ವಾಷಿಂಗ್ಟನ್: ಕಳೆದ ವರ್ಷ 44 ಶತಕೋಟಿ ಡಾಲರ್‌ಗೆ ಟ್ವಿಟ್ಟರ್ (Twitter) ಅನ್ನು ಖರೀದಿಸಿದ್ದ ಟೆಸ್ಲಾ ಸಿಇಒ ಎಲೋನ್ ಮಸ್ಕ್ (Elon Musk) ಕೊನೆಗೂ ಮೈಕ್ರೋಬ್ಲಾಗಿಂಗ್ ಸೈಟ್‌ಗೆ ಹೊಸ ಸಿಇಒ (Twitter CEO) ಅನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಎನ್‌ಬಿಸಿ ಯುನಿವರ್ಸಲ್ ಜಾಹೀರಾತು ವಿಭಾಗದ ಮಾಜಿ ಮುಖ್ಯಸ್ಥೆ ಲಿಂಡಾ ಯಾಕರಿನೊ (Linda Yaccarino) ಅವರನ್ನು ಮಸ್ಕ್ ಟ್ವಿಟ್ಟರ್‌ನ ಹೊಸ ಸಿಇಒ ಆಗಿ ನೇಮಿಸಿದ್ದಾರೆ.
ನಾನು ಲಿಂಡಾ ಯಾಕರಿನೋ ಅವರನ್ನು ಟ್ವಿಟ್ಟರ್‌ನ ಹೊಸ ಸಿಇಒ ಆಗಿ ಸ್ವಾಗತಿಸಲು ಉತ್ಸುಕನಾಗಿದ್ದೇನೆ. ಯಾಕರಿನೊ ಪ್ರಾಥಮಿಕವಾಗಿ ವ್ಯಾಪಾರ ಕಾರ್ಯಾಚರಣೆಗಳ ಮೇಲೆ ಗಮನಹರಿಸಿದರೆ, ನಾನು ಉತ್ಪನ್ನ ವಿನ್ಯಾಸ ಹಾಗೂ ಹೊಸ ತಂತ್ರಜ್ಞಾನದ ಮೇಲೆ ಗಮನಹರಿಸುತ್ತೇನೆ ಎಂದು ಮಸ್ಕ್ ತಿಳಿಸಿದ್ದಾರೆ.
ವರದಿಗಳ ಪ್ರಕಾರ ಯಾಕರಿನೊ ಕಾರ್ಪ್ ಎಂಟರ್‌ಟೈನ್‌ಮೆಂಟ್ ಹಾಗೂ ಮಾಧ್ಯಮ ವಿಭಾಗದ ಜಾಹೀರಾತು ವ್ಯವಹಾರವನ್ನು ಆಧುನೀಕರಿಸುವಲ್ಲಿ ಕೆಲಸ ಮಾಡಿದ್ದಾರೆ. ಟ್ವಿಟ್ಟರ್‌ನ ಹೊಸ ಸಿಇಒ ಆಗಲು ಮಾತುಕತೆ ನಡೆಸಿದ ಬಳಿಕ ಅವರು ಶುಕ್ರವಾರ ಬೆಳಗ್ಗೆ ಎನ್‌ಬಿಸಿಯಲ್ಲಿ ತನ್ನ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಇದನ್ನೂ ಓದಿ: ಮಲಗಿದ್ದಾಗಲೂ ಮೈಕ್ರೋಫೋನ್ ಆನ್! – ವಾಟ್ಸಪ್‌ನ ನಂಬಬೇಡಿ ಎಂದ ಮಸ್ಕ್
ಎಲೋನ್ ಮಸ್ಕ್ ಟ್ವಿಟ್ಟರ್‌ಗೆ ಹೊಸ ಸಿಇಒ ಹುಡುಕುತ್ತಿದ್ದುದಾಗಿ ಹಲವು ತಿಂಗಳುಗಳ ಹಿಂದೆಯೇ ಹೇಳಿದ್ದರು. ಯಾರಾದರೂ ಮೂರ್ಖತನ ಹೊಂದಿದವರು ಟ್ವಿಟ್ಟರ್ ಸಿಇಒ ಹುದ್ದೆ ವಹಿಸಿಕೊಂಡ ತಕ್ಷಣ ನಾನು ರಾಜೀನಾಮೆ ನೀಡುತ್ತೇನೆ ಎಂದು ಹಾಸ್ಯವನ್ನೂ ಆಡಿದ್ದರು.
ಮಸ್ಕ್ ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಂಡ ಬಳಿಕ ಹಲವು ಬದಲಾವಣೆಗಳನ್ನು ತಂದಿದ್ದಾರೆ. ಕಳೆದ ವರ್ಷ ಅಕ್ಟೊಬರ್ ನಂತರ ಕಂಪನಿಯ ಸುಮಾರು 80% ಉದ್ಯೋಗಿಗಳಿಗೆ ಗೇಟ್‌ಪಾಸ್ ನೀಡಿದ್ದರು. ಮಾತ್ರವಲ್ಲದೇ ಉದ್ಯೋಗಿಗಳಿಗೆ ಹೆಚ್ಚುವರಿ ಸಮಯ ಕೆಲಸ ಮಾಡುವಂತೆ ಆದೇಶಿಸಲಾಗಿದೆ. ಇತ್ತೀಚೆಗೆ ಟ್ವಿಟ್ಟರ್ ಖಾತೆಗಳಲ್ಲಿ ಬಳಕೆದಾರರು ಬ್ಲೂ ಟಿಕ್ ಪಡೆಯಲು ಪಾವತಿಸುವ ಕ್ರಮವನ್ನು ಜಾರಿಗೆ ತರಲಾಗಿದೆ. ಇದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದನ್ನೂ ಓದಿ: ಬೆಂಗಳೂರು ಬಳಿ ಭಾರೀ ಮೊತ್ತಕ್ಕೆ ಜಾಗ ಖರೀದಿಸಿದ ಆಪಲ್ ಐಫೋನ್ ತಯಾರಕ ಫಾಕ್ಸ್‌ಕಾನ್