ಕಾರವಾರ: ಗೋಕರ್ಣದ ಕುಡ್ಲೆ ಬೀಚ್‌ನಲ್ಲಿ ಮುಳುಗಿ ಅಪಾಯಕ್ಕೆ ಸಿಲುಕಿದ್ದ ವಿದೇಶಿಗನನ್ನು ಲೈಫ್‌ಗಾರ್ಡ್‌ಗಳು ರಕ್ಷಣೆ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕ್ರಿಸ್‌ಮಸ್ ಹಾಗೂ ಹೊಸವರ್ಷಾಚರಣೆಗಾಗಿ ದೇಶ, ವಿದೇಶದ ಪ್ರವಾಸಿಗರ ದಂಡು ಹರಿದುಬರುತ್ತಿದೆ. ಆದರೆ, ಪ್ರವಾಸಕ್ಕೆ ಬಂದ ಜನರು ಮೋಜು-ಮಸ್ತಿಯಲ್ಲಿ ಸಮುದ್ರಕ್ಕಿಳಿದು ಪ್ರಾಣವನ್ನೇ ಬಿಡುತಿದ್ದಾರೆ. ಇತ್ತೀಚೆಗೆ ಮುರುಡೇಶ್ವರ ಕಡಲಲ್ಲಿ ಕೋಲಾರ, ಬೆಂಗಳೂರು ಸೇರಿ ಐದು ಜನ ವಿದ್ಯಾರ್ಥಿಗಳು ಸಾವು ಕಂಡಿದ್ದರು. ಹೀಗಾಗಿ ಮುರುಡೇಶ್ವರ ಕಡಲ ತೀರವನ್ನು ಪ್ರವಾಸಿಗರಿಗೆ ನಿರ್ಬಂಧಿಸಲಾಗಿದೆ.
ಇತರೆ ಬೀಚ್‌ಗಳಿಗೆ ಪ್ರವಾಸಿಗರು ತೆರಳುತ್ತಿದ್ದು, ಗೋಕರ್ಣದ ಕುಡ್ಲೆ ಬೀಚ್‌ನಲ್ಲಿ ಕಳೆದ ನಾಲ್ಕು ದಿನದಲ್ಲಿ ಐದು ಜನ ದೇಶ-ವಿದೇಶದ ಪ್ರವಾಸಿಗರನ್ನು ಲೈಫ್‌ಗಾರ್ಡ್‌ಗಳು ರಕ್ಷಣೆ ಮಾಡಿದ್ದಾರೆ. ಇಂದು ಕುಡ್ಲೆ ಬೀಚ್‌ನಲ್ಲಿ ಸಮುದ್ರದಲ್ಲಿ ಮುಳುಗುತ್ತಿದ್ದ ಇಟಲಿ ಮೂಲದ ವಿದೇಶಿ ಪ್ರವಾಸಿಗ ಜಾರ್ಜ್ ಎಂಬಾತನನ್ನು ರಕ್ಷಣೆ ಮಾಡಲಾಗಿದೆ.
ಸಮುದ್ರ ನೀರಿನಲ್ಲಿ ಈಜಾಡುವಾಗ ಸುಳಿಗೆ ಸಿಲುಕಿ ಸಹಾಯಕ್ಕೆ ಕೂಗಿ ಕರೆದಾಗ ಲೈಫ್‌ಗಾರ್ಡ್ ನಾಗೇಂದ್ರ ಎಸ್ ಕೂರ್ಲೆ, ಪ್ರದೀಪ್ ಅಂಬಿಗ, ಪ್ರವಾಸಿ ಮಿತ್ರ ಶೇಖರ ಹರಿಕಂತ್ರ ಅವರು ರಕ್ಷಣೆ ಮಾಡಿದ್ದಾರೆ.