ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡಿನಲ್ಲಿ ವರುಣನ ಆರ್ಭಟ ಜೋರಾಗಿದೆ. ಇನ್ನು ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು ಹೈ ಅಲರ್ಟ್ ಘೋಷಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ 11ರ ತನಕ ಮಳೆ ಮುಂದುವರಿಯಲಿದ್ದು, ಜಿಲ್ಲಾಡಳಿತ ತುರ್ತು ನಿರ್ವಹಣೆಗೆ ಸಿದ್ಧಗೊಂಡಿದೆ. ತಗ್ಗು ಪ್ರದೇಶಗಳೂ ಜಲಾವೃತಗೊಂಡಿದ್ದು, ಅವರನ್ನು ರಕ್ಷಣಾ ತಂಡಗಳು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ. ಪ್ರಾಕೃತಿಕ ವಿಕೋಪ ನಿಧಿಯಿಂದ ಈಗಾಗಲೇ ರಕ್ಷಣಾ ಪರಿಕರಗಳನ್ನು ಜಿಲ್ಲಾಡಳಿತ ಖರೀದಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಹೋಂ ಗಾರ್ಡ್‍ಗೆ ಹಸ್ತಾಂತರಿಸಿದ್ದಾರೆ.
Advertisement
ಅಲ್ಲದೆ ಮಳೆಯಿಂದಾಗಿ ಹೆಚ್ಚಿನ ಅನಾಹುತವಾದಲ್ಲಿ ಕ್ರಮಕೈಗೊಳ್ಳಲು ಎರಡು ಪ್ರಾಕೃತಿಕ ವಿಪತ್ತು ನಿರ್ವಾಹಣಾ ತಂಡಗಳು ಜಿಲ್ಲೆಗೆ ಆಗಮಿಸಿದೆ. ಇನ್ನು ಜಿಲ್ಲೆಯ ಎಲ್ಲಾ ಜೀವ ನದಿಗಳೂ ಅಪಾಯದ ಮಟ್ಟ ಮೀರಿ ಮೈದುಂಬಿ ಹರಿಯುತ್ತಿದೆ. ಮಡಿಕೇರಿಯ ಭಾಗಮಂಡಲ ತ್ರಿವೇಣಿ ಸಂಗಮ ಮತ್ತೊಮ್ಮೆ ಜಲಾವೃತವಾಗಿದೆ. ಹಾರಂಗಿ ಡ್ಯಾಂ ಭರ್ತಿಗೆ 4 ಅಡಿ ಮಾತ್ರ ಬಾಕಿಯಿದೆ. ಮಳೆ ಇದೇ ರೀತಿ ಮುಂದುವರಿದರೆ ತಗ್ಗು ಪ್ರದೇಶಗಳು ಇನ್ನಷ್ಟು ಮುಳುಗಡೆಯಾಗುವ ಭೀತಿ ಇದೆ.
Advertisement
Advertisement
ಡ್ಯಾಂ ಲೆವಲ್
ಕಾವೇರಿ ಕೊಳ್ಳದ ಜಲಾಶಯಗಳ ಸದ್ಯದ ನೀರಿನ ಪ್ರಮಾಣ ನೋಡೋದಾದ್ರೆ;
Advertisement
ಕೆಆರ್ ಎಸ್ (ಮಂಡ್ಯ)
* ಇಂದಿನ ಮಟ್ಟ – 108.78 ಅಡಿ ( ಗರಿಷ್ಠ 124.80 ಅಡಿ)
* ಒಳ ಹರಿವು – 2505 ಕ್ಯೂಸೆಕ್
* ಹೊರ ಹರಿವು – 3482 ಕ್ಯೂಸೆಕ್
ಕಬಿನಿ (ಮೈಸೂರಿನ ಎಚ್.ಡಿ.ಕೋಟೆಯ ಬೀಚನಹಳ್ಳಿಯಲ್ಲಿದೆ)
* ಇಂದಿನ ಮಟ್ಟ – 2283 ಅಡಿ ( ಗರಿಷ್ಠ 2,284 ಅಡಿ)
* ಒಳ ಹರಿವು – 22,000 ಕ್ಯೂಸೆಕ್
* ಹೊರ ಹರಿವು – 25,000 ಕ್ಯೂಸೆಕ್
ಹಾರಂಗಿ (ಕೊಡಗಿನ ಸೋಮವಾರಪೇಟೆಯ ಹುದ್ಗೂರು)
* ಇಂದಿನ ಮಟ್ಟ – 2852.49 ಅಡಿ (ಗರಿಷ್ಠ 2,859 ಅಡಿ)
* ಒಳ ಹರಿವು – 2591 ಕ್ಯೂಸೆಕ್
* ಹೊರ ಹರಿವು – 1200 ಕ್ಯೂಸೆಕ್
ಇನ್ನು ಕರ್ನಾಟಕವಷ್ಟೇ ಅಲ್ಲ, ಕೇರಳ, ತೆಲಂಗಾಣ, ಮಹಾರಾಷ್ಟ್ರ ಹಾಗೂ ಗೋವಾದಲ್ಲಿ ಮುಂದಿನ ಐದು ದಿನಗಳವರೆಗೆ ಭಾರೀ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಎಚ್ಚರಿಸಿದೆ. ಈಗಾಗಲೇ ಭಾರೀ ಮಳೆಗೆ ಮಹಾನರಿ ಮುಂಬೈ ಮುಳುಗಿ ಹೋಗಿದೆ. ಮಲಾಡ್, ಬೋರಿವಿಲಿ, ಪವಾಯಿ, ನವಿ ಮುಂಬೈ, ಥಾಣೆಯಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಮಳೆ ನೀರು ತಗ್ಗು ಪ್ರದೇಶಗಳಿಗೆ ನುಗ್ಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ನವಿ ಮುಂಬೈನಲ್ಲಿ ಮಳೆ ಆರ್ಭಟದಿಂದ ಟ್ರಾಫಿಕ್ ಉಂಟಾಗಿ ಸವಾರರು ಪರದಾಡಿದ್ರು. ಇನ್ನು ರೈಲ್ವೇ ಹಳಿಗಳು ಜಲಾವೃತವಾಗಿದ್ದು, ರಸ್ತೆಗಳು ಅಯೋಮಯವಾಗಿದೆ. ವರುಣನ ರುದ್ರ ನರ್ತನಕ್ಕೆ ಮುಂಬೈ ನಡುಗಿ ಹೋಗಿದ್ದು, ಜನ ನಿದ್ದೆ ಇಲ್ಲದೇ ದಿನ ದೂಡೋ ಸ್ಥಿತಿ ನಿರ್ಮಾಣವಾಗಿದೆ.
ಕ್ಯೂಸೆಕ್ ಮತ್ತು ಟಿಎಂಸಿ ಎಂದರೆ ಎಷ್ಟು?
ಕ್ಯೂಸೆಕ್ ಎಂಬುದು ಕ್ಯೂಬಿಕ್ ಫೀಟ್ ಪರ್ ಸೆಕೆಂಡ್ ನ ಹ್ರಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.