Connect with us

Latest

ಸಿಎಂ, ಗವರ್ನರ್ ನಡುವೆ ಹೆಲ್ಮೆಟ್ ವಾರ್- ಟ್ವಿಟ್ಟರ್‌ನಲ್ಲಿ ಒಬ್ಬರಿಗೊಬ್ಬರು ಟಾಂಗ್

Published

on

Share this

ಪುದುಚೇರಿ: ಹೆಲ್ಮೆಟ್ ಧರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪುದುಚೇರಿ ಮುಖ್ಯಮಂತ್ರಿ ನಾರಾಯಣಸ್ವಾಮಿ ಹಾಗೂ ಉಪರಾಜ್ಯಪಾಲೆ ಕಿರಣ್ ಬೇಡಿ ನಡುವಿನ ಟ್ವೀಟ್ ವಾರ್ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಕಿರಣ್ ಬೇಡಿ ಹಾಗೂ ನಾರಾಯಣಸ್ವಾಮಿ ಇಬ್ಬರೂ ಸಹ ವಿವಿಧ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಇದೀಗ ಹೆಲ್ಮೆಟ್ ಕುರಿತು ಒಬ್ಬರಿಗೊಬ್ಬರು ಟ್ವೀಟ್ ಮಾಡುವ ಮೂಲಕ ಚರ್ಚೆಗೆ ಕಾರಣವಾಗಿದ್ದಾರೆ.

ನಾರಾಯಣಸ್ವಾಮಿಯವರು ಹೆಲ್ಮೆಟ್ ಧರಿಸದೆ ಚುನಾವಣಾ ಪ್ರಚಾರದ ರ್ಯಾಲಿಯಲ್ಲಿ ಭಾಗವಹಿಸಿದ್ದನ್ನು ಕಂಡು ಕಿರಣ್ ಬೇಡಿ ಕಿಡಿಕಾರಿದ್ದರು. ಈ ಕುರಿತು ಟ್ವೀಟ್ ಮಾಡಿ ಮೋಟಾರು ವಾಹನಗಳ ಕಾಯ್ದೆ ಉಲ್ಲಂಘನೆಯಾಗಿದೆ ಎಂದು ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ನಾರಾಯಣಸ್ವಾಮಿಯವರ ಫೋಟೋವನ್ನು ಟ್ವೀಟ್ ಮಾಡಿದ್ದರು.

ಸುಪ್ರೀಂ ಕೋರ್ಟ್, ಮದ್ರಾಸ್ ಹೈ ಕೋರ್ಟ್ ನಿರ್ದೇಶನ ಹಾಗೂ ಮೋಟಾರು ವಾಹನ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿರುವ ಸಿಎಂ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಈ ಕುರಿತು ಪುದುಚೇರಿ ಪೊಲೀಸ್ ಮಹಾನಿರ್ದೇಶಕ ಬಾಲಾಜಿ ಶ್ರೀವಾಸ್ತವ್ ಅವರಿಗೆ ನಿವೃತ್ತ ಐಪಿಎಸ್ ಅಧಿಕಾರಿಯೂ ಆಗಿರುವ ಕಿರಣ್ ಬೇಡಿ ನಿರ್ದೇಶನ ನೀಡಿದ್ದಾರೆ.

ಕಿರಣ್ ಬೇಡಿ ಅವರು ಪುದುಚೇರಿ ಡಿಜಿಪಿ ಹಾಗೂ ನಿತಿನ್ ಗಡ್ಕರಿ ಅವರಿಗೆ ಟ್ವೀಟ್ ಮಾಡಿದ್ದಾರೆ. ಪುದುಚೇರಿ ಮುಖ್ಯಮಂತ್ರಿ ಕಾಮರಾಜ್ ನಗರದಲ್ಲಿ ಹೆಲ್ಮೆಟ್ ಇಲ್ಲದೆ ಪ್ರಚಾರ ಮಾಡುತ್ತಿರುವ ಫೋಟೋವನ್ನು ಹಾಕಿದ್ದಾರೆ.

ಇದಕ್ಕೆ ಪ್ರತಿಯಾಗಿ ಸಿಎಂ ನಾರಾಯಣಸ್ವಾಮಿ ಸಹ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಉಪ ರಾಜ್ಯಪಾಲೆ ಕಿರಣ್ ಬೇಡಿ ಅವರು 2017ರಲ್ಲಿ ಹೆಲ್ಮೆಟ್ ಇಲ್ಲದೆ ಸ್ಕೂಟರ್‍ನಲ್ಲಿ ಸಂಚರಿಸುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಅಧಿಕೃತ ಸಂವಹನಕ್ಕಾಗಿ ಟ್ವಿಟ್ಟರ್ ಬಳಸುವ ಮೂಲಕ ಮದ್ರಾಸ್ ಹೈ ಕೋರ್ಟ್‍ನ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಉಪರಾಜ್ಯಪಾಲೆ ಕಿರಣ್ ಬೇಡಿ ಅವರು ಮತ್ತೊಬ್ಬರಿಗೆ ಬೋಧಿಸುವ ಮುನ್ನ ತಾವು ತಿಳಿದುಕೊಳ್ಳಲಿ ಎಂದು ಟ್ವೀಟ್‍ನಲ್ಲಿ ಸಾಲುಗಳನ್ನು ಬರೆದಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿಎಂ ನಾರಾಯಣಸ್ವಾಮಿ, ಉಪರಾಜ್ಯಪಾಲರು ವಸ್ತು ಸ್ಥಿತಿಯನ್ನು ಅರಿಯಬೇಕು. ಚುನಾವಣೆ ನಡೆಯುತ್ತಿದೆ. ಚುನಾವಣೆಗಳನ್ನು ಶಾಂತಿಯುತವಾಗಿ ನಡೆಸುವುದು ಚುನಾವಣಾ ಆಯೋಗದ ಕರ್ತವ್ಯ ಎಂದರು.

ನಿನ್ನೆ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ್ದರಿಂದ ಬೈಕ್ ರ್ಯಾಲಿ ಆಯೋಜಿಸಲಾಗಿತ್ತು. ಈ ವೇಳೆ ನಾನೂ ಕಾರ್ಯಕರ್ತರೊಂದಿಗೆ ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ್ದೆ. ನಾನು ಹೆಲ್ಮೆಟ್ ಧರಿಸಿದರೆ ಮುಖ್ಯಮಂತ್ರಿ ಬರುತ್ತಿದ್ದಾರೆ ಎಂದು ಯಾರಿಗೆ ತಿಳಿಯುತ್ತದೆ. ಅಲ್ಲದೆ ಹೆಲ್ಮೆಟ್ ಧರಿಸದ್ದನ್ನು ಟ್ವೀಟ್ ಮೂಲಕ ಡಿಜಿಪಿಗೆ ತಿಳಿಸಿದ್ದಾರೆ. ಆದರೆ ಅಧಿಕೃತ ಸಂವಹನಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಬಾರದು ಎಂದು ಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ. ಕಿರಣ್ ಬೇಡಿಯವರು ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement