ಹುಬ್ಬಳ್ಳಿ: ವಿದ್ಯುತ್ ಕಂಬ ಏರಿ ಕೆಲಸ ಮಾಡುವ ವೇಳೆ ವಿದ್ಯುತ್ ಪ್ರವಹಿಸಿ ಕಂಬದಲ್ಲಿಯೇ ಲೈನ್ ಮನ್ ಮೃತಪಟ್ಟ ಘಟನೆ ಧಾರವಾಡ ಜಿಲ್ಲೆಯ ಕುಂದುಗೋಳ ತಾಲೂಕಿನ ರಟ್ಟಿಗೇರಿ ಗ್ರಾಮದಲ್ಲಿ ನಡೆದಿದೆ.
21 ವರ್ಷದ ಅಲ್ತಾಫ್ ಅಂಗಡಿ ಮೃತ ಲೈನ್ ಮೆನ್. ಅಲ್ತಾಫ್ ಕಳೆದ ಮೂರು ತಿಂಗಳಿನಿಂದ ಹೆಸ್ಕಾಂನಲ್ಲಿ ಗುಡುಗೇರಿ ವಿಭಾಗದ ಲೈನ್ ಮನ್ ಆಗಿ ಕೆಲಸ ಮಾಡುತ್ತಿದ್ದರು. ರಟ್ಟಿಗೇರಿ ಗ್ರಾಮದಲ್ಲಿನ ವಿದ್ಯುತ್ ಸಂಪರ್ಕ ಕೈಕೊಟ್ಟಿದ್ದರಿಂದ ವಿದ್ಯುತ್ ಸಂಪರ್ಕ ದುರಸ್ಥಿ ಮಾಡಲು ಅಲ್ತಾಫ್ ಬಂದಿದ್ದರು.
ಈ ವೇಳೆ ಕಂಬವನ್ನ ಏರಿ ರಿಪೇರಿ ಮಾಡುವಾಗ ಏಕಾಏಕಿ ವಿದ್ಯುತ್ ಪ್ರವಹಿಸಿದ್ದರಿಂದ ಅಲ್ತಾಫ್ ಸಾವನ್ನಪ್ಪಿದ್ದಾರೆ. 4 ಗಂಟೆಗಳ ಕಾಲ ಅಲ್ತಾಫ್ ಮೃತ ದೇಹ ಕಂಬದಲ್ಲಿಯೇ ನೇತಾಡುತ್ತಿತ್ತು. ವಿಷಯ ತಿಳಿಸಿದ್ರೂ ತಡವಾಗಿ ಬಂದ ಹೆಸ್ಕಾಂ ಅಧಿಕಾರಿಗಳು ಮತ್ತು ಪೊಲೀಸರು ಶವವನ್ನು ತೆರವುಗೊಳಿಸಿದರು. ಈ ಸಂಬಂಧ ಗುಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.