ತುಮಕೂರು: ಪ್ರೀತಿಸಿ ಮದುವೆಯಾದ ಪ್ರೇಮಿಗಳ ಜೀವನಕ್ಕೆ ಜಾತಿ ಅಡ್ಡಿಯಾಗಿದೆ. ಜಾತಿ ಬೇರೆ ಬೇರೆ ಎನ್ನುವ ಕಾರಣಕ್ಕೆ ಪೋಷಕರೇ ಪ್ರೇಮಿಗಳಿಗೆ ಕೊಲೆ ಬೆದರಿಕೆ ಹಾಕಿರುವ ಘಟನೆ ತುಮಕೂರು ಕುಣಿಗಲ್ ತಾಲೂಕಿನ ಹುಲಿಯೂರುದುರ್ಗದ ಬಳಿ ನಡೆದಿದೆ.
ಹುಲಿಯೂರುದುರ್ಗದ ನಿವಾಸಿ ಸಿಂಧು ಮತ್ತು ಹಂಗಾರಹಳ್ಳಿ ನಿವಾಸಿ ಜಗದೀಶ್ ಕಳೆದ ಎರಡು ವರ್ಷಗಳಿಂದ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಈ ವೇಳೆ ಸಿಂಧು ಮತ್ತು ಜಗದೀಶ್ ನಡುವೆ ಪ್ರೇಮಾಂಕುರವಾಗಿದೆ. ಇತ್ತ ಸಿಂಧು ಪೋಷಕರು ಮಗಳಿಗೆ ಮದುವೆ ಮಾಡುವ ಸಲುವಾಗಿ ಹುಡುಗನನ್ನ ಹುಡುಕಿ ನಿಶ್ಚಿತಾರ್ಥ ತಯಾರಿ ನಡೆಸಿದ್ದಾರೆ.
ವಿಷಯ ತಿಳಿದ ಸಿಂಧು ಪ್ರಿಯಕರ ಜಗದೀಶ್ ಗೆ ಎಂಗೇಜ್ಮೆಂಟ್ ವಿಚಾರ ತಿಳಿಸಿದ್ದಾಳೆ. ಇಬ್ಬರೂ ಮೇಜರ್ ಆಗಿರೋ ಕಾರಣದಿಂದಾಗಿ ಒಂದು ನಿರ್ಧಾರಕ್ಕೆ ಬಂದು ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ. ಬಳಿಕ ಮದುವೆಯನ್ನು ಯಲಹಂಕದಲ್ಲಿ ರಿಜಿಸ್ಟರ್ ಕೂಡ ಮಾಡಿಸಿದ್ದಾರೆ. ಇದರಿಂದ ಕೋಪಗೊಂಡಿರುವ ಪೋಷಕರು ಇದೀಗ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಿಂಧು ಆರೋಪಿಸಿದ್ದಾರೆ.
ನಾವಿಬ್ಬರೂ ಎರಡು ವರ್ಷದಿಂದ ಪ್ರೀತಿಸಿ ಮದುವೆಯಾಗಿದ್ದೇವೆ. ಜೊತೆಗೆ ನಮ್ಮ ಜಾತಿ ಬೇರೆಯಾದ್ದರಿಂದ ನಮ್ಮ ಪೋಷಕರು ಮದುವೆಗೆ ಒಪೋದಿಲ್ಲ ಎಂದು ಮೊದಲೇ ನಾನು ಸಿಂಧುಗೆ ಹೇಳಿದ್ದೆ. ಆದರೆ ನಾನು ಮದುವೆಯಾಗದಿದ್ದರೆ ಆಕೆ ಬದುಕೋದಿಲ್ಲ ಎಂದಳು. ಹಾಗಾಗಿ ನಾವಿಬ್ಬರು ಮದುವೆಯಾಗಿದ್ದೀವಿ. ಈಗ ಆಕೆಯ ಪೋಷಕರು ನನ್ನ ಮನೆಯವರಿಗೆ ತೊಂದರೆ ನೀಡುತ್ತಿದ್ದಾರೆ. ನನ್ನ ವಿರುದ್ಧ ಕಿಡ್ನಾಪ್ ಪ್ರಕರಣ ದಾಖಲಿಸಿ, ಪೊಲೀಸರನ್ನ ಬಳಸಿಕೊಂಡು ಎದುರಿಸುತ್ತಿದ್ದಾರೆ. ಹಾಗಾಗಿ ರಕ್ಷಣೆ ಕೋರಿ ಹಿರಿಯ ಪೊಲೀಸ್ ಅಧಿಕಾರಿಗಳ ಬಳಿ ಬಂದಿದ್ದೇವೆ ಎಂದು ಜಗದೀಶ್ ಹೇಳಿದ್ದಾರೆ.
ಒಟ್ಟಿನಲ್ಲಿ ಜಾತಿ ಭೇದದ ಎಲ್ಲೆ ಮೀರಿದ ಪ್ರೀತಿಗೆ, ಪೋಷಕರ ಕಾರಣದಿಂದಾಗಿ ಜಾತಿ ತಾರತಮ್ಯ ಉಂಟಾಗಿದೆ. ಅಂತರ್ಜಾತಿಯವರನ್ನು ಪ್ರೀತಿಸಿದರು ಎಂಬ ಕಾರಣಕ್ಕೆ ಪೋಷಕರೇ ಪ್ರೇಮಿಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಸದ್ಯ ರಕ್ಷಣೆ ಕೋರಿ ಬಂದಿರುವ ಪ್ರೇಮಿಗಳಿಗೆ ಪೊಲೀಸರು ಸಾಂತ್ವನ ಹೇಳಿದ್ದು, ಪ್ರೇಮಿಗಳ ಸಮಸ್ಯೆಗೆ ಸ್ಪಂದಿಸುವಂತೆ ಕುಣಿಗಲ್ ಪೊಲೀಸರಿಗೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.