ಬೆಂಗಳೂರು: ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ತರುವ ಯೋಜನೆ ಕುರಿತು ವಿಸ್ತೃತ ಯೋಜನಾ ವರದಿ(ಡಿಪಿಆರ್) ತಯಾರಿಸುವುದನ್ನು ರಾಜ್ಯ ಸರ್ಕಾರ ಕೈಬಿಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದ್ದಾರೆ.
ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಡಾ.ಶ್ಯಾಮಪ್ರಸಾದ್ ಮುಖರ್ಜಿ ಬಲಿದಾನ ಸಂಸ್ಮರಣಾ ದಿನಾಚರಣೆ ವೇಳೆ ಮಾತನಾಡಿದ ಅವರು, ಲಿಂಗನಮಕ್ಕಿಯಿಂದ ನೀರು ಹರಿಸುವ ಯೋಜನೆ ಅಸಮಂಜಸವಾಗಿದ್ದು, ಬೆಂಗಳೂರಿಗೆ ನೀರು ತರಲು ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಬೇಕು. ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸರ್ಕಾರ ವಿಶೇಷ ಗಮನ ಕೊಡಬೇಕು. ವಾಸ್ತವ ಸಮಸ್ಯೆ ಬಗೆಹರಿಸದೇ ಹಳ್ಳಿ ವಾಸ್ತವ್ಯ ಮಾಡುತ್ತೇನೆ. ಶಾಲೆಯಲ್ಲಿ ಮಲಗುತ್ತೇನೆ ಎಂಬುದು ಮೂರ್ಖತನ. ಇದು ಮುಖ್ಯಮಂತ್ರಿಗಳಿಗೆ ಶೋಭೆ ತರುವಂಥದ್ದಲ್ಲ ಎಂದು ಕಿಡಿಕಾರಿದರು.
Advertisement
Advertisement
ಈ ಹಿಂದೆ ಮುಖ್ಯಮಂತ್ರಿಗಳು ವಾಸ್ತವ್ಯ ಮಾಡಿದ ಗ್ರಾಮಗಳ ಸ್ಥಿತಿ ಹೇಗಿದೆ ಎಂದು ತಿಳಿದಿದೆ. ನಾನು ಪ್ರವಾಸ ಕೈಗೊಂಡ ಸಂದರ್ಭದಲ್ಲಿ ವಿಪಕ್ಷ ನಾಯಕನಾಗಿಯೂ ಒಳ್ಳೆಯ ಕೆಲಸ ಮಾಡಿದ ಅಧಿಕಾರಿಗಳನ್ನು ಶ್ಲಾಘಿಸಿದ್ದೇನೆ. ಕೆಲಸ ಮಾಡದ ಕಡೆಗಳಲ್ಲಿ ಛೀಮಾರಿ ಹಾಕಿದ್ದೇನೆ. ವಿಪಕ್ಷ ನಾಯಕನಾಗಿ ನಾನು ಹೇಗೆ ಇರಬೇಕು ಎಂದು ಮುಖ್ಯಮಂತ್ರಿಗಳಿಂದ ಕಲಿಯಬೇಕಿಲ್ಲ. ಟೀಕೆ ಮಾಡುವ ಬದಲು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಭಿವೃದ್ಧಿ ಕೆಲಸದ ಕಡೆ ಗಮನಹರಿಸಲಿ. ಕಬ್ಬು ಬೆಲೆ ಬಾಕಿಗೆ ರೈತರು ಹೋರಾಟ ಮಾಡುತ್ತಿದ್ದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿದ್ದು, ಇನ್ನಾದರೂ ರೈತರ ಬಾಕಿ ಕೊಟ್ಟು ರೈತರ ನೆರವಿಗೆ ಬರಲಿ ಎಂದು ಟೀಕಿಸಿದ್ದಾರೆ.
Advertisement
ಖುದ್ದಾಗಿ ಮಾತನಾಡುತ್ತೇನೆ: ಜನೌಷಧಿ ಅಂಗಡಿ ಮುಂದಿದ್ದ ಬಿಜೆಪಿ ಬಾವುಟ ತೆರವುಗೊಳಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪರಮೇಶ್ವರ್ ಹಿರಿಯರು, ಅನುಭವಿಗಳು ಈ ರೀತಿ ಮಾಡಿರಲು ಸಾಧ್ಯವಿಲ್ಲ. ಒಂದು ವೇಳೆ ಮಾಡಿದ್ದರೆ ಅದು ಅಸಮಂಜಸ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟರು.
Advertisement
ಬಿಜೆಪಿ ರಾಷ್ಟ್ರೀಯ ಪಕ್ಷ, ಪರಮೇಶ್ವರ್ ಅವರು ಆ ರೀತಿ ಹೇಳಲು ಸಾಧ್ಯವಿಲ್ಲ. ಅವರು ಹಿರಿಯ ಮತ್ತು ಅನುಭವಿ ರಾಜಕಾರಣಿ. ಒಂದು ವೇಳೆ ಈ ರೀತಿ ಮಾಡಿದ್ದರೆ ಅದು ಸಮಂಜಸವಲ್ಲ. ಈ ಕುರಿತು ನಾನೇ ಖುದ್ದಾಗಿ ಅವರೊಂದಿಗೆ ಮಾತನಾಡುತ್ತೇನೆ ಎಂದು ಯಡಿಯೂರಪ್ಪ ಪ್ರತಿಕ್ರಿಯಿಸಿದರು.
ಕಾಂಗ್ರೆಸ್ಸಿನಿಂದ ಅವಮಾನ: ಡಾ.ಶ್ಯಾಮಪ್ರಸಾದ್ ಮುಖರ್ಜಿಯವರಿಗೆ ಕಾಂಗ್ರೆಸ್ ಎಲ್ಲ ಸಂದರ್ಭದಲ್ಲೂ ಅವಮಾನಿಸಿದೆ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್, ಸರ್ದಾರ್ ವಲ್ಲಭಬಾಯ್ ಪಟೇಲ್ ರೀತಿಯಲ್ಲೇ ಕಾಂಗ್ರೆಸ್‍ನಿಂದ ಶ್ಯಾಮಪ್ರಸಾದ್ ಮುಖರ್ಜಿಯವರಿಗೆ ಅನ್ಯಾಯ ಮಾಡಲಾಲಾಗಿದೆ ಎಂದರು.
ಮುಖರ್ಜಿಯವರ ಅನುಮಾನಾಸ್ಪದ ಸಾವಿನ ಕುರಿತು ಅಂದಿನ ಕಾಂಗ್ರೆಸ್ ಸರ್ಕಾರ ತನಿಖೆಯನ್ನು ನಡೆಸಲಿಲ್ಲ. ನೆಹರು ಅವರಿಗೆ ಪರ್ಯಾಯ ನಾಯಕರಾಗಿ ಹೊರಹೊಮ್ಮುತ್ತಿದ್ದ ಕಾರಣ ಮುಖರ್ಜಿಯವರನ್ನು ತುಳಿಯುವ ಪ್ರಯತ್ನ ಮಾಡಲಾಯಿತು. ಜೂನ್ 23 ರಂದು ಶಾಮಪ್ರಸಾದ್ ಮುಖರ್ಜಿಯವರ ಪುಣ್ಯತಿಥಿ. ಅವರ ಜೀವನ, ಸಾಧನೆ ಹಾಗೂ ಬಲಿದಾನ ನಮ್ಮೆಲ್ಲ ಕಾರ್ಯಕರ್ತರಿಗೆ ಪ್ರೇರಣೆ. ಕಾಂಗ್ರೆಸ್‍ಗೆ ಪರ್ಯಾಯ ರಾಜಕೀಯ ಪಕ್ಷ ಕಟ್ಟಿದವರು ಶ್ಯಾಮಪ್ರಸಾದ್. ಭಾರತದ ಏಕತೆಗೆ ಪೂರಕವಲ್ಲದ 370 ವಿಧಿ ರದ್ದಾಗಬೇಕು ಎಂದು ಹೋರಾಟ ಮಾಡಿದ್ದರು. ಈಗ ಜಮ್ಮು ಕಾಶ್ಮೀರದ ಪರಿಸ್ಥಿತಿ ನೋಡಿದರೆ, ಅವರ ಹೋರಾಟದ ಮಹತ್ವ ತಿಳಿಯುತ್ತದೆ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟರು.
ಜಮ್ಮು ಕಾಶ್ಮೀರಕ್ಕೆ ಆರ್ಟಿಕಲ್ 370 ಅಡಿ ನೀಡಿರುವ ವಿಶೇಷ ಸ್ಥಾನಮಾನ ರದ್ದು ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ, ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಕಾರ್ಯತತ್ಪರರಾಗಿದ್ದಾರೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಮಾಡಿ, ಬದಲಾವಣೆಯ ಗಾಳಿ ಬೀಸುವಂತೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಉಪಾಧ್ಯಕ್ಷ ಗೋವಿಂದ ಕಾರಜೋಳ ಮಾತನಾಡಿ, ಕಾಂಗ್ರೆಸ್‍ನವರು ಅಸ್ಪೃಶ್ಯತೆಯನ್ನು ಜೀವಂತವಾಗಿಟ್ಟು ದಲಿತರನ್ನು ಮತ ಬ್ಯಾಂಕ್ ಮಾಡಿಕೊಂಡರು. ಅದರೆ ಆರ್‍ಎಸ್‍ಎಸ್ ಮತ್ತು ಬಿಜೆಪಿ ದೀನದಲಿತರ ಏಳಿಗೆಗೆ ಶ್ರಮಿಸುತ್ತಿದೆ. ಸಮಾನ ಭಾವನೆಯಿಂದ ನೋಡುತ್ತಿದೆ ಎಂದು ತಿಳಿಸಿದರು.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]