ನವದೆಹಲಿ: 7 ವರ್ಷಗಳ ಹಿಂದೆ ಹೆಂಡತಿಯನ್ನ ಕೊಲೆಗೈದು ಆಕೆಯ ದೇಹವನ್ನ ಪೀಸ್ ಪೀಸ್ ಮಾಡಿ ಡೀಪ್ ಫ್ರೀಜರ್‍ನಲ್ಲಿಟ್ಟ ಸಾಫ್ಟ್ ವೇರ್ ಎಂಜಿನಿಯರ್ ಮೇಲಿನ ಆರೋಪ ಸಾಬೀತಾಗಿದ್ದು ಡೆಹ್ರಾಡೂನ್ ಕೋರ್ಟ್ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ದೆಹಲಿಯ ರಾಜೇಶ್ ಗುಲಾಟಿ ಶಿಕ್ಷೆಗೊಳಗಾಗಿರುವ ವ್ಯಕ್ತಿ. ಐಪಿಸಿ ಸೆಕ್ಷನ್ 302(ಕೊಲೆ) ಹಾಗೂ 201(ಸಾಕ್ಷಿಯನ್ನು ಬಚ್ಚಿಟ್ಟಿದ್ದು) ಅಡಿಯಲ್ಲಿ ರಾಜೇಶ್ ಆರೋಪಿಯಾಗಿದ್ದ. ಇದೀಗ ಈತನ ಮೇಲಿನ ಆರೋಪ ಸಾಬೀತಾಗಿದ್ದು, ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ವಿನೋದ್ ಕುಮಾರ್ ತೀರ್ಪು ಪ್ರಕಟಿಸಿದ್ದಾರೆ. ರಾಜೇಶ್‍ಗೆ ಜೀವಾವಧಿ ಶಿಕ್ಷೆ ಜೊತೆಗೆ 15 ಲಕ್ಷ ರೂ. ದಂಡ ವಿಧಿಸಲಾಗಿದೆ. 7 ವರ್ಷ ಹಳೆಯದಾದ ಈ ಪ್ರಕರಣ ಉತ್ತರಾಖಂಡ್‍ನ ಅತ್ಯಂತ ಘೋರ ಘಟನೆಗಳಲ್ಲೊಂದು ಎಂದು ರಾಷ್ಟ್ರದಾದ್ಯಂತ ಸುದ್ದಿಯಾಗಿತ್ತು.
Advertisement
Advertisement
ಏನಿದು ಪ್ರಕರಣ?: 2010ರ ಅಕ್ಟೋಬರ್ 17ರ ರಾತ್ರಿ ರಾಜೇಶ್ ಹಾಗೂ ಪತ್ನಿ ಅನುಪಮಾ ನಡುವೆ ಜಗಳವಾಗಿತ್ತು. ನಂತರ ರಾಜೇಶ್ ಪತ್ನಿಯನ್ನ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಎಲೆಕ್ಟ್ರಿಕ್ ಗರಗಸವನ್ನು ಬಳಸಿ ಹೆಂಡತಿಯ ಮೃತದೇಹವನ್ನ 70 ತುಂಡುಗಳಾಗಿಸಿದ್ದ. ನಂತರ ಪ್ಲಾಸ್ಟಿಕ್ ಕವರ್‍ಗಳಲ್ಲಿ ದೇಹದ ತುಂಡುಗಳನ್ನ ತುಂಬಿ ಡೀಪ್ ಫ್ರೀಜರ್‍ನಲ್ಲಿ ಇಟ್ಟಿದ್ದ. ತನ್ನ 4 ವರ್ಷದ ಅವಳಿ ಮಕ್ಕಳಿಗೆ ಅಮ್ಮ ದೆಹಲಿಯಲ್ಲಿದ್ದಾರೆಂದು ರಾಜೇಶ್ ಸುಳ್ಳು ಹೇಳಿದ್ದ.
Advertisement
Advertisement
ಕೊಲೆ ಬಗ್ಗೆ ಗೊತ್ತಾಗಿದ್ದು ಹೇಗೆ?: ರಾಜೇಶ್ ಒಂದೊಂದೇ ಪ್ಲಾಸ್ಟಿಕ್ ಬ್ಯಾಗ್‍ಗಳನ್ನ ನಗರದ ಹೊರವಲಯದಲ್ಲಿ ಎಸೆಯಲು ಆರಂಭಿಸಿದ್ದ. 2 ತಿಂಗಳವರೆಗೆ ಈ ಭೀಕರ ಕೊಲೆ ಬೆಳಕಿಗೆ ಬಂದಿರಲಿಲ್ಲ. 2010ರ ಡಿಸೆಂಬರ್‍ನಲ್ಲಿ ಅನುಪಮಾ ಸಹೋದರ ಸುಜನ್ ಪ್ರಧಾನ್ ಮನೆಗೆ ಬಂದಾಗ ಅನುಪಮಾ ಇರಲಿಲ್ಲವಾದ್ದರಿಂದ ಅನುಮಾನಗೊಂಡಿದ್ದರು. ರಾಜೇಶ್‍ಗೆ ಈ ಬಗ್ಗೆ ಕೇಳಿದಾಗ ಆತ ಸರಿಯಾಗಿ ಉತ್ತರಿಸಿರಲಿಲ್ಲ. ಹಾಗೇ ಸುಜನ್‍ರನ್ನು ಮನೆಯೊಳಗೆ ಬರಲು ಬಿಟ್ಟಿರಲಿಲ್ಲ. ಹೀಗಾಗಿ ಸುಜನ್ ತನ್ನ ಸಹೋದರಿ ಕಾಣೆಯಾಗಿದ್ದಾರೆಂದು ಪೊಲಿಸ್ ಠಾಣೆಯಲ್ಲೂ ದೂರು ದಾಖಲಿಸಿದ್ದರು. ನಂತರ ಕಂಟೋನ್ಮೆಂಟ್ ಪೊಲೀಸರು ರಾಜೇಶ್ ಮನೆ ಮೇಲೆ ದಾಳಿ ಮಾಡಿದಾಗ ಲಾಕ್ ಆಗಿದ್ದ ಡೀಪ್ ಫ್ರೀಜರ್ ಪತ್ತೆಯಾಗಿತ್ತು. ಫ್ರೀಜರ್‍ನಿಂದ ಅನುಪಮಾ ಮೃತದೇಹದ ಪೀಸ್‍ಗಳನ್ನ ವಶಪಡಿಸಿಕೊಳ್ಳಲಾಗಿತ್ತು. ರಾಜೇಶ್ ಅದಾಗಲೇ ದೇಹದ ಕೆಲವು ಭಾಗಗಳನ್ನ ಮುಸ್ಸೋರಿ ರಸ್ತೆಯ ಚರಂಡಿಯಲ್ಲಿ ಎಸೆದಿದ್ದ ಎಂಬುದು ವಿಚಾರಣೆ ವೇಳೆ ಗೊತ್ತಾಗಿತ್ತು.
ಎರಡನೇ ಮುದವೆಯಾಗಿದ್ದ: ರಾಜೇಶ್‍ಗೆ ಕೋಲ್ಕತ್ತಾದ ಮಹಿಳೆಯೊಂದಿಗೆ ಅಕ್ರಮ ಸಂಬಂಧವಿದೆ ಎಂದು ಅನುಪಮಾ ನಂಬಿದ್ದರು. ಇದೇ ವಿಚಾರವಾಗಿ ಇಬ್ಬರ ಮಧ್ಯೆ ಆಗಾಗ ಜಗಳವಾಗ್ತಿತ್ತು. ಆದ್ರೆ ತನ್ನ ಪತ್ನಿ ಅನುಪಮಾಗೆ ಅಮೆರಿಕದಲ್ಲಿ ತನ್ನ ಸ್ನೇಹಿತನೊಂದಿಗೆ ಅಕ್ರಮ ಸಂಬಂಧವಿತ್ತು. ಹೀಗಾಗಿ ಆಕೆಯನ್ನು ಕೊಲೆ ಮಾಡಿದೆ ಎಂದು ರಾಜೇಶ್ ವಿಚಾರಣೆ ವೇಳೆ ಹೇಳಿಕೊಂಡಿದ್ದ. ಅಲ್ಲದೆ ತಾನು ಅಮೆರಿಕದಿಂದ ಬಂದ ನಂತರ ಕೋಲ್ಕತ್ತಾದಲ್ಲಿ ಮಹಿಳೆಯೊಬ್ಬಳನ್ನು ಮದುವೆಯಾಗಿರೋದಾಗಿ ಒಪ್ಪಿಕೊಂಡಿದ್ದ.
ಇಷ್ಟೆಲ್ಲಾ ಆದ್ರೂ ರಾಜೇಶ್ ಮಾತ್ರ ಯಾವುದೇ ಪಶ್ಚಾತ್ತಾಪವಿಲ್ಲದೆ, ಹೆಂಡತಿಯಿಂದ ಮುಕ್ತಿ ಸಿಕ್ಕಿದ್ದಕ್ಕೆ ನನಗೆ ನೆಮ್ಮದಿಯಾಗಿದೆ ಎಂದಿದ್ದ. ನಾನು ಏನೇ ಮಾಡಿದ್ರೂ ಮಕ್ಕಳಿಗಾಗಿ ಮಾಡಿದ್ದೇನೆ ಎಂದು ಹೇಳಿದ್ದ.
ಇದನ್ನು ಅತ್ಯಂತ ಅಪರೂಪದ ಪ್ರಕರಣ ಎಂದು ಪರಿಗಣಿಸಬೇಕು. ರಾಜೇಶ್‍ಗೆ ಮರಣದಂಡನೆ ವಿಧಿಸಬೇಕು ಎಂದು ಸುಜನ್ ಪ್ರಧಾನ್ ಪರ ವಕೀಲರಾದ ಎಸ್‍ಕೆ ಮೊಹಂತಿ ಕೋರ್ಟ್‍ನಲ್ಲಿ ವಾದಿಸಿದ್ದರು. ಇದೀಗ ರಾಜೇಶ್‍ಗೆ ಜೀವಾವಧಿ ಶಿಕ್ಷೆಯಾಗಿದ್ದು, ನಾವೀಗ ಉತ್ತಾರಾಖಂಡ್ ಹೈಕೋರ್ಟ್ ಮೊರೆ ಹೋಗಿ ರಾಜೇಶ್‍ಗೆ ಮರಣದಂಡನೆ ನೀಡಬೇಕೆಂದು ಮನವಿ ಸಲ್ಲಿಸಲಿದ್ದೇವೆ ಎಂದು ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.