ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಳ್ಳಿಹಕ್ಕಿ ವಿಶ್ವನಾಥ್ ಮುಂಬೈನಲ್ಲಿ ಹೋಗಿದ್ದಾರೆ. ಈ ಹೊತ್ತಿನಲ್ಲಿ ವಿಶ್ವನಾಥ್ ಅವರು ಪಕ್ಷಾಂತರಕ್ಕೆ ಸಂಬಂಧಿಸಿದಂತೆ `ಮಲ್ಲಿಗೆಯ ಮಾತು’ ಎಂಬ ಪುಸ್ತಕವೊಂದರಲ್ಲಿ ದಾಖಲಿಸಿದ್ದ ಸಾಲುಗಳು ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.
`ತಾವು ಹುಟ್ಟಿ ಬೆಳೆದ ಮನೆಯನ್ನು ಧಿಕ್ಕರಿಸಿ, ಶತ್ರುಗಳ ಮನೆಗೆ ಆಶ್ರಯ ಬೇಡಿ ಹೋಗುವವರನ್ನು ಏನೆನ್ನಬೇಕು?. ಪಕ್ಷಾಂತರಿಗಳು ಬೇಕಾದಷ್ಟು ಕಾರಣಗಳನ್ನು ತಮ್ಮ ಸಮರ್ಥನೆಗೆ ಕೊಡುತ್ತಾರೆ. ನಮ್ಮವರೇ ನನಗೆ ಮೋಸ ಮಾಡಿದರು. ಸ್ಥಾನಮಾನ ಕೊಡಲಿಲ್ಲ. ನನ್ನ ಜಾತಿಯಲ್ಲಿ ಕಡೆಗಣಿಸಿದ್ರು ಇತ್ಯಾದಿ. ಅವರು ಕೊಡುವ ಕಾರಣಗಳು ಎಷ್ಟು ಪೊಳ್ಳು ಎನ್ನುವುದು ಸ್ವತಃ ಅವರಿಗೆ ಗೊತ್ತಿರುತ್ತದೆ. ಅವರು ಹೊಸ ಹುಲ್ಲುಗಾವಲಿನಲ್ಲಿ ಸಮೃದ್ಧವಾಗಿ ಮೇಯಲು ಹೊರಟಿರುತ್ತಾರೆ ಅಷ್ಟೇ’ ಎಂದು ವಿಶ್ವನಾಥ್ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.
ವಿಶ್ವನಾಥ್ ಸೇರಿದಂತೆ ಹಲವು ಶಾಸಕರು ರಾಜೀನಾಮೆ ನೀಡಿ ಮುಂಬೈಗೆ ತೆರಳಿದ್ದರು. ಬಳಿಕ ಅತೃಪ್ತ ಶಾಸಕರು ಖುದ್ದಾಗಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ರಾಜೀನಾಮೆ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಶಾಸಕರು ವಿಶೇಷ ವಿಮಾನದಲ್ಲಿ ಗುರುವಾರ ಸಂಜೆ 5ಕ್ಕೆ ಎಚ್‍ಎಎಲ್ ತಲುಪಿದ್ದರು.
ಬಳಿಕ ಅವರು ಆದಷ್ಟು ಬೇಗ ಸ್ಪೀಕರ್ ಕಚೇರಿ ತಲುಪಬೇಕೆಂದು ಎಚ್‍ಎಎಲ್‍ನಿಂದ ವಿಧಾನಸೌಧದವೆರಗೂ ಜೀರೋ ಟ್ರಾಫಿಕ್ ಮಾಡಿಸಿಕೊಂಡು ಬಂದರು. ಕಚೇರಿಗೆ ಓಡೋಡಿ ಬಂದು ತಮ್ಮ ರಾಜೀನಾಮೆ ಪತ್ರವನ್ನು ಸ್ಪೀಕರ್ ಕೈಗಿತ್ತರು. ನಂತರ ಸ್ಪೀಕರ್ ಅವರು ಸುಮಾರು 1 ಗಂಟೆಗಳ ಕಾಲ ಅತೃಪ್ತರನ್ನು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ಬಳಿಕ ಅತೃಪ್ತರು ಮುಂಬೈಗೆ ತೆರಳಿದ್ದಾರೆ.