ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಸಾರಥಿ ಎಂಬ ಚಿತ್ರದ ಮೂಲಕ ಸ್ಟಾರ್ ನಿರ್ದೇಶಕರಾಗಿ ಹೊರ ಹೊಮ್ಮಿದ್ದವರು ತೂಗುದೀಪ ದಿನಕರ್. ಆನಂತರ ಡೈರೆಕ್ಷನ್ ಕೆಲಸದಿಂದ ಸ್ವಲ್ಪ ವಿರಾಮ ಪಡೆದಿದ್ದ ದಿನಕರ್ ಚಕ್ರವರ್ತಿ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದರು. ಇದಾದ ನಂತರ ದಿನಕರ್ ಪೂರ್ತಿ ನಟನೆಯಲ್ಲೇ ತೊಡಗಿಸಿಕೊಳ್ಳುತ್ತಾರೆ ಅನ್ನೋ ಮಾತು ಕೇಳಿಬರುತ್ತಿತ್ತು.
ಆದರೆ ಜನರ ಮಾತನ್ನು ಸುಳ್ಳು ಮಾಡುವಂತೆ ದಿನಕರ್ ಮತ್ತೆ ನಿರ್ದೇಶನಕ್ಕೆ ಇಳಿದು ‘ಲೈಫ್ ಜೊತೆ ಒಂದು ಸೆಲ್ಫೀ’ ಅನ್ನೋ ಆಕರ್ಷಕ ಶೀರ್ಷಿಕೆಯ ಸಿನಿಮಾವನ್ನು ಶುರು ಮಾಡಿದ್ದರು. ಈ ಚಿತ್ರ ಯಾವಾಗ ಶುರುವಾಯಿತು, ಯಾವಾಗ ಮುಗಿಯಿತು ಅನ್ನೋದೂ ತಿಳಿಯದಂತೆ ಸೈಲೆಂಟಾಗಿ ಸಿನಿಮಾ ಚಿತ್ರೀಕರಣ ಪೂರೈಸಿ ಸಿದ್ಧಗೊಂಡಿದೆ. ಮೊನ್ನೆ ದಿನ ‘ಲೈಫ್ ಜೊತೆ ಒಂದು ಸೆಲ್ಫೀ’ ಚಿತ್ರದ ಹಾಡುಗಳನ್ನು ಖುದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆಗೊಳಿಸಿದ್ದಾರೆ.
ಈ ಸಿನಿಮಾದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಮತ್ತು ಪ್ರಜ್ವಲ್ ದೇವರಾಜ್ ಒಟ್ಟಾಗಿ ಅಭಿನಯಿಸಿದ್ದಾರೆ. ಈ ಚಿತ್ರವನ್ನು ಸಮೃದ್ಧಿ ಮಂಜುನಾಥ್ ನಿರ್ಮಾಣ ಮಾಡಿದ್ದಾರೆ. ಇನ್ನೇನು ಸಿನಿಮಾ ತೆರೆಗೆ ಬರಲಿದೆ. ಅಂದಹಾಗೆ, ಈ ಸಿನಿಮಾಗೆ ದಿನಕರ್ ಅವರ ಪತ್ನಿ ಮಾನಸಾ ದಿನಕರ್ ಕಥೆ ಬರೆದಿದ್ದಾರೆ.
ಹರಿಪ್ರಿಯಾ ನಾಯಕಿಯಾಗಿ ಕಾಣಿಸಿಕೊಂಡಿರುವ ಈ ಚಿತ್ರ ಯುವಕರ ಮನಸ್ಸಿಗೆ ಹತ್ತಿರಾಗುವ ಕಥೆ ಹೊಂದಿದೆಯಂತೆ. ಸಾಧು ಕೋಕಿಲಾ ಮಾಮೂಲಿ ಪಾತ್ರಕ್ಕಿಂತಾ ಭಿನ್ನವಾಗಿ ಕಾಣಿಸಿಕೊಂಡಿದ್ದಾರಂತೆ. ಚೆಂದದ ಚಿತ್ರದ ಹಾಡುಗಳು ಲೋಕಾರ್ಪಣೆಗೊಂಡಿರೋದರಿಂದ ಲೈಫ್ ಜೊತೆ ಒಂದ್ ಸೆಲ್ಫಿ ಬಗೆಗಿನ ಕುತೂಹಲದ ಕಾವು ಹೆಚ್ಚಾಗಲಿರೋದಂತೂ ಸತ್ಯ.