ಉಡುಪಿ: ಬಾರ್ಕೂರು ಮಹಾಸಂಸ್ಥಾನದ ಭಕ್ತರು ಈಗ ಭಯದಲ್ಲಿದ್ದಾರೆ. ಬಾರ್ಕೂರು ಮಹಾಸಂಸ್ಥಾನಕ್ಕೆ ಬ್ರಹ್ಮಾವರ ಪೊಲೀಸರು ಭಧ್ರತೆ ಕೊಟ್ಟಿದ್ದಾರೆ. ಮಠದ ಸುತ್ತ ಓಡಾಡುವ ಕೆಂಪು ಬಣ್ಣದ ಕಾರು ಮತ್ತು ಅದರಲ್ಲಿರುವ ಆಗಂತುಕರು ಈ ಗೊಂದಲಕ್ಕೆ ಕಾರಣ.
ವಾರದ ಹಿಂದೆ ಲೋಕಾರ್ಪಣೆಯಾಗಿರುವ ಉಡುಪಿಯ ಬಾರ್ಕೂರು ಮಹಾಸಂಸ್ಥಾನದ ಸುತ್ತಲೂ ಕೆಂಪು ಕಾರೊಂದು ಓಡಾಡುತ್ತಿದ್ಯಂತೆ. ಬಾರ್ಕೂರು ಸಂಸ್ಥಾನದ ಸಂತೋಷ ಭಾರತಿ ಸ್ವಾಮೀಜಿಯವರನ್ನು ಕೊಲೆಗೈಯ್ಯಲು ಆಗಂತುಕರು ಹೊಂಚು ಹಾಕುತ್ತಿದ್ದಾರೆ ಎಂದು ಸಂಸ್ಥಾನದ ಟ್ರಸ್ಟಿಗಳಲ್ಲೋರ್ವರಾದ ಅಪ್ಪಣ್ಣ ಹೆಗ್ಡೆ ಸಂಶಯ ವ್ಯಕ್ತಪಡಿಸಿದ್ದಾರೆ. ಬಂಟಪೀಠ- ಮಹಾಸಂಸ್ಥಾನದ ಕೆಲಸ ಕಾರ್ಯ ಶುರುವಾದಾಗಿನಿಂದ ಒಂದಲ್ಲ ಒಂದು ರೀತಿಯಲ್ಲಿ ಸಮಾಜದ ಕೆಲವರು ಕಿರುಕುಳ ನೀಡುತ್ತಾ ಬಂದಿದ್ದಾರೆ. ಸಂಸ್ಥಾನ ಆರಂಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ, ಅವಹೇಳನದ ಹೇಳಿಕೆಗಳನ್ನು, ಪ್ರಚಾರಗಳನ್ನು ಮಾಡುತ್ತಾ ಬಂದಿದ್ದಾರೆ ಎಂದು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ದೂರಿದರು.
ಸಂಸ್ಥಾನದ ಸಿಬ್ಬಂದಿ ಶಿವರಾಮ ಶೆಟ್ಟಿ ಮಾತನಾಡಿ, ಮೂರ್ನಾಲ್ಕು ತಿಂಗಳಿಂದ ಬೆಂಗಳೂರು ರಿಜಿಸ್ಟ್ರೇಷನ್‍ನ ಕೆಂಪು ಬಣ್ಣದ ಕಾರು ಓಡಾಡುತ್ತಿದೆ. ಮಠದ ಆವರಣದ ಒಳಗೆ ಬರಲು ಆ ಕಾರಿನಲ್ಲಿದ್ದವರು ಯತ್ನಿಸಿದ್ದಾರೆ. ಹತ್ತಿರ ಹೋಗಿ ಯಾರೆಂದು ತಿಳಿಯಲು ಯತ್ನಿಸಿದಾಗ ವೇಗವಾಗಿ ಕಾರನ್ನು ಚಲಾಯಿಸಿಕೊಂಡು ಹೋಗುತ್ತಾರೆ. ಒಂದು ರೀತಿಯ ಭಯದ ವಾತಾವರಣ ಸೃಷ್ಟಿಯಾಗಿದೆ. ಒಂದು ಬಾರಿ ಕಾರನ್ನು ಅಡ್ಡಗಟ್ಟಿ ನೋಡಲು ಪ್ರಯತ್ನ ಮಾಡಿದರೂ ಅದು ಸಾಧ್ಯವಾಗಲಿಲ್ಲ ಎಂದು ಹೇಳಿದರು.
ಕೆಂಪು ಬಣ್ಣದ ಸಣ್ಣ ಕಾರು..!: ಕೆ.ಎ 02- 528 ಸಂಖ್ಯೆಯ ಕೆಂಪು ಬಣ್ಣದ ಕಾರು ಓಡಾಡುತ್ತಿದ್ದು ಈ ಬಗ್ಗೆ ಸಂಸ್ಥಾನದ ಮಂದಿಗೆ ಸಂಶಯವಿದೆ. Pಬಾರ್ಕೂರು ಮಹಾಸಂಸ್ಥಾನ ಸ್ಥಾಪನೆಯ ಕೆಲಸ ಶುರುವಾದಾಗಿನಿಂದ ಇಂದಿನವರೆಗೂ ಸಾಮಾಜಿಕ ಜಾಲತಾಣದಲ್ಲಿ ಬಂಟ ಸಮುದಾದಯ ಒಂದು ಪಂಗಡ ವಿರೋಧ ಮಡುತ್ತಲೇ ಬಂದಿದೆ. ಸಂಸ್ಥಾನ ಲೋಕಾರ್ಪಣೆಯ ಸಂದರ್ಭ ವಾಟ್ಸಪ್‍ಗಳಲ್ಲಿ ಸಂಸ್ಥಾನದ ವಿಚಾರದಲ್ಲಿ ಆಪಾದನೆಗಳನ್ನು ಹಾಕಲಾಗಿತ್ತು. ವಾದ- ವಿವಾದಗಳ ನಡುವೆ ಸಂಸ್ಥಾನವನ್ನು ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದ್ದರು. ಇದೀಗ ಹತಾಶ ಭಾವದಿಂದ ಸ್ವಾಮೀಜಿಯವರನ್ನು ಹತ್ಯೆಗೈಯ್ಯಲು ಕುಕೃತ್ಯ ನಡೆಸುತ್ತಿರುವುದಾಗಿ ಸಂಸ್ಥಾನದ ಭಕ್ತರಿಗೆ ಭಯ ಶುರುವಾಗಿದೆ. ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ಸಂಸ್ಥಾನಕ್ಕೆ ಪೊಲೀಸ್ ಅಧಿಕಾರಿಯೊಬ್ಬರನ್ನು ರಕ್ಷಣೆಗೆ ನೇಮಿಸಲಾಗಿದೆ.
ಬಾರ್ಕೂರು ಮಹಾಸಂಸ್ಥಾನದ ಲೋಕಾರ್ಪಣೆಯನ್ನು ಸಿಎಂ ಸಿದ್ದರಾಮಯ್ಯ ಮಾಡಿದ್ದರು. ಮುಜರಾಯಿ ಸಚಿವ, ಉಡುಪಿ ಉಸ್ತುವಾರಿ ಸಚಿವರು, ಶಾಸಕರು ಸೇರಿದಂತೆ ಜನನಾಯಕರ ದಂಡೇ ಬಾರ್ಕೂರಿಗೆ ಬಂದು ಸಂಸ್ಥಾನದ ಕೈಂಕರ್ಯಗಳಲ್ಲಿ ಪಾಲ್ಗೊಂಡಿತ್ತು.
ಬಂಟರಲ್ಲಿ ಎರಡು ಬಣ!: ಬಂಟ ಸಮುದಾಯ ಕರಾವಳಿಯ ಪ್ರಬಲ ಸಮುದಾಯ. ಸಂಸ್ಥಾನ ಸ್ಥಾಪನೆ ವಿಚಾರ ಬಂದಾಗ ಬಂಟರಲ್ಲಿ ಎರಡು ಗುಂಪುಗಳಾಗಿದೆ. ಮಠ, ಸ್ವಾಮೀಜಿ, ಸಂಸ್ಥಾನವನ್ನು ವಿರೋಧಿಸುವವರು ಸಂಸ್ಥಾನ ಸ್ಥಾಪನೆಗೆ ಒಲವು ತೋರಿರಲಿಲ್ಲ. ನೂರಾರು ಭೂತಗಳನ್ನು ಒಂದೇ ದೈವಸ್ಥಾನದೊಳಗೆ ಸ್ಥಾಪನೆ ಮಾಡುವುದನ್ನು ವಿರೋಧಿಸಿದ್ದರು. ಮತ್ತೆ ಕೆಲ ಬಂಟ ಮುಖಂಡರು ಸಂಸ್ಥಾನ ಬೇಕು. ಸ್ವಾಮೀಜಿಯ ನೇಮಕ ಮಾಡಬೇಕೆಂದು ಮುಂದೆ ಬಂದಿದ್ದರು. ವಾದ-ವಿವಾದ, ಬೇಕು-ಬೇಡಗಳ ಗೊಂದಲದಲ್ಲಿ ಬಾರ್ಕೂರು ಮಹಾಸಂಸ್ಥಾನ ಇದೆ.
ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿದ್ದಾರೆ ಎನ್ನಲಾದ ಐದು ಮಂದಿಯ ಮೇಲೆ ಎಫ್‍ಐಆರ್ ದಾಖಲಾಗಿದೆ. ಬ್ರಹ್ಮಾವರ ಪೊಲೀಸರು, ಸೈಬರ್ ಕ್ರೈಂ ಪೊಲೀಸರು ಈ ಬಗ್ಗೆ ತನಿಖೆ ಶುರುಮಾಡಿದ್ದಾರೆ. ದೂರಿನ ಪ್ರತಿಯನ್ನು ಸಿಎಂ, ಗೃಹಸಚಿವರು, ಡಿಜಿ ಸೇರಿದಂತೆ ಪೊಲೀಸ್ ಇಲಾಖೆಯ ಎಲ್ಲಾ ವಿಭಾಗಗಳಿಗೆ ರವಾನಿಸಲಾಗಿದೆ. ಕೆಂಪು ಕಾರಿನಲ್ಲಿ ಓಡಾಡುವವರಿಗೂ, ಸಂಸ್ಥಾನದ ಸಾಮಾಜಿಕ ಜಾಲತಾಣದ ವಿರೋಧಿಗಳಿಗೂ ಸಂಬಂಧವಿದ್ಯಾ..? ಅಥವಾ ಎರಡು ಗುಂಪುಗಳು ಬೇರೆ ಬೇರೆನೇ ಇದ್ಯಾ ಅನ್ನೋ ಬಗ್ಗೆ ಪೊಲೀಸರ ತನಿಖೆಯಿಂದ ಗೊತ್ತಾಗಬೇಕಿದೆ.