Districts
ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೆ ಹಿನ್ನಡೆ, ಎಂಬಿ ಪಾಟೀಲ್‍ಗೆ ಭಾರೀ ಮುಖಭಂಗ

ತುಮಕೂರು: ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೆ ತೀವ್ರ ಹಿನ್ನಡೆಯಾಗಿದ್ದು, ತಮ್ಮ ಹೇಳಿಕೆಯನ್ನ ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ತಿರುಚಿದ್ದಾರೆ ಅಂತ ಸಿದ್ದಗಂಗಾ ಮಠ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಲಿಂಗಾಯತ-ವೀರಶೈವ ಎರಡು ಒಂದೇ, ಧರ್ಮವನ್ನ ಒಡೆಯಬೇಡಿ ಎಂದು ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಸಚಿವ ಎಂ.ಬಿ ಪಾಟೀಲ್‍ಗೆ ಭಾರೀ ಮುಖಭಂಗವಾಗಿದೆ.
ಕಳೆದ ಭಾನುವಾರ ಮಾತನಾಡಿದ್ದ ಸಚಿವ ಎಂ.ಬಿ ಪಾಟೀಲ್, ದೊಡ್ಡ ಶ್ರೀಗಳು ಪ್ರತ್ಯೇಕ ಲಿಂಗಾಯತ ಬೇಕೆಂದಿದ್ದಾರೆ ಎಂದು ತಿಳಿಸಿದ್ದರು. ಇವರ ಈ ಹೇಳಿಕೆ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಇವತ್ತು ಮತ್ತೆ ಪ್ರತಿಕ್ರಿಯಿಸಿದ್ದ ಸಚಿವ ಎಂ.ಬಿ ಪಾಟೀಲ್, ನಾನು ಸುಳ್ಳು ಹೇಳಿದ್ದೇ ಆದ್ರೆ ಆ ಪಾಪ ನನಗೆ ನನ್ನ ಕುಟುಂಬಕ್ಕೆ ತಟ್ಟಲಿ ಅಂತ ಸವಾಲು ಹಾಕಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ಏನಿದೆ?
ಜಲಸಂಪನ್ಮೂಲ ಸಚಿವರಾದ ಎಂ.ಬಿ.ಪಾಟೀಲ್‍ರವರು ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದಾಗ ಅವರು ನಮ್ಮೊಡನೆ ವೀರಶೈವ/ಲಿಂಗಾಯತ ಸ್ವತಂತ್ರ ಧರ್ಮದ ವಿಷಯದ ಬಗ್ಗೆ ಚರ್ಚಿಸಿದಾಗ ವೀರಶೈವ ಎಂಬ ಪದ ವಿದ್ಯಾವಂತರು ಮತ್ತು ನಗರ ಪ್ರದೇಶದಲ್ಲಿ ಬಳಕೆಯಲ್ಲಿದೆ. ಲಿಂಗಾಯತ ಎಂಬ ಪದ ಗ್ರಾಮೀಣ ಪ್ರದೇಶದಲ್ಲಿ ಬಳಕೆಯಲ್ಲಿದ್ದು, ಈ ಎರಡೂ ಪದಗಳು ಒಂದೇ ಆಗಿದ್ದು, ಎಲ್ಲಾ ಧಾರ್ಮಿಕ ಮುಖಂಡರು ಹಾಗೂ ಸಮಾಜ ಬಾಂದವರು ಒಂದೆಡೆ ಕುಳಿತು ಸರ್ವ ಸಮ್ಮತವಾದ ನಿರ್ಧಾರ ಕೈಗೊಳ್ಳುವುದು ಸೂಕ್ತ ಎಂದು ನಮ್ಮ ಅಭಿಪ್ರಾಯ ತಿಳಿಸಿರುತ್ತೇವೆ.
ಆದ್ರೆ ಮಾನ್ಯ ಶ್ರೀ.ಎಂ.ಬಿ.ಪಾಟೀಲ್‍ರವರು ಲಿಂಗಾಯತ ಪದದ ಪರವಾಗಿ ಬೆಂಬಲ ಸೂಚಿಸಿದ್ದಾರೆ ಎಂಬಂತೆ ಮಾಧ್ಯಮಗಳಲ್ಲಿ ಪ್ರಕಟಿಸಿರುವುದು ತಿಳಿದು ಬಂದಿದೆ. ಸಮಾಜವನ್ನ ಈ ರೀತಿ ಇಬ್ಭಾಗ ಮಾಡುವ ರೀತಿಯಲ್ಲಿ ಯಾರೇ ಪ್ರಯತ್ನಿಸಿದ್ರೂ ಸಮಾಜದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಸಮಾಜದ ಮುಖಂಡರೆಲ್ಲಾ ಕುಳಿತು ಚರ್ಚಿಸಿ ಒಮ್ಮತ ರೂಪಿಸುವುದು ಅತ್ಯಂತ ಅಗತ್ಯವಾಗಿದೆ.
ಇದನ್ನೂ ಓದಿ: ಸಚಿವ ಎಂ.ಬಿ.ಪಾಟೀಲ್ ರಿಂದ ಹೊಸ `ಸಿಡಿ’ ಬಾಂಬ್!
