ಬಾಲಿವುಡ್ ನಿರ್ದೇಶಕ ಸಾಜಿದ್ ಖಾನ್ ಸದ್ಯ ಬಿಗ್ ಬಾಸ್ ಮನೆಯಲ್ಲಿದ್ದಾರೆ. ನಿನ್ನೆಯಷ್ಟೇ ಸಾಜಿದ್ ಬಿಗ್ ಬಾಸ್ ಮನೆ ಪ್ರವೇಶ ಪ್ರವೇಶಿಸಿದ್ದನ್ನು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ (Swati Maliwal) ಪ್ರಶ್ನೆ ಮಾಡಿದ್ದರು. ಇದರ ವಿರುದ್ಧ ಕೇಂದ್ರ ಸಚಿವರಿಗೆ ಪತ್ರ ಬರೆಯುವುದಾಗಿಯೂ ತಿಳಿಸಿದ್ದರು. ಈ ವಿವಾದ ಇದೀಗ ದೊಡ್ಡದಾಗಿದ್ದು, ಸ್ವಾತಿ ಅವರಿಗೆ ಜೀವ ಬೆದರಿಕೆ (Life Threat) ಕರೆಗಳು ಬರುತ್ತಿವೆಯಂತೆ. ಈ ವಿಷಯವನ್ನು ಸ್ವತಃ ಅವರೇ ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ.
ಹಿಂದಿ ಬಿಗ್ ಬಾಸ್ (Bigg Boss) ಮನೆಯಲ್ಲಿ ನೆಮ್ಮದಿಯಾಗಿ ಆಟ ಆಡುತ್ತಿರುವ ಬಾಲಿವುಡ್ ನಿರ್ದೇಶಕ ಸಾಜಿದ್ ಖಾನ್ (Sajid Khan) ಅವರನ್ನು ಬಿಗ್ ಬಾಸ್ ಮನೆ ಒಳಗೆ ಕಳುಹಿಸಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ. ಇವರ ಮೇಲೆ ಹತ್ತಕ್ಕೂ ಹೆಚ್ಚು ನಟಿಯರು ಲೈಂಗಿಕ ದೌರ್ಜನ್ಯದ ಆರೋಪ (Allegation) ಹೊರಿಸಿದ್ದಾರೆ. ಇಂತಹ ವ್ಯಕ್ತಿಯನ್ನು ಕೂಡ ಬಿಗ್ ಬಾಸ್ ಮನೆಯಿಂದ ಹೊರಗಿಡಬೇಕು ಎಂದು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ:‘ಗಂಧದ ಗುಡಿ’ ಪ್ರಿ ರಿಲೀಸ್ ಇವೆಂಟ್ : ಅಮಿತಾಭ್, ರಜನಿ ಸೇರಿ ಗಣ್ಯರಿಗೆ ಆಹ್ವಾನ
ಬಾಲಿವುಡ್ ನಿರ್ದೇಶಕ ಸಾಜಿದ್ ಖಾನ್ ವಿರುದ್ಧ ಈಗಾಗಲೇ ಅನೇಕ ನಟಿಯರು ಲೈಂಗಿಕ ಆರೋಪ ಮಾಡಿದ್ದಾರೆ. ಮೀಟೂ ಅಭಿಯಾನದಲ್ಲಿ ಅತೀ ಹೆಚ್ಚು ಕೇಳಿ ಬಂದ ಹೆಸರು ಇವರದ್ದೆ. ಅಲ್ಲದೇ, ನಾನಾ ನಟಿಯರು ತಮಗಾದ ನೋವುಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ ಮತ್ತು ಕೆಲವರು ದೂರು ಕೂಡ ನೀಡಿದ್ದಾರೆ. ಇಂತಹ ವ್ಯಕ್ತಿಯನ್ನು ಬಿಗ್ ಬಾಸ್ ಮನೆ ಒಳಗೆ ಕಳುಹಿಸುವುದು ಸರಿಯಲ್ಲ. ಅವರನ್ನು ಮನೆಯಿಂದ ಆಚೆ ಕಳುಹಿಸಬೇಕು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರಿಗೆ ಸ್ವಾತಿ ಮಲಿವಾಲ್ ಪತ್ರ ಬರೆದಿದ್ದಾರೆ.
ಮಾಧ್ಯಮಗಳ ಜೊತೆಯೂ ಮಾತನಾಡಿರುವ ಮಹಿಳಾ ಆಯೋಗದೆ ಮುಖ್ಯಸ್ಥೆ ಸ್ವಾತಿ ಮಲಿವಾಲ್, ಹೌಸ್ ಫುಲ್ 4 ಸಿನಿಮಾ ಆಡಿಷನ್ ವೇಳೆ 17 ವರ್ಷದ ನಟಿಗೆ ಪೂರ್ಣ ಬಟ್ಟೆ ಬಿಚ್ಚಿದರೆ ಮಾತ್ರ ಅವಕಾಶ ಕೊಡುವುದಾಗಿ ಸಾಜಿಸ್ ಹೇಳಿದ್ದರಂತೆ. ಅಲ್ಲದೇ, ಹಮ್ ಶಕಲ್ ಸಿನಿಮಾದ ವೇಳೆಯೂ ಮತ್ತೋರ್ವ ನಟಿಗೆ ಇಂತಹದ್ದೇ ಬೇಡಿಕೆಯನ್ನು ಇಟ್ಟಿದ್ದರಂತೆ. ಈ ರೀತಿಯಾಗಿ ಹಲವು ನಟಿಯರು ಈಗಾಗಲೇ ಹೇಳಿಕೊಂಡಿದ್ದಾರೆ. ಅವರಿಗೆ ನ್ಯಾಯವೂ ಸಿಕ್ಕಿಲ್ಲ. ಇಂತಹ ವ್ಯಕ್ತಿಗಳನ್ನು ಬಿಗ್ ಬಾಸ್ ಮನೆಗೆ ಕಳುಹಿಸುವ ಮೂಲಕ ಯಾವ ಸಂದೇಶವನ್ನು ಸಾರುತ್ತಿದ್ದೀರಿ ಎಂದು ಚಾನೆಲ್ ನವರಿಗೂ ಅವರು ಪ್ರಶ್ನೆ ಮಾಡಿದ್ದಾರೆ.
ಕೇಂದ್ರ ಸಚಿವರಿಗೆ ಸ್ವಾತಿ ಅವರು ಪತ್ರ ಬರೆಯುತ್ತಿದ್ದಂತೆಯೇ ಅವರಿಗೂ ಕೂಡ ಬೆದರಿಕೆ ಪತ್ರಗಳು ಬಂದಿವೆಯಂತೆ. ಸಾಜಿದ್ ಕುರಿತು ಮಾತನಾಡಿದ್ದಕ್ಕಾಗಿ ತಮಗೆ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಪತ್ರ ಬರೆದಿದ್ದಾಗಿ ತಿಳಿಸಿದ್ದಾರೆ. ಈ ಕುರಿತು ಅವರು ದೆಹಲಿ ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ. ಸಾಜಿದ್ ವಿರುದ್ಧದ ಹೋರಾಟದಲ್ಲಿ ಏನೇ ಕಷ್ಟ ಬಂದರೂ ಎದುರಿಸುವುದಾಗಿ ಅವರು ತಿಳಿಸಿದ್ದಾರೆ.