ಪ್ರಜ್ವಲ್ ದೇವರಾಜ್ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ಬಗ್ಗೆ, ಅದರ ಕಥೆಯ ಬಗ್ಗೆ ಭಾರೀ ಭರವಸೆ ಇಟ್ಟುಕೊಂಡಿದ್ದಾರೆ. ಇದರ ಕಥೆ, ತಮ್ಮ ಪಾತ್ರದಿಂದ ಕಾಡಿಸಿಕೊಂಡೇ ನಟಿಸಿದ್ದ ಪ್ರಜ್ವಲ್ ಈ ಚಿತ್ರದ ಕಥೆಯ ಆಚೀಚೆಗಿನ ಒಂದಷ್ಟು ವಿವರಗಳನ್ನು ಹಂಚಿಕೊಂಡಿದ್ದಾರೆ.
ನಿರ್ದೇಶಕ ದಿನಕರ್ ತೂಗುದೀಪ ಅವರ ಮಡದಿ ಮಾನಸಾ ಬರೆದ ಈ ಕಥೆಯನ್ನು ಆರಂಭಿಕವಾಗಿ ಕೇಳಿದಾಗಲೇ ಅದರ ಬಗ್ಗೆ ತಮ್ಮ ಪಾತ್ರದ ಬಗ್ಗೆ ಪ್ರಭಾವಿತನಾಗಿದ್ದಾಗಿ ಪ್ರಜ್ವಲ್ ಹೇಳಿಕೊಂಡಿದ್ದಾರೆ. ಇಡೀ ಕಥೆ ಎಲ್ಲರ ಬದುಕುಗಳನ್ನೂ ಒಂದಲ್ಲ ಒಂದು ರೀತಿಯಲ್ಲಿ ಪ್ರಖಭಾವಿಸುವಂತಿದೆ. ಪ್ರತೀ ಪ್ರೇಕ್ಷಕರೆದೆಯಲ್ಲಿ, ಪ್ರತೀ ಪಾತ್ರಗಳೂ ಶಾಶ್ವತವಾಗೊಂದು ಛಾಯೆಯನ್ನು ಉಳಿಸುವಂತಿವೆ. ಎಲ್ಲ ಸಂಕಟಗಳ ಆಯಸ್ಸು ಕಡಿಮೆ ಎಂಬ ಸೂತ್ರದಡಿಯಲ್ಲಿ ಹೊಸಾ ಭರವಸೆಯೊಂದನ್ನು ತುಂಬಿ ಕಳಿಸುವಂತಿವೆ ಎಂಬುದು ಪ್ರಜ್ವಲ್ ಅನಿಸಿಕೆ.
ಅಂದಹಾಗೆ ಪ್ರಜ್ವಲ್ ದೇವರಾಜ್ ಈ ಚಿತ್ರದಲ್ಲಿ ಕೋಟ್ಯಾಧೀಶನ ಮಗ ವಿರಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಯಾವುದಕ್ಕೂ ಕಡಿಮೆ ಇಲ್ಲದಿದ್ದರೂ ಎಂಥಾದ್ದೋ ಕೊರತೆ, ಕೊರೆತಗಳ ನಡುವೆ ಕಂಗಾಲಾದ ಪಾತ್ರವದು. ಇಡೀ ಚಿತ್ರದ ಜೀವಾಳವಾಗಿರೋ ಆ ಪಾತ್ರದ ಅಸಲೀಯತ್ತೇನೆಂಬುದು ಬಿಡುಗಡೆಯ ನಂತರ ಗೊತ್ತಾಗಲಿದೆಯಾದರೂ, ಆ ಪಾತ್ರದ ಪ್ರಭಾವ ದೊಡ್ಡದೆಂಬುದು ಈಗಾಗಲೇ ಜಾಹೀರಾಗಿದೆ.
ಪ್ರಜ್ವಲ್ ದೇವರಾಜ್ ನಿರ್ದೇಶಕ ತೂಗುದೀಪ ದಿನಕರ್ ಅವರ ಫ್ಯಾಮಿಲಿ ಫ್ರೆಂಡ್. ಪ್ರಜ್ವಲ್ ರನ್ನು ಚಿಕ್ಕಂದಿನಿಂದಲೂ ನೋಡುತ್ತಾ ಬಂದಿರೋ ದಿನಕರ್ ಅವರ ಸಿನಿಮಾ ಬೆಳವಣಿಗೆಗಳನ್ನೂ ಗಮನಿಸುತ್ತಲೇ ಇದ್ದರು. ಅದ್ಭುತ ಎನರ್ಜಿ ಇರೋ ಪ್ರಜ್ವಲ್ ಜೊತೆಗೊಂದು ಸಿನಿಮಾ ಮಾಡಬೇಕೆಂಬ ಆಸೆ ದಿನಕರ್ ಅವರಿಗೂ ಇತ್ತು. ಅದು ಪ್ರಜ್ವಲ್ ಅವರದ್ದೂ ಆಗಿತ್ತು. ಕಾಲವೇ ಅದಕ್ಕೆ ವೇದಿಕೆ ಸಿದ್ಧಪಡಿಸಿದೆ. ಪ್ರಜ್ವಲ್‍ಗಾಗಿ ಒಂದು ಪಾತ್ರವೂ ಸೃಷ್ಟಿಯಾಗಿದೆ. ಇಂಥಾ ಕಾಲಾಂತರಗಳ ಕನಸಿನಂತೆ ಮೂಡಿ ಬಂದಿರೋ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರ ವಾರದೊಪ್ಪತ್ತಿನಲ್ಲೇ ತೆರೆ ಕಾಣಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv