ಬಾಗಲಕೋಟೆ: ಆ ದಂಪತಿಗೆ ಒಂದು ಕಡೆ ನಿಲ್ಲೋಕಾಗುತ್ತಿಲ್ಲ. ಒಂದು ಊರಲ್ಲಿ ನೆಲೆಸೋಕೆ ಆಗುತ್ತಿಲ್ಲ. ಅಲೆಮಾರಿಗಳಂತೆ ಊರೂರು ಸುತ್ತೋದೇ ಅವರ ಕಾಯಕವಾಗಿದೆ. ಎಲ್ಲಿ ನಮ್ಮ ಮೇಲೆ ಹಲ್ಲೆಯಾಗುತ್ತೋ, ಯಾರು ನಮ್ಮನ್ನು ಕೊಲೆ ಮಾಡಿಬಿಡುತ್ತಾರೋ ಎಂಬ ಬೆದರಿಕೆ ಮನದಲ್ಲಿ ಅಚ್ಚೊತ್ತಿದೆ.
ಇದರಿಂದ ಆ ನೂತನ ದಂಪತಿ ಜೀವ ಕೈಯಲ್ಲಿ ಹಿಡಿದು ಸಾಗುತ್ತಿದ್ದಾರೆ. ಪ್ರೀತಿಸಿ ಮದುವೆಯಾದ ಈ ಜೋಡಿ ಹಕ್ಕಿಗಳಿಗೆ ಮೇಲ್ಜಾತಿ ಕೀಳು ಜಾತಿ ಎಂಬ ತಾರತಮ್ಯ ಕಂಟಕ ತಂದೊಡ್ಡಿದ್ದು ರಕ್ಷಣೆಗಾಗಿ ಮೊರೆ ಇಡುತ್ತಿದ್ದಾರೆ.
ಈ ಜೋಡಿಯ ಪ್ರೇಮಕ್ಕೆ ಜಾತಿ ಅಡ್ಡಬಂದಿದ್ದು ಪ್ರೀತಿಸಿ ಮದುವೆಯಾದರೂ ನೆಮ್ಮದಿಯಿಲ್ಲದೆ ಊರು ಬಿಟ್ಟು ಅಲೆದಾಡುವಂತಾಗಿದೆ. ಇವರ ಹೆಸರು ಹನುಮಂತ ವಡ್ಡರ್ ಮತ್ತು ಮಾದೇವಿ ಕೋಟಿ. ಇಬ್ಬರೂ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಹನುಮಂತ ವಡ್ಡರ್ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಎಣ್ಣೆವಡಗೇರ ಗ್ರಾಮದವರಾಗಿದ್ದು, ಮಾದೇವಿ ಬಾಗಲಕೋಟೆ ತಾಲೂಕಿನ ಬೆನ್ನೂರು ಗ್ರಾಮದ ನಿವಾಸಿ. ಕಾಲೇಜಿಗೆ ಹೋಗುವಾಗ ಹನುಮಂತ ವಡ್ಡರ್ ಪರಿಚಯವಾಗಿ ಸ್ನೇಹ ಬೆಳೆದು ನಂತರ ಪ್ರೀತಿ ಶುರುವಾಗಿದೆ.
ಈಗ ನೊಂದಣಾಧಿಕಾರಿ ಕಚೇರಿಯಲ್ಲಿ ನೊಂದಣಿ ಮದುವೆ ಕೂಡ ಆಗಿದ್ದಾರೆ. ಹುಡುಗಿ ಮೇಲ್ಜಾತಿಗೆ ಸೇರಿದ ಕಾರಣ ಈ ಪ್ರೇಮ ವಿವಾಹವನ್ನು ಮಾದೇವಿ ಮನೆಯವರು ಒಪ್ಪುತ್ತಿಲ್ಲ. ಇಷ್ಟೇ ಅಲ್ಲದೆ ಇಬ್ಬರಿಗೂ ಕರೆ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾರೆ. ಇದರಿಂದ ಈ ಪ್ರೇಮಿಗಳು ನಮಗೆ ಜೀವ ಬೆದರಿಕೆ ಇದೆ, ರಕ್ಷಣೆ ನೀಡಿ ಎಂದು ಬಾಗಲಕೋಟೆ ಎಸ್‍ಪಿ ಮೊರೆ ಹೋಗಿದ್ದಾರೆ.
ಪ್ರೀತಿ ಶುರುವಾಗಿ ಒಂದು ವರ್ಷದ ಬಳಿಕ ಇಬ್ಬರೂ ಮದುವೆ ಆದರೂ ಇವರನ್ನು ಮಾದೇವಿ ಪೋಷಕರು ನೆಮ್ಮದಿಯಿಂದ ಬಾಳ್ವೆ ಮಾಡಲು ಬಿಡುತ್ತಿಲ್ಲ. ಜೊತೆಗೆ ಯುವಕನ ವಿರುದ್ಧ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಿಸಿದ್ದಾರೆ. ಆದರೆ ಯುವತಿ ಮಾದೇವಿ ಮಾತ್ರ ಪತಿ ಬೆನ್ನಿಗೆ ನಿಂತಿದ್ದು, ನನ್ನನ್ನು ಕಿಡ್ನಾಪ್ ಮಾಡಿಲ್ಲ. ನಾನು ಇವರನ್ನು ಮನಸಾರೆ ಪ್ರೀತಿಸುತ್ತಿದ್ದು ನಾನಾಗೇ ಬಂದು ಇವರನ್ನು ಮದುವೆಯಾಗಿದ್ದೇನೆ. ದಯವಿಟ್ಟು ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ ಎಂದು ಹೇಳಿದ್ದಾರೆ.