ಭಾರತದ ಜೊತೆ ಪರೋಕ್ಷ ಯುದ್ಧ ಮಾಡ್ತಿದೆ – ಉಗ್ರರನ್ನು ರಫ್ತು ಮಾಡೋ ದೇಶ ಪಾಕಿಸ್ತಾನ ಎಂದ ಮೋದಿ

Public TV
3 Min Read
lex fridman pm modi podcast narendra modi says pakistan is waging a proxy war with india 1

ನವದೆಹಲಿ: ಪಾಕಿಸ್ತಾನವು (Pakistan) ಸಾಮರಸ್ಯದ ಸಹಬಾಳ್ವೆಯನ್ನು ಆಯ್ಕೆ ಮಾಡದೇ ಭಾರತದ (India) ಜೊತೆ ಪರೋಕ್ಷ ಯುದ್ಧವನ್ನು ನಡೆಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.

ಖ್ಯಾತ ಪಾಡ್‌ಕ್ಯಾಸ್ಟರ್ ಲೆಕ್ಸ್ ಫ್ರಿಡ್‌ಮನ್ (Lex Fridman) ಅವರು ಮೋದಿ ಅವರನ್ನು ಸಂದರ್ಶಿಸಿದ್ದಾರೆ. ದೀರ್ಘ ಅವಧಿಯ ಸಂದರ್ಶನದಲ್ಲಿ ಎರಡೂ ರಾಷ್ಟ್ರಗಳು ಶಾಂತಿ ಮತ್ತು ಸಾಮರಸ್ಯದಿಂದ ಸಹಬಾಳ್ವೆ ನಡೆಸಬಹುದೇ? ಈ ಬಗ್ಗೆ ಭವಿಷ್ಯದ ದೃಷ್ಟಿಕೋನವನ್ನು ಹಂಚಿಕೊಳ್ಳಬಹುದೇ ಎಂದು ಪ್ರಶ್ನಿಸಿದರು.

ಈ ಪ್ರಶ್ನೆಗೆ ಮೋದಿ ಭಾರತ, ಪಾಕ್‌ ವಿಭಜನೆ ಕಥೆ ಮತ್ತು ನಂತರದ ರಕ್ತಪಾತದ ಹೃದಯಸ್ಪರ್ಶಿ ವಿಚಾರವನ್ನು ಹಂಚಿಕೊಂಡರು. ಭಾರವಾದ ಹೃದಯದೊಂದಿಗೆ ಭಾರತೀಯರು ನೋವಿನ ವಾಸ್ತವವನ್ನು ಒಪ್ಪಿಕೊಂಡರು. ಗಾಯಗೊಂಡ ಜನರು ಮತ್ತು ಶವಗಳಿಂದ ತುಂಬಿದ ರೈಲುಗಳು ಪಾಕಿಸ್ತಾನದಿಂದ ಬರತೊಡಗಿತು. ಅದು ಭಯಾನಕ ದೃಶ್ಯವಾಗಿತ್ತು. ತಮ್ಮದೇ ಆದ ದಾರಿಯನ್ನು ಕಂಡುಕೊಂಡ ನಂತರ ಅವರು ಬದುಕುತ್ತಾರೆ ಮತ್ತು ಬದುಕಲು ಬಿಡುತ್ತಾರೆ ಎಂದು ನಾವು ನಿರೀಕ್ಷಿಸಿದ್ದೆವು. ಆದರೆ ಅವರು ಸಾಮರಸ್ಯದ ಸಹಬಾಳ್ವೆಯನ್ನು ಆಯ್ಕೆ ಮಾಡಲಿಲ್ಲ ಎಂದು ಉತ್ತರಿಸಿದರು. ಇದನ್ನೂ ಓದಿ: ಆರ್‌ಎಸ್‌ಎಸ್‌ಗಿಂತ ದೊಡ್ಡ ಸ್ವಯಂಸೇವ ಸಂಘ ವಿಶ್ವದಲ್ಲಿಲ್ಲ: ಮೋದಿ ಗುಣಗಾನ


ಪಾಕಿಸ್ತಾನ ಯಾವಾಗಲೂ ಭಾರತದೊಂದಿಗೆ ಭಿನ್ನಾಭಿಪ್ರಾಯ ಹೊಂದಲು ನಿರ್ಧರಿಸಿತು. ನಮ್ಮ ವಿರುದ್ಧ ಪರೋಕ್ಷ ಯುದ್ಧವನ್ನು ನಡೆಸಿದ್ದಾರೆ. ರಕ್ತಪಾತ ಮತ್ತು ಭಯೋತ್ಪಾದನೆಯನ್ನು ರಫ್ತು ಮಾಡುವ ಯಾವ ದೇಶ ಅಭಿವೃದ್ಧಿ ಹೊಂದುತ್ತದೆ? ಸೆಪ್ಟೆಂಬರ್ 11 ರಂದು ಅಮೆರಿಕದಲ್ಲಿ ನಡೆದ ದಾಳಿಯ ಸೂತ್ರಧಾರ ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದನು. ಒಂದು ರೀತಿಯಲ್ಲಿ ಭಯೋತ್ಪಾದನೆ ಮತ್ತು ಭಯೋತ್ಪಾದಕ ಮನಸ್ಥಿತಿ ಪಾಕಿಸ್ತಾನದಲ್ಲಿ ಆಳವಾಗಿ ಬೇರೂರಿದೆ. ಇದು ಭಾರತಕ್ಕೆ ಮಾತ್ರವಲ್ಲ ಜಗತ್ತಿನ ಭಯೋತ್ಪಾದನೆಯ ಕೇಂದ್ರಬಿಂದು ಪಾಕಿಸ್ತಾನ ಎಂದು ದೂರಿದರು.

ಪಾಕಿಸ್ತಾನದೊಂದಿಗೆ ಸಂಬಂಧಗಳನ್ನು ಸುಧಾರಿಸಲು ತಾನು ಮಾಡಿದ ಪ್ರಯತ್ನಗಳನ್ನು ಹಂಚಿಕೊಂಡ ಅವರು, ಶಾಂತಿಯನ್ನು ಅರಸುತ್ತಾ ನಾನು ವೈಯಕ್ತಿಕವಾಗಿ ಲಾಹೋರ್‌ಗೆ ಪ್ರಯಾಣ ಬೆಳೆಸಿದ್ದೆ. ನಾನು ಪ್ರಧಾನಿಯಾದಾಗ ಪಾಕಿಸ್ತಾನವನ್ನು ನನ್ನ ಪ್ರಮಾಣವಚನ ಸಮಾರಂಭಕ್ಕೆ ವಿಶೇಷವಾಗಿ ಆಹ್ವಾನಿಸಿದ್ದೆ. ಈ ಪ್ರಯತ್ನದಿಂದ ನಾವು ಹೊಸ ಪುಟವನ್ನು ತೆರೆಯಬಹುದು ಎಂದು ಆಶಿಸಿದ್ದೆ. ಪಾಕಿಸ್ತಾನವನ್ನು ಆಹ್ವಾನಿಸುವ ಮೂಲಕ ಶಾಂತಿ ಮತ್ತು ಸಾಮರಸ್ಯದ ಬಗ್ಗೆ ಜಗತ್ತಿಗೆ ಭಾರತ ಸ್ಪಷ್ಟ ಸಂದೇಶವನ್ನು ರವಾನಿಸಿತು. ಆದರೆ ನಮಗೆ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ ಬೇಸರ ವ್ಯಕ್ತಪಡಿಸಿದರು.

ಪಾಕಿಸ್ತಾನದ ಜನರು ಸಹ ಶಾಂತಿಯನ್ನು ಬಯಸುತ್ತಿದ್ದಾರೆ ಎಂದು ನಾನು ನಂಬುತ್ತೇನೆ. ಯಾಕೆಂದರೆ ಮಕ್ಕಳನ್ನು ಕೊಲ್ಲುವ ಮತ್ತು ಲೆಕ್ಕವಿಲ್ಲದಷ್ಟು ಜೀವಗಳನ್ನು ನಾಶಮಾಡುವ ನಿರಂತರ ಭಯೋತ್ಪಾದನೆಯಿಂದ ಅವರು ಬೇಸತ್ತಿದ್ದಾರೆ. ಭವಿಷ್ಯದಲ್ಲಿ ಅವರು ಶಾಂತಿಯ ಮಾರ್ಗವನ್ನು ಆರಿಸಿಕೊಳ್ಳಬಹುದು ಎಂದು ಮೋದಿ ಆಶಿಸಿದರು.

ಲೆಕ್ಸ್ ಫ್ರಿಡ್‌ಮನ್ ಒಬ್ಬ ಸಂಶೋಧನಾ ವಿಜ್ಞಾನಿಯಾಗಿದ್ದು ತಮ್ಮ ಪಾಡ್‌ಕ್ಯಾಸ್ಟ್‌ಗಳಲ್ಲಿ, ವಿವಿಧ ಕ್ಷೇತ್ರಗಳ ಹಲವಾರು ವ್ಯಕ್ತಿಗಳ ಜೊತೆ ದೀರ್ಘವಾದ ಸಂದರ್ಶನ ನಡೆಸುತ್ತಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅರ್ಜೆಂಟೀನಾದ ಪ್ರಧಾನಿ ಜೇವಿಯರ್ ಮಿಲೀ ಅವರಂತಹ ರಾಜಕೀಯ ನಾಯಕರು ಹಾಗೂ ಎಲೋನ್ ಮಸ್ಕ್, ಮಾರ್ಕ್ ಜುಕರ್‌ಬರ್ಗ್, ಜೆಫ್ ಬೆಜೋಸ್, ಸ್ಯಾಮ್ ಆಲ್ಟ್‌ಮನ್, ಮ್ಯಾಗ್ನಸ್ ಕಾರ್ಲ್ಸನ್ ಮತ್ತು ಯುವಲ್ ನೋಹ್ ಹರಾರಿ ಅವರಂತಹ ಪ್ರಮುಖ ವ್ಯಕ್ತಿಗಳನ್ನು ತಮ್ಮ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿಸಿದ್ದಾರೆ.

 

Share This Article