Connect with us

Dharwad

ಬಿಎಸ್‍ವೈ, ಶೆಟ್ಟರ್ ಚುನಾವಣೆಯಲ್ಲಿ ಲಿಂಗಾಯತರಲ್ಲ ಎಂದು ಹೇಳಿಕೊಳ್ಳಲಿ: ನಿಜಗುಣಾನಂದ ಸ್ವಾಮೀಜಿ

Published

on

– ಪೇಜಾವರ ಶ್ರೀ ಲಿಂಗಾಯತ ಧರ್ಮಕ್ಕೆ ಮಾರ್ಗದರ್ಶನ ಮಾಡೋದು ಬೇಡ ಎಂದ ಸ್ವಾಮೀಜಿ

ಧಾರವಾಡ: ಅಧಿಕಾರಕ್ಕೊಸ್ಕರ ನಾನು ಲಿಂಗಾಯತ ಎಂದು ಹೇಳಿಕೊಳ್ಳುತ್ತಿರುವ ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ್ ಮುಂದಿನ ಚುನಾವಣೆಯಲ್ಲಿ ನಾವು ಲಿಂಗಾಯತರಲ್ಲ ಎಂದು ಚುನಾವಣೆಗೆ ಹೋಗಲಿ ನೋಡೋಣ ಎಂದು ಧಾರವಾಡದ ಮುಂಡರಗಿ ಬೈಲೂರು ಮಠದ ನಿಜಗುಣಾನಂದ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

ಲಿಂಗಾಯತರಾಗಿ ಅಧಿಕಾರವನ್ನು ಪಡೆದುಕೊಂಡಿರುವ ಯಡಿಯೂರಪ್ಪ ಅವರಾಗಲೀ, ಜಗದೀಶ್ ಶೆಟ್ಟರ್ ಅವರಾಗಲೀ ಲಿಂಗಾಯತ ಎಂಬ ಹೆಸರಿನ ಮೇಲೆ ನೀವು ಅಧಿಕಾರವನ್ನು ಅನುಭವಿಸಿರುವಂತವರು. ನೀವು ಲಿಂಗಾಯತ ಧರ್ಮಕ್ಕೆ ನ್ಯಾಯ ಕೊಡಿ. ಇಲ್ಲವಾದರೆ ನೀವು ಮುಂದಿನ ಸಲ ಚುನಾವಣೆಗೆ ನಿಲ್ಲುವಾಗ ಲಿಂಗಾಯತರಲ್ಲ ಎಂದು ಚುನಾವಣೆಗೆ ಹೋಗಿ ಎಂದು ಸ್ವಾಮೀಜಿ ಹೇಳಿದ್ದಾರೆ.

ಇದೇ ವೇಳೆ ಪೇಜಾವರ ಶ್ರೀ ಹೇಳಿಕೆಗೆ ಪ್ರತಿಕ್ರಿಯಿಸಿದ ಸ್ವಾಮೀಜಿ, ಈ ದೇಶದಲ್ಲಿ ಹಿಂದೂ ಧರ್ಮವೇ ಇಲ್ಲ ಎಂದು ಪೂಜ್ಯರು ತಿಳಿದುಕೊಳ್ಳಲಿ. ಪೇಜಾವರ ಶ್ರೀಗಳು ಒಂದು ಮತಕ್ಕೆ ಸೇರಿದವರು. ಅವರ ಸಮಾಜವನ್ನು ಬೆಳೆಸುವುದು ಅವರ ಕರ್ತವ್ಯ. ಆದರೆ ಎಲ್ಲದಕ್ಕೂ ನಾವೇ ಎಂದು ಹೇಳಿಕೊಳ್ಳೋದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದ್ರು.

ಮಾರ್ಗದರ್ಶನ ಬೇಡ: ಪೇಜಾವರ ಶ್ರೀಗಳು ನಮ್ಮ ಲಿಂಗಾಯತ ಧರ್ಮಕ್ಕೆ ಮಾರ್ಗದರ್ಶನ ಮಾಡೊದು ಬೇಡ. ಶ್ರೀಗಳು ತಮ್ಮ ಧರ್ಮವನ್ನ ಬೆಳೆಸೋದು ಅವರ ಕರ್ತವ್ಯ. ಆದರೆ ಎಲ್ಲ ಸಮಾಜಗಳ ನೇತಾರ ಎಂದು ಪ್ರತಿಬಿಂಬಿಸುವುದು ಮಹಾಪರಾಧ. ನಮಗೆ ಇಲ್ಲಿ ಚಾತುವರ್ಣದ ಮನಸ್ಸು ಎದ್ದು ಕಾಣುತ್ತಿದೆ. ಅವರ ಮಾರ್ಗದರ್ಶನ ನಮಗೆ ಬೇಡ. ನಮ್ಮ ಸಮಾಜದಲ್ಲಿ 3000 ವಿರಕ್ತ ಸ್ವಾಮೀಜಿಗಳಿದ್ದಾರೆ. ನಮಗೆ ಸಹಾಯ ಮಾಡಬೇಕಾದರೆ ಸರ್ಕಾರಕ್ಕೆ ಸ್ವತಂತ್ರ ಧರ್ಮದ ಬಗ್ಗೆ ಒತ್ತಾಯ ಮಾಡಲಿ ಎಂದು ತಿರುಗೇಟು ನೀಡಿದರು.

ಹೋರಾಟಕ್ಕೆ ಬೆಂಬಲ ನೀಡಲಿ: ಲಿಂಗಾಯತ ಧರ್ಮಕ್ಕೆ ತನ್ನದೇ ಆದ ಸಿದ್ಧಾಂತ ಇದೆ. ಪೇಜಾವರ ಶ್ರೀಗಳು ಲಿಂಗಾಯತ ಹೋರಾಟಕ್ಕೆ ಅವಶ್ಯಕತೆ ಇಲ್ಲ. ಪೇಜಾವರ ಶ್ರೀಗಳು ಗೊಂದಲದಲ್ಲಿ ಇದ್ದಾರೆ. ಅವರು ನಡುವೆ ಮೂಗು ತೂರಿಸೋದು ಬಿಟ್ಟು ಹೋರಾಟಕ್ಕೆ ಬೆಂಬಲ ನೀಡಲಿ. ಸಾಮಾಜಿಕ ವ್ಯವಸ್ಥೆಯಲ್ಲಿ ಮಾರ್ಗದರ್ಶನ ನೀಡಲಿ. ಇಲ್ಲ ಅಂದ್ರೆ ಅವರು ಈ ರೀತಿಯ ಹೇಳಿಕೆಯನ್ನು ನೀಡೋದು ಬಿಡಲಿ. ನಮಗೆ ಅವರ ಮಾರ್ಗದರ್ಶನದ ಅವಶ್ಯಕತೆ ಇಲ್ಲ. ಗೊತ್ತಿದ್ರೂ ಗೊತ್ತಿಲ್ಲದಂತೆ ಇರೋದು ಬೇಡ ಅಂತ ನಿಜಗುಣಾನಂದ ಸ್ವಾಮೀಜಿ ಹೇಳಿದ್ರು.

ಮಂಗಳವಾರದಂದು ಪೇಜಾವರ ಶ್ರೀ ಲಿಂಗಾಯತ ಮತ್ತು ವೀರಶೈವ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದರು. ವಿವಾದ ತಾರಕಕ್ಕೇರಿದೆ, ಆದರೆ ಲಿಂಗಾಯತರೇಕೆ ಹಿಂದೂಗಳಲ್ಲ? ನಾವು ಒಂದಾಗಿ ಇರುವುದು ಉತ್ತಮ. ಹಿಂದೂ ಧರ್ಮದೊಳಗೆ ನೀವು ಜೊತೆಗಿದ್ದರೆ ಲಿಂಗಾಯತ ಸಮಾಜಕ್ಕೆ ಹೆಚ್ಚಿನ ಬಲ ಬರುತ್ತದೆ. ಶಿವನೇ ಸರ್ವೋತ್ತಮ ಎನ್ನುವ ನೀವು ಪಂಚಾಕ್ಷರಿ ಜಪ, ಲಿಂಗಪೂಜೆ ಮಾಡುವುದರಿಂದ, ಇದನ್ನು ಒಪ್ಪಿರುವುದರಿಂದ ನೀವು ಬೇರೆಯಾಗುವುದು ಹೇಗೆ ಎಂದು ಪ್ರಶ್ನಿಸಿದ್ದರು.

ಹಿಂದೂಗಳಲ್ಲ ಅನ್ನೋದು ಹೇಗೆ? ಏಕ ದೇವತಾವಾದ ಎಲ್ಲರೂ ಒಪ್ಪಿದ್ದಾರೆ. ಎಲ್ಲಾ ಹಿಂದೂಗಳು ಶಿವನನ್ನು ಆರಾಧಿಸುತ್ತಾರೆ. ಹಾಗಾದ್ರೆ ಹಿಂದೂಗಳು ಯಾರು? ನನಗೆ ಉತ್ತರ ಕೊಡಿ. ನಮ್ಮನ್ನು ಬಿಟ್ಟು ನೀವು ದೂರ ಹೋಗದಿರಿ. ನೀವು ನನ್ನ ಸಹೋದರರಿದ್ದಂತೆ. ನಾನು ಸಲಹೆ ಕೊಡುತ್ತೇನೆ ಎಂದು ಪೇಜಾವರ ಶ್ರೀ ಹೇಳಿದ್ದರು. ಬಸವಣ್ಣನವರ ದುರಂತಕ್ಕೆ ಬ್ರಾಹ್ಮಣರು ಕಾರಣರಲ್ಲ. ಈ ವಾದವೂ ಸರಿಯಲ್ಲ. ಹಳೇ ಕಾಲದ ತಪ್ಪಿಗೆ ಈಗಿನವರ ಮೇಲೆ ಆರೋಪ ಎಷ್ಟು ಸರಿ? ಮಾಧ್ವರಿಂದ ಬಸವಣ್ಣರಿಗೆ ಏನೂ ಅನ್ಯಾಯವಾಗಿಲ್ಲ. ನನ್ನದಿದು ಪ್ರೇಮದ ಸಲಹೆ. ಹಿಂದೂ ಧರ್ಮ ಬಿಟ್ಟು ಹೋಗಬೇಡಿ ಎಂದು ಹೇಳಿದ್ದರು.

Click to comment

Leave a Reply

Your email address will not be published. Required fields are marked *