ಕೊಪ್ಪಳ: ಇತ್ತೀಚೆಗಷ್ಟೇ ಅಕ್ರಮ ಮದ್ಯ ಮಾರಾಟ ಮತ್ತು ಇನ್ನಿತರ ಅಕ್ರಮ ಚಟುವಟಿಕೆ ವಿರುದ್ಧ ಧ್ವನಿ ಎತ್ತಿದ್ದ ಶಾಸಕ ಪರಣ್ಣ ಮುನವಳ್ಳಿಗೆ ಇದೀಗ ಬೆದರಿಕೆ ಕರೆ ಬಂದಿದೆ.
ಕೊಪ್ಪಳದ ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರೋ ಪರಣ್ಣ ಮುನವಳ್ಳಿಗೆ ಬೆದರಿಕೆ ಕರೆ, ಅಷ್ಟೇ ಅಲ್ಲದೆ ಹಣ ಕಳುಸುವಂತೆ ವಾರ್ನಿಂಗ್ ಲೆಟರ್ ಕೂಡ ಬಂದಿದೆ. ಮೊದಲು ಕರೆ ಮಾಡಿದ ವ್ಯಕ್ತಿ ಏಕವಚನದಲ್ಲೇ ಮಾತನ್ನು ಪ್ರಾರಂಭ ಮಾಡಿದ್ದಾನೆ.
“ಎ ಮುನವಳ್ಳಿ ನಾಳೆ ನಮ್ಮ ಹುಡುಗರು ಬರ್ತಾರೆ ಅವರ ಹತ್ರ ಹಣ ಕೊಟ್ಟು ಕಳುಹಿಸು. ಪೊಲೀಸ್‍ಗೆ ಏನಾದ್ರು ತಿಳಿಸಿದ್ರೆ ಅದರ ಕಥೆ ಬೇರೆ ಆಗುತ್ತೆ” ಎಂದು ಕರೆ ಮಾಡಿದ್ದಾನೆ. ನಂತರ ಮನೆಗೆ ಒಂದು ಲೆಟರ್ ಕೂಡ ಬಂದಿದೆ. ಯಾರೋ ಅನಾಮಿಕ ವ್ಯಕ್ತಿ ಬಂದು ವಾಚ್‍ಮೆನ್ ಕೈಯಲ್ಲಿ ಲೆಟರ್ ಕೊಟ್ಟು ಪರಣ್ಣಗೆ ಕೊಡಿ ಎಂದು ಹೇಳಿ ಅಲ್ಲಿಂದ ಪರಾರಿಯಾಗಿದ್ದಾನೆ.
ಇನ್ನೂ ಲೆಟರ್ ಅಲ್ಲಿ ಕೋಬ್ರಾ ಟೀಮ್ ಅಂತಾ ಬರೆದು, 500 ಮುಖಬೆಲೆಯ 4 ಖೋಟಾ ನೋಟ್ ಅನ್ನು ಇಟ್ಟು, ನಮ್ಮ ನಿಮ್ಮ ಬ್ಯುಸಿನೆಸ್ ಮುಂದುವರೆಸೋಣ ಅಂತಾ ಬರೆದಿದ್ದಾರೆ ಎಂದು ಹೇಳಲಾಗಿದೆ.
ಇದು ಯಾವುದು ಸಹ ನನಗೆ ಸಂಬಂಧಿಸಿರದ ವಿಚಾರಗಳಾಗಿದ್ದು, ಯಾರೋ ನನ್ನನ್ನು ಬ್ಲಾಕ್‍ಮೇಲ್ ಮಾಡಲು ಈ ರೀತಿ ಮಾಡಿದ್ದಾರೆ. ನಾನು ಈಗಾಗಲೇ ಎಸ್ಪಿ ಮತ್ತು ಡಿಎಸ್ಪಿ ಅವರಿಗೆ ವಿಷಯ ತಿಳಿಸಿದ್ದೇನೆ. ಈ ಕುರಿತು ಗಂಗಾವತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವೆ ಎಂದು ಶಾಸಕರು ಹೇಳಿದ್ದಾರೆ.
ಇನ್ನೂ ಪ್ರಕರಣವನ್ನು ಬೆನ್ನತ್ತಿದ ಪೊಲೀಸರು ಇದೀಗ ಬಳ್ಳಾರಿ ಮೂಲದ ಓರ್ವನನ್ನು ಮತ್ತು ಸ್ಥಳೀಯ ಮೂರು ಜನರನ್ನು ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.