ಟ್ರಬಲ್ ಶೂಟರ್, ಕನಕಪುರ ಬಂಡೆ, ಸಾವಿರ ಕೋಟಿ ಒಡೆಯ ಎಂದೆಲ್ಲ ಕರೆಯಿಸಿಕೊಂಡು ರಾಜ್ಯಾದ್ಯಂತ ಜನ ಮೆಚ್ಚುಗೆ ಗಳಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (D K Shivakumar) ಈಗ ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಕನಕಪುರ ತಾಲೂಕಿನ ದೊಡ್ಡ ಆಲನಹಳ್ಳಿಯ ಇಬ್ಬಳಿಕೆ ಕೆಂಪೇಗೌಡ (KempeGowda) ಅವರ ಮೊಮ್ಮಗನಾದ ಡಿಕೆಶಿ, ಹುಟ್ಟುತ್ತಲೇ ಶ್ರೀಮಂತ. ಅವರ ಸೋದರ ಮಾವ ಮುನಿಲಿಂಗಯ್ಯ ಅವರು ಕನಕಪುರದಲ್ಲಿ ರೈಸ್ ಮಿಲ್ ನಡೆಸುತ್ತಿದ್ದರು. ಮೊದಲು ಉದ್ಯಮಿಯಾಗುವ ಕನಸು ಕಂಡಿದ್ದ ಡಿಕೆಶಿ ಕನಕಪುರದಲ್ಲಿನ ಭೂಮಿ ಮಾರಿ, ಬೆಂಗಳೂರಿನಲ್ಲಿ ಕೋಳಿ ಫಾರಂ ತೆರೆದರು. ಬಳಿಕ ಸುಂಕದಕಟ್ಟೆಯಲ್ಲಿ 3 ಎಕರೆ ಭೂಮಿ ಖರೀದಿಸಿ, ಬಸವೇಶ್ವರ ನಗರದಲ್ಲಿ ಮನೆಯೊಂದನ್ನು ಖರೀದಿಸಿದರು. ಆದ್ರೆ ತನ್ನ ಮಾವನ ರೈಸ್‌ಮಿಲ್‌ನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದ ಡಿಕೆಶಿ ಕೊನೆಗೆ ಅಲ್ಲಿ ನಡೆಯುತ್ತಿದ್ದ ಚರ್ಚೆಗಳಿಂದ ಪ್ರೇರಿತರಾಗಿ ರಾಜಕೀಯಕ್ಕೆ ದುಮುಕಿದರು. ಸೆಂಟ್ರಲ್ ಹಾಸ್ಟೆಲ್ ನಲ್ಲಿ ಕಾಲ ಕಳೆಯುತ್ತಿದ್ದ ಡಿಕೆಶಿಗೆ ಮೊದಲು ಬಂಗಾರಪ್ಪ, ಬಳಿಕ ಎಸ್.ಎಂ ಕೃಷ್ಣ ರಾಜಕೀಯ ಗುರುಗಳಾದರು.
18ನೇ ವಯಸ್ಸಿನಲ್ಲಿಯೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (Congress) ಪಕ್ಷದ ವಿದ್ಯಾರ್ಥಿ ವಿಭಾಗವಾದ ಎನ್‌ಎಸ್‌ಯುಐಗೆ ಸೇರ್ಪಡೆಗೊಂಡು ಅನತಿ ಕಾಲದಲ್ಲಿಯೇ ಬೆಂಗಳೂರು ಜಿಲ್ಲೆಯ ಘಟಕದ ಅಧ್ಯಕ್ಷರಾದರು (1981-83). ವಿದ್ಯಾಭ್ಯಾಸಕ್ಕೆಂದು ಬೆಂಗಳೂರಿನತ್ತ ಮುಖ ಮಾಡಿದರು. ಅರ್‌ಸಿಬಿ ಕಾಲೇಜಿನಲ್ಲೊ ವ್ಯಾಸಂಗ ಮಾಡಲು ಬಂದರು. ಆದ್ರೆ ಡಿಕೆಶಿ ಹೋರಾಟಗಳಿಂದ ಗುರುತಿಸಿಕೊಂಡಿದ್ದರಿಂದ ಆರ್‌ಸಿ ಕಾಲೇಜು ಸೀಟ್ ನೀಡುವಲ್ಲಿ ಹಿಂದೇಟು ಹಾಕಿತ್ತು. ಕೊನೆಗೆ ತಮ್ಮ ಸಾಮರ್ಥ್ಯದಿಂದ ಸೀಟು ಗಿಟ್ಟಿಸಿಕೊಂಡು ವಿದ್ಯಾಭ್ಯಾಸ ಮಾಡಿದರು. ಆಗಲೇ ಯುವ ಕಾಂಗ್ರೆಸ್‍ಗೆ ಸೇರಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷರಾಗಿ ಕನಕಪುರ ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ ಶಿಬಿರಗಳನ್ನು ವ್ಯವಸ್ಥೆಗೊಳಿಸಿ ಜನರ ಗಮನ ಸೆಳೆದರು. ಇದನ್ನೂ ಓದಿ: ಹಳ್ಳಿಗಾಡಿನ ಜೀವನ, ದನ ಕಾಯುತ್ತಿದ್ದ ಹುಡುಗನಿಂದ ಮುಖ್ಯಮಂತ್ರಿ ಗಾದಿವರೆಗೆ; ಸಿದ್ದರಾಮಯ್ಯ ಸಾಗಿಬಂದ ಹಾದಿ..
1985ರ ಸಾತನೂರು ವಿಧಾನಸಭಾಕ್ಷೇತ್ರದಲ್ಲಿ ಅಂದಿನ ಪ್ರಭಾವಿ ಜನತಾದಳ ಮುಖಂಡರಾದ ಶ್ರೀ ಹೆಚ್.ಡಿ. ದೇವೇಗೌಡ (HD Devegowda) ಅವರ ವಿರುದ್ಧ ಕಾಂಗ್ರೆಸ್ ಪಕ್ಷದಲ್ಲಿ ಉತ್ತಮ ಅಭ್ಯರ್ಥಿ ಸಿಗುವುದು ದುರ್ಲಭವಾದಾಗ ಪಕ್ಷದ ವರಿಷ್ಠರ ಕಣ್ಣು ಡಿ.ಕೆ. ಶಿವಕುಮಾರ್ ಮೇಲೆ ಬಿತ್ತು. ಹೆಚ್.ಡಿ ದೇವೇಗೌಡರ ವಿರುದ್ಧ ಕಣಕ್ಕಿಳಿದಾಗ ಡಿಕೆಶಿ ಒಂದಿಷ್ಟು ಮಂದಿಗೆ ಮಾತ್ರವೇ ಪರಿಚಯ ಇತ್ತು. ಅಂದಿನಿಂದ ಈವರೆಗೂ ಹೋರಾಟದ ಮೂಲಕವೇ ಸ್ಥಾನ, ಬಿರುದುಗಳೆಲ್ಲವನ್ನು ಪಡೆದಿರುವ ಅವರು ರಾಜ್ಯ ಕಾಂಗ್ರೆಸ್‌ನ ಶಕ್ತಿಯೂ ಹೌದು. ಇಂದು ತಮ್ಮ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನ ಗೆದ್ದು ಮತ್ತೊಮ್ಮೆ ಬಹುಮತದ ಸರ್ಕಾರ ಸ್ಥಾಪಿಸುತ್ತಿದೆ.
ಮೊಟ್ಟ ಮೊದಲ ಚುನಾವಣೆಯಲ್ಲಿ ದೊಡ್ಡಗೌಡರ ವಿರುದ್ಧ ಕಣಕ್ಕಿಳಿದಿದ್ದ ಡಿಕೆಶಿ, ಅವರಿಗೆ ಪ್ರಯಾಸದ ಗೆಲುವು ಪಡೆಯುವಂತೆ ಫೈಟ್ ಕೊಟ್ಟಿದ್ದರು. ಆ ಬಳಿಕ 1987ರಲ್ಲಿ ಸಾತನೂರು ಕ್ಷೇತ್ರದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದರು. 1989ರಲ್ಲಿ ಸಾತನೂರು ಕ್ಷೇತ್ರದಿಂದ ವಿಧಾನಸಭೆ ಚುನಾವಣೆ ಗೆಲ್ಲುವ ಮೂಲಕ ಕ್ಷೇತ್ರದಲ್ಲಿದ್ದ ಜೆಡಿಎಸ್ ಪ್ರಭಾವ ಕಡಿಮೆಗೊಳಿಸಿದರು. 1991ರಲ್ಲಿ ಅಂದಿನ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ಅನಾರೋಗ್ಯದ ಕಾರಣ ಮುಖ್ಯಮಂತ್ರಿ ಪದವಿಯನ್ನು ತ್ಯಜಿಸಬೇಕಾಗಿ ಬಂದಾಗ ಬಂಗಾರಪ್ಪ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವಲ್ಲಿ ಡಿ.ಕೆ ಶಿವಕುಮಾರ್ ಮಹತ್ವದ ಪಾತ್ರವಹಿಸಿದ್ದರು. ಬಂಗಾರಪ್ಪ ಸಂಪುಟದಲ್ಲಿ ಬಂಧಿ ಖಾನೆ ಖಾತೆ ಹೊಣೆ ಅವರಿಗೆ ನೀಡಲಾಯಿತು. 1994ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಕೈತಪ್ಪಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಗಳಿಸಿ ಕಾಂಗ್ರೆಸ್‌ಗೆ ಬಿಗ್ ಶಾಕ್ ಕೊಟ್ಟಿದ್ದರು. 1999ರ ಚುನಾವಣೆಯಲ್ಲಿ ಸಾತನೂರು ಕ್ಷೇತ್ರದಿಂದ ಮತ್ತೆ ಆಯ್ಕೆಗೊಂಡರು, ಅಲ್ಲದೇ ಎಸ್.ಎಂ ಕೃಷ್ಣ ಸಂಪುಟದಲ್ಲಿ ಮೊದಲಬಾರಿಗೆ ಸಹಕಾರ ಸಚಿವರೂ ಆಗಿದ್ದರು.
2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಸಾತನೂರು ಕ್ಷೇತ್ರ (Sathanur Constituency) ಇಲ್ಲವಾಯಿತು. ಆಗ ಕನಕಪುರ ಕ್ಷೇತ್ರಕ್ಕೆ ಬಂದರು. 2008, 2013, 2018 ಮತ್ತು 2023ರ ಚುನಾವಣೆಯಲ್ಲಿ ಕನಕಪುರದಿಂದ ನಿರಂತರವಾಗಿ ಗೆಲುವು ಸಾಧಿಸುತ್ತಾ ಬಂದರು. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಸರ್ಕಾರ ರಚನೆಯಾಯಿತು. ಸಿದ್ದರಾಮಯ್ಯ ಸಿಎಂ ಆಗಿದ್ದರೂ, ಹೈಕಮಾಂಡ್ ಒಪ್ಪಿದ ಮೇಲೆ ಸಂಪುಟ ಸೇರಿ 7 ತಿಂಗಳ ನಂತರ ಇಂಧನ ಖಾತೆ ವಹಿಸಿಕೊಂಡರು. 2018ರಲ್ಲಿ ಯಾವ ಪಕ್ಷವೂ ಬಹುಮತ ಪಡೆಯಲಿಲ್ಲ. ಆಗ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಜಲ ಸಂಪನ್ಮೂಲ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವರಾದರು. 35 ವರ್ಷಗಳಿಂದ ಸ್ವಾಮಿ ನಿಷ್ಠೆಯಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುತ್ತಿರುವ ಡಿಕೆ ಶಿವಕುಮಾರ್, ಡಿನೇಶ್ ಗುಂಡೂರಾವ್ ಅವರ ಬಳಿಕ 2020 ಮಾರ್ಚ್ 11ರಂದು ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡರು.
ಅಷ್ಟೇ ಅಲ್ಲ ಮಹಾರಾಷ್ಟ್ರದಲ್ಲಿ ವಿಲಾಸ್ ರಾವ್ ದೇಶಮುಖ್ ಸರ್ಕಾರ ಕುಸಿಯುವ ಭೀತಿ ಎದುರಾದಾಗ ಶಾಸಕರನ್ನು ರಕ್ಷಣೆ ಮಾಡಿ ಬೆಂಗಳೂರಿಗೆ ಕರೆದುಕೊಂಡು ಬಂದು, ಕುದುರೆ ವ್ಯಾಪಾರ ನಡೆಯದಂತೆ ನೋಡಿಕೊಂಡರು. 2017ರಲ್ಲಿ ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆ ಚುನಾವಣೆ ನಡೆಯುವಾಗ ಪಕ್ಷದ ಸೂಚನೆಯಂತೆ ಪಕ್ಷದ ಶಾಸಕರನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ಕುದುರೆ ವ್ಯಾಪಾರ ತಪ್ಪಿಸಿದರು. ಜಾರಿ ನಿರ್ದೇಶನಾಲಯದ ದಾಳಿ ಬಳಿಕ ಡಿ.ಕೆ ಶಿವಕುಮಾರ್ ಬಂಧನವಾಯಿತು. ದೆಹಲಿಯ ತಿಹಾರ್ ಜೈಲಿನಲ್ಲಿದ್ದ ಅವರನ್ನು ನೋಡಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿ ನೀಡಿದ್ದರು.