ ಮೂಲಕ ಅವರನ್ನು ಕೂಡ ಬಸವ ಧರ್ಮದ ಕಡೆಗೆ ಸೆಳೆದುಕೊಳ್ಳುತ್ತೇವೆ. ಅವರು ಬಸವ ಧರ್ಮವನ್ನು ಒಪ್ಪಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
Advertisement
Advertisement
ಪೇಜಾವರ ಸ್ವಾಮೀಜಿಗಳಿಗೆ ಒಂದು ಕನಿಷ್ಠ ಅರಿವು ಇರಬೇಕಿತ್ತು. ಹಿಂದೂ ಎನ್ನುವುದು ಧರ್ಮವಲ್ಲ. ಅದೊಂದು ಸನ್ಮಾರ್ಗ. ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ಹೇಳಿದ್ದಾರೆ. ಅದನ್ನು ಪೇಜಾವರ ಶ್ರೀ ತಿಳಿದುಕೊಳ್ಳಬೇಕು. ಅದನ್ನು ಬಿಟ್ಟು ಪ್ರಧಾನಿಯಂತೆ ವರ್ತಿಸುವುದು ಸರಿಯಲ್ಲ ಎಂದು ಕಿಡಿಕಾರಿದರು.
Advertisement
ಕಳೆದ ತಿಂಗಳು ವೀರಶೈವ ಮತ್ತು ಲಿಂಗಾಯತ ಹಿಂದೂ ಧರ್ಮದ ಅಂಗ ಎಂದು ಪೇಜಾವರ ಶ್ರೀಗಳು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಎಂಬಿ ಪಾಟೀಲ್, ನಮ್ಮ ಸಮಾಜಕ್ಕೆ ಸಂಬಂಧಿಸಿದ ವಿಷಯದಲ್ಲಿ ಲಿಂಗಾಯತ ಮುಖಂಡರು, ಸ್ವಾಮೀಜಿಗಳು ನಿರ್ಧಾರ ಮಾಡುತ್ತಾರೆ. ಇದರಲ್ಲಿ ಪೇಜಾವರ ಶ್ರೀಗಳು ಹಸ್ತಕ್ಷೇಪ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದರು.
ಈ ವಿಚಾರ ಸಂಬಂಧ ಮೈಸೂರಿನಲ್ಲಿ ಶುಕ್ರವಾರ ಮಾತನಾಡಿದ್ದ ಪೇಜಾವರ ಸ್ವಾಮೀಜಿ, ಎಂ.ಬಿ.ಪಾಟೀಲ್ ಅವರು ದಲಿತರನ್ನು ಮಠಾಧೀಶರನ್ನಾಗಿ ಮಾಡುತ್ತಾರಾ? ಅವರವರ ಧರ್ಮದ ಬಗ್ಗೆ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಅವರವರಿಗೆ ಇದೆ. ನೀವು ಹಿಂದೂಗಳು, ನಮ್ಮನ್ನು ಬಿಟ್ಟು ಹೋಗಬೇಡಿ ಎಂದು ಸಲಹೆ ನೀಡಿದ್ದೇನೆ ಅಷ್ಟೇ. ಎಂ.ಬಿ.ಪಾಟೀಲ್ ಅವರ ಆರೋಪಕ್ಕೆ ಯಾವುದೇ ಅರ್ಥವಿಲ್ಲ ಎಂದು ಹೇಳಿದ್ದರು.
ಎಂ.ಬಿ.ಪಾಟೀಲ್ ಅವರ ಉದ್ವೇಗ, ಆಕ್ರೋಶ ಸರಿಯಲ್ಲ. ನಾನು ಲಿಂಗಾಯತ ಮತವನ್ನು ಸರಿಪಡಿಸಲು ಹೋಗುತ್ತಿಲ್ಲ, ಅವರಲ್ಲಿರುವ ಹುಳುಕು ಹೇಳಿಲ್ಲ, ದೋಷಾರೋಪ ಮಾಡಿಲ್ಲ. ಸ್ನೇಹದಿಂದ ಸಹೋದರತ್ವದಿಂದ ನಮ್ಮಲ್ಲೇ ಇರಿ ಎಂದು ಹೇಳುತ್ತಿದ್ದೇನೆ. ನಾನು ಸೌಜನ್ಯದಿಂದ ಕೇಳಿದರೆ ಅವರು ಅಷ್ಟೊಂದು ಆಕ್ರೋಶಭರಿತವಾಗಿ ಹೇಳಲು ಕಾರಣವೇನು ಎಂದು ಪ್ರಶ್ನಿಸಿದ್ದರು.
ಬಸವಣ್ಣನವರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರ ಬಗ್ಗೆ ಯಾವುದೇ ಆರೋಪ ಮಾಡಿಲ್ಲ. ಧರ್ಮದ ಕುರಿತಾಗಿಯೂ ಯಾವುದೇ ದೋಷಾರೋಪ ಮಾಡಿಲ್ಲ. ಅವರಿಗೆ ಧೈರ್ಯವಿದ್ದರೆ ಬಹಿರಂಗ ಚರ್ಚೆಗೆ ಬರಲಿ ನಾನು ಸಿದ್ಧನಿದ್ದೇನೆ. ಇಂತಹ ಭಿನ್ನಾಪ್ರಾಯಗಳಿಗೆ ಸಂವಾದ ನಡೆಸುವುದು ಸೂಕ್ತ ಎಂದು ತಿಳಿಸಿದ್ದರು.