ಬೆಂಗಳೂರು: 40% ಕಮಿಷನ್ ಆರೋಪದಂತೆಯೇ ಕೋವಿಡ್ ಹಗರಣದ (Covid Scam) ಆರೋಪದಲ್ಲೂ ಬಿಜೆಪಿಗೆ (BJP) ಕ್ಲೀನ್ ಚಿಟ್ ಸಿಗಲಿದೆ ಎಂದು ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ ವಿ ಸೋಮಣ್ಣ (V Somanna) ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೋವಿಡ್ ಹಗರಣದ ತನಿಖೆಗೆ ಎಸ್‌ಐಟಿ ರಚನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, 40% ಕಮಿಷನ್ ಆರೋಪ ಏನ್ ಆಯ್ತು ಹೇಳಿ? ಕೋವಿಡ್ ಕೂಡಾ ಹಾಗೇ ಆಗುತ್ತದೆ. ಪದೇ ಪದೇ ಇಂತಹ ದ್ವೇಷ ರಾಜಕೀಯ ಮಾಡಬಾರದು. ಸಿದ್ದರಾಮಯ್ಯ (Siddaramaiah) ಅಂತವರ ಕಾಲದಲ್ಲಿ ಹೀಗೆ ಅಲ್ಲ ಆಗಬಾರದು. ತಪ್ಪಾಗಿದ್ರೆ ತಪ್ಪು ಮಾಡಿದವರು ನೀರು ಕುಡಿಯುತ್ತಾರೆ ಎಂದರು.
3 ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಶಿಗ್ಗಾವಿಯಲ್ಲಿ ಬಿಜೆಪಿ ಗೆಲ್ಲಲಿದೆ. ಚನ್ನಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲ್ಲುತ್ತಾರೆ. ಸಂಡೂರು 50:50 ಇದೆ ಎಂದರು. ಇದನ್ನೂ ಓದಿ: ಏರ್‌ಪೋರ್ಟ್ ಮಾದರಿಯಲ್ಲಿ ಮೆಜೆಸ್ಟಿಕ್ ರೈಲ್ವೇ ನಿಲ್ದಾಣ ಅಭಿವೃದ್ಧಿ: ಸೋಮಣ್ಣ
ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ (BPL Card) ರದ್ದು ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಕೂಡಾ ಮಾಧ್ಯಮಗಳಲ್ಲಿ ಈ ವಿಷಯ ನೋಡಿದ್ದೇನೆ. ಅದರೆ ಹೀಗೆ ಆಗಬಾರದು. ಕಾರ್ಡ್ ರದ್ದು ಆಗುತ್ತಿರುವುದು ಸರಿಯಲ್ಲ ಎಂದರು.
ಆಪರೇಷನ್ ಕಮಲಕ್ಕೆ ಬಿಜೆಪಿಯಿಂದ 100 ಕೋಟಿ ಆಫರ್ ಮಾಡಿದ್ದಾರೆ ಎಂಬ ಕಾಂಗ್ರೆಸ್ ಶಾಸಕ ರವಿ ಗಣಿಗ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸೋಮಣ್ಣ, ಮೊದಲು ಅವರು ಶಾಸಕರಾಗಿ ಕೆಲಸ ಮಾಡಲಿ. ಇಲ್ಲ ಸಲ್ಲದ ಮಾತುಗಳನ್ನು ಶಾಸಕರು ಆಡುವುದು ಬೇಡ. ಶಾಸಕರಿಗೆ ಇದು ಗೌರವ ತರುವುದಿಲ್ಲ ಎಂದು ಸೋಮಣ್ಣ ಕಿಡಿಕಾರಿದರು.